ಸೋಮವಾರ, ಡಿಸೆಂಬರ್ 9, 2019
17 °C

ತಿಂಗಳ ನಾಲ್ಕನೆ ಮಂಗಳವಾರ ಮಾನಸಿಕ ಆರೋಗ್ಯ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ಪ್ರತಿ ತಿಂಗಳ ನಾಲ್ಕನೆ ಮಂಗಳವಾರ ಮಾನಸಿಕ ಆರೋಗ್ಯ ಶಿಬಿರ ನಡೆಸಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕೆ.ಪಿ.ರಾಜು ತಿಳಿಸಿದರು.

ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ರಾಮನಗರ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಇವರ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಸಾರ್ವಜನಿಕರಿಗೆ ಅನುಕೂಲವಾಗುವಂತೆ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಮನೋರೋಗಕ್ಕೆ ಸಂಬಂಧಿಸಿದ ತಜ್ಞ ವೈದ್ಯರು ಕಾರ್ಯನಿರ್ವಹಿಸುತ್ತಾರೆ. ಇದರ ಸದುಪಯೋಗವಾಗಬೇಕು’ ಎಂದರು.

ಮನೋರೋಗ ತಜ್ಞ ಡಾ. ಎ.ಎಂ.ಆದರ್ಶ ಅವರು ಆತ್ಮಹತ್ಯೆ ತಡೆಗಟ್ಟುವ ಕುರಿತು ಉಪನ್ಯಾಸ ನೀಡಿ, ‘ಆತ್ಮಹತ್ಯೆಯ ಅಂಕಿಅಂಶಗಳಂತೆ ಸರ್ಕಾರದ ವರದಿಗಳ ಪ್ರಕಾರ 1 ಗಂಟೆಗೆ 15 ಆತ್ಮಹತ್ಯೆಗಳು ಉಂಟಾಗುತ್ತದೆ. ಕರ್ನಾಟಕವು ಆತ್ಮಹತ್ಯೆ ಪ್ರಕರಣಗಳಲ್ಲಿ ದೇಶದಲ್ಲಿ ನಾಲ್ಕನೆ ಸ್ಥಾನದಲ್ಲಿದೆ. ಮಹಾನಗರಗಳಲ್ಲಿ ಬೆಂಗಳೂರು 2ನೇ ಸ್ಥಾನದಲ್ಲಿದೆ. ವಿಶ್ವದ ಒಟ್ಟು ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ 17 ಭಾರತದಲ್ಲಿ ದಾಖಲಾಗುತ್ತವೆ. ಆತ್ಮಹತ್ಯೆಗೆ ಖಿನ್ನತೆಯು ಬಹುಮುಖ್ಯ ಕಾರಣವಾಗಿದೆ. ಖಿನ್ನತೆ ಅಥವಾ ಬೇಜಾರು ಖಾಯಿಲೆಗೆ ಚಿಕಿತ್ಸೆ ನೀಡಿದರೆ ಆತ್ಮಹತ್ಯೆ ತಡೆಗಟ್ಟಬಹುದು’ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಎಂ ದಕ್ಷಿಣಮೂರ್ತಿ ಮಾತನಾಡಿ, ‘ಸಮುದಾಯದಲ್ಲಿ ಒಂಟಿತನ, ಪದೇ ಪದೇ ಸಾವಿನ ಬಗ್ಗೆ ಮಾತನಾಡುವುದು. ನಿರಾಶವಾದ, ಹಸಿವು ನಿದ್ರೆಗಳಲ್ಲಿ ಏರು ಪೇರು, ಮಾದಕ ಪದಾರ್ಥಗಳ ಹೆಚ್ಚಿನ ಬಳಕೆ ಮುಂತಾದವುಗಳು ಕಂಡುಬಂದರೆ ಅದನ್ನು ಪತ್ತೆಹಚ್ಚಿ ಮಾಹಿತಿ ನೀಡಬೇಕು’ ಎಂದು ಆಶಾ ಕಾರ್ಯಕರ್ತೆಯರಿಗೆ ಕಿವಿಮಾತು ಹೇಳಿದರು.

ಜಿಲ್ಲಾ ಮನೋಸಾಮಾಜಿಕ ಕಾರ್ಯಕರ್ತೆ ಪದ್ಮರೇಖಾ ಮಾತನಾಡಿ, ‘ಹದಿಹರೆಯದ ವಯಸ್ಸಿನಲ್ಲಿ, ಔದ್ಯೋಗಿಕ ಜೀವನ ಮತ್ತು ವೈವಾಹಿಕ ಜೀವನದಲ್ಲಿನ ಸಮಸ್ಯೆಗಳಿಂದ ಆತ್ಮಹತ್ಯೆ ಆಲೋಚನೆಗಳು ಬರುತ್ತದೆ. ಇಂತಹ ಪ್ರಮುಖ ಘಟ್ಟಗಳಲ್ಲಿ ಬರುವ ಒತ್ತಡವನ್ನು ನಿಭಾಯಿಸಿಕೊಳ್ಳಬೇಕು ಮತ್ತು ಮನೋರೋಗ ತಜ್ಞರನ್ನು ಹಾಗೂ ಆಪ್ತ ಸಮಾಲೋಚಕರನ್ನು ಯಾವುದೇ ಮುಜುಗರವಿಲ್ಲದೆ ಭೇಟಿಮಾಡಿ, ಸಲಹೆ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ನಿಮ್ಹಾನ್ಸ್ ಸಂಸ್ಥೆಯ ಮನೋರೋಗ ತಜ್ಞ ಡಾ.ನೂರುಲ್ಲಾ ಉಪಸ್ಥಿತರಿದ್ದರು. ಆರೋಗ್ಯ ಮೇಲ್ವಿಚಾರಕ ಸಿದ್ದರಾಮಯ್ಯ ಸ್ವಾಗತಿಸಿದರು.

ಪ್ರತಿಕ್ರಿಯಿಸಿ (+)