ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿನಿ ವಿಧಾನಸೌಧದಲ್ಲಿ ಮಳೆನೀರು: ಜನರ ಪರದಾಟ

Last Updated 3 ಜೂನ್ 2019, 14:08 IST
ಅಕ್ಷರ ಗಾತ್ರ

ರಾಮನಗರ: ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ಇಲ್ಲಿನ ಮಿನಿ ವಿಧಾನಸೌಧದಲ್ಲಿನ ನೆಲ ಅಂತಸ್ತಿನಲ್ಲಿ ನೀರು ತುಂಬಿದ್ದು, ನಾಗರಿಕರು ಪರದಾಡುವಂತಾಗಿದೆ.

ಆಧಾರ್ ನೋಂದಣಿ, ಆಧಾರ್ ತಿದ್ದುಪಡಿ, ಪಹಣಿ, ವಂಶವೃಕ್ಷ, ವಾಸ ದೃಢೀಕರಣ, ಆದಾಯ ಪ್ರಮಾಣ ಪತ್ರ ಹಾಗೂ ಜಾತಿ ಪ್ರಮಾಣ ಪತ್ರ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆಯಲು ಪ್ರತಿನಿತ್ಯ ನೂರಾರು ಜನರು ಇಲ್ಲಿಗೆ ಬರುತ್ತಾರೆ. ಸರ್ಕಾರದ ವಿವಿಧ ಸವಲತ್ತುಗಳನ್ನು ಪಡೆಯಲು ಆಗಮಿಸಿದ್ದ ಜನರು ನೆಲಅಂತಸ್ತಿನಲ್ಲಿ ನೀರು ನಿಂತ ಕಾರಣಕ್ಕೆ ಕಸಿವಿಸಿಗೊಂಡರು. ನೀರಿನಲ್ಲಿಯೇ ನಿಂತು ಕೊಂಡು ಪ್ರಮಾಣ ಪತ್ರಗಳಿಗೆ ಅರ್ಜಿ ಸಲ್ಲಿಸಿದರು.

‘ನೆಲ ಅಂತಸ್ತಿನಲ್ಲಿ ನೀರು ನಿಂತಿರುವುದು ಇದೇ ಮೊದಲೇನಲ್ಲ. ಹಲವು ಬಾರಿ ನೀರು ನಿಂತಿದೆ. ತಹಶೀಲ್ದಾರ್, ಉಪವಿಭಾಗಾಧಿಕಾರಿ ಕಚೇರಿ ಹಾಗೂ ತಾಲ್ಲೂಕು ಪಂಚಾಯಿತಿ ಕಚೇರಿಗಳು ಇಲ್ಲಿವೆ. ಮಳೆ ನೀರು ನಿಲ್ಲದಂತೆ ಕ್ರಮಕೈಗೊಳ್ಳಿ ಎಂದು ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ರೈತ ಮುಖಂಡ ಸೀಬೆಕಟ್ಟೆ ಕೃಷ್ಣಪ್ಪ ತಿಳಿಸಿದರು.

‘ನೀರು ನಿಂತಿರುವುದರಿಂದ ಜನರಿಗೆ ಸಾಲಿನಲ್ಲಿ ನಿಲ್ಲಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ಈ ನೀರು ಒಣಗಿ ಹೋಗಲು ಇನ್ನು ಒಂದು ವಾರ ಬೇಕಾಗುತ್ತದೆ. ಅಲ್ಲಿಯವರೆಗೆ ಜನರಿಗೆ ತೊಂದರೆಯಾಗುತ್ತದೆ’ ಎಂದರು.

‘ಮಿನಿ ವಿಧಾನಸೌಧವನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದೇ ಇದಕ್ಕೆ ಕಾರಣ. ಮಳೆ ಬಂದರೆ ನೀರು ನಿಲ್ಲುತ್ತದೆ, ಸರಿಯಾಗಿ ಬೆಳಕು ಬರುವುದಿಲ್ಲ’ ಎಂದು ಎಂದು ಚಿಕ್ಕೇನಹಳ್ಳಿ ನಾಗಪ್ಪ ಆರೋಪಿಸಿದರು.

‘ಆಧಾರ್ ಕಾರ್ಡ್ ಅವ್ಯವಸ್ಥೆ ಇನ್ನು ಸರಿಯಾಗಿಲ್ಲ. ವಿವಿಧ ಸೌಕರ್ಯಗಳನ್ನು ಪಡೆಯಲು ಈಗ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕಿದೆ. ಈ ಪರಿಸ್ಥಿತಿಯಿಂದ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT