ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಪಾದಯಾತ್ರೆ ಯಶಸ್ಸಿಗಾಗಿ ಕೆಂಕೇರಮ್ಮಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ

ಮೊದಲ ದಿನ ದೊಡ್ಡಾಲಹಳ್ಳಿಯಲ್ಲಿ ವಾಸ್ತವ್ಯ
Last Updated 9 ಜನವರಿ 2022, 5:09 IST
ಅಕ್ಷರ ಗಾತ್ರ

ಕನಕಪುರ: ಕಾಂಗ್ರೆಸ್‌ನಿಂದ ನಡೆಯುತ್ತಿರುವ ಮೇಕೆದಾಟು ಪಾದಯಾತ್ರೆಯು ಯಾವುದೇ ವಿಘ್ನವಿಲ್ಲದೆ ಯಶಸ್ವಿಯಾಗಿ ನಡೆಯಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಶನಿವಾರ ತಮ್ಮ ಮನೆ ದೇವರಾದ ಕೆಂಕೇರಮ್ಮ ಸೇರಿದಂತೆ ಕಬ್ಬಾಳಮ್ಮ ದೇವಾಲಯ, ಕನಕಪುರದಲ್ಲಿನ ಮಸೀದಿ ಹಾಗೂ ಕುಪ್ಪೆದೊಡ್ಡಿಯಲ್ಲಿ ಚರ್ಚ್‌ಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ‘ನಾವು ಯಾವುದೇ ಒಳ್ಳೆಯ ಕೆಲಸ ಮಾಡುವಾಗ ದೇವರ ಪೂಜೆ ಸಲ್ಲಿಸುತ್ತೇವೆ. ಅದೇ ಕಾರಣದಿಂದ ಮನೆ ದೇವರಿಗೆ ಪೂಜೆ ಸಲ್ಲಿಸಿ, ಮಸೀದಿ, ಚರ್ಚ್‌ಗಳಿಗೂ ಭೇಟಿ ನೀಡಿ ಪ್ರಾರ್ಥನೆ ಮಾಡಿದ್ದೇನೆ. ದೇವರ ದರ್ಶನ ಮಾಡಲು ಬೆಟ್ಟದ ಮೇಲಕ್ಕೆ ನಡೆದುಕೊಂಡು ಹೋಗುತ್ತೇವೆ. ಅದೇ ರೀತಿ ಕಾವೇರಮ್ಮನ ಆಶೀರ್ವಾದ ಪಡೆಯಲು ಪಾದಯಾತ್ರೆ ಮಾಡುತ್ತಿದ್ದೇವೆ’ ಎಂದರು.

ದೇವಾಲಯಗಳಲ್ಲಿ ಪೂಜೆ ನೆರವೇರಿಸಿ ನಂತರ ಮೇಕೆದಾಟು ಅಣೆಕಟ್ಟೆ ನಿರ್ಮಾಣ ಮಾಡುತ್ತಿರುವ ಸಂಗಮಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಯಶಸ್ವಿಗೊಳಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದರು.

ಇದೇ ವೇಳೆ ರಾಮನಗರಎಸ್‌.ಪಿ ಗಿರೀಶ್‌ ಅವರು ಸಂಗಮಕ್ಕೆ ಭೇಟಿ ನೀಡಿ ಶಿವಕುಮಾರ್‌ ಅವರನ್ನು ಭೇಟಿ ಅರ್ಧಗಂಟೆಗೂ ಹೆಚ್ಚು ಕಾಲ ಪ್ರತ್ಯೇಕವಾಗಿ ಪಾದಯಾತ್ರೆ ಸಂಬಂಧ ಮಾತುಕತೆ ನಡೆಸಿದರು. ಈ ವೇಳೆ ಮಾಧ್ಯಮದವರಿಗೆ ಅವಕಾಶವಿರಲಿಲ್ಲ.

ನಂತರ ಗಿರೀಶ್‌ ಮಾಧ್ಯಮದವರೊಂದಿಗೆ ಮಾತನಾಡಿ, ಕೋವಿಡ್‌ ಕಾರಣ ರಾಜ್ಯದಲ್ಲಿ ವಾರಾಂತ್ಯದ ಕರ್ಫ್ಯೂ ಇದೆ. ಅದೇ ರೀತಿ ರಾಮನಗರ ಜಿಲ್ಲೆಯಲ್ಲೂ ಕರ್ಫ್ಯೂ ಇದೆ. ಪಾದಯಾತ್ರೆ ನಡೆಸಲು ಅವಕಾಶವಿಲ್ಲ. ಅದನ್ನು ಉಲ್ಲಂಘಿಸಿ ಪಾದಯಾತ್ರೆ ನಡೆಸಿದರೆ ಕಾನೂನು ಕ್ರಮ ವಹಿಸಲಾಗುವುದು ಎಂದಷ್ಟೇ ತಿಳಿಸಿ ಅಲ್ಲಿಂದ ನಿರ್ಗಮಿಸಿದರು.

ನಂತರ ಶಿವಕುಮಾರ್‌ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಯಾವುದೇ ಕೋವಿಡ್‌ ಕೇಸುಗಳಿಲ್ಲ. ಆದರೂ, ಬಿಜೆಪಿ ಸರ್ಕಾರ ನಮ್ಮ ಪಾದಯಾತ್ರೆ ತಡೆಗಟ್ಟಲು ಜಿಲ್ಲಾಧಿಕಾರಿ ಮೂಲಕ ಕರ್ಫ್ಯೂ ವಿಧಿಸಿದೆ. ಇದು ಕಾನೂನುಬಾಹಿರ. ಜಿಲ್ಲಾಧಿಕಾರಿ ತೆಗೆದುಕೊಂಡಿರುವ ನಿರ್ಣಯ ತಪ್ಪಾಗಿದ್ದು, ಅವರ ವಿರುದ್ಧವೇ ಕ್ರಮ ಕೈಗೊಳ್ಳಬೇಕಿದೆ ಎಂದುದೂರಿದರು.

ನಾವು ಪಾದಯಾತ್ರೆ ನಡೆಸಲು ಜಿಲ್ಲಾಡಳಿತದಿಂದ ಅನುಮತಿ ಕೇಳಿಲ್ಲ. ಜನರಿಗಾಗಿ ಈ ಪಾದಯಾತ್ರೆ ನಡೆಸುತ್ತಿದ್ದು, ಅದನ್ನು ತಡೆಯಲು ಯಾರಿಂದಲೂ ಸಾದ್ಯವಿಲ್ಲ. ನಮ್ಮ ಕೆಲಸ ನಾವು ಮಾಡುತ್ತೇವೆ. ಅವರ ಕೆಲಸ ಅವರು ಮಾಡಲಿ. ನಾವು ಪಾದಯಾತ್ರೆಯನ್ನು ಭಾನುವಾರ ಬೆಳಿಗ್ಗೆ ಪ್ರಾರಂಭಿಸುತ್ತೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT