ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಶಿಕ್ಷಕರಾದ ಸಚಿವ ಸುರೇಶ್‌ಕುಮಾರ್‌

ಜಿಲ್ಲೆಯ ವಿವಿಧ ಶಾಲೆಗಳಿಗೆ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ
Last Updated 2 ಜನವರಿ 2021, 11:48 IST
ಅಕ್ಷರ ಗಾತ್ರ

ರಾಮನಗರ: ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಶನಿವಾರ ಶಿಕ್ಷಕರಾಗಿದ್ದರು. ಒಬ್ಬೊಬ್ಬರೇ ವಿದ್ಯಾರ್ಥಿಯ ಬಳಿ ಹೋಗಿ ಅವರ ಸಮಸ್ಯೆ ಆಲಿಸಿದರು. ಅವರಲ್ಲಿ ಆತ್ಮವಿಶ್ವಾಸ ತುಂಬುವ ಮಾತುಗಳನ್ನು ಆಡಿದರು.

ಶಾಲೆ–ಕಾಲೇಜು ಪುನರಾರಂಭ ಹಿನ್ನೆಲೆಯಲ್ಲಿ ರಾಮನಗರ ಹಾಗೂ ಮಾಗಡಿ ತಾಲ್ಲೂಕಿನ ವಿವಿಧ ಶಾಲೆಗಳಿಗೆ ಭೇಟಿ ಕೊಟ್ಟ ಅವರು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಅಲ್ಲಿನ ಪರಿಸ್ಥಿತಿ, ಕೋವಿಡ್ಹಿನ್ನೆಲೆಯಲ್ಲಿ ತೆಗೆದುಕೊಳ್ಳಲಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಿದರು.

ಒಳಗೆ ಬರಬಹುದಾ?: ರಾಮನಗರದ ಬಾಲಕಿಯರ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಕ ಪಾಠ ಮಾಡುತ್ತಿದ್ದರು. ಈ ವೇಳೆಬಾಗಿಲಲ್ಲೇ ನಿಂತು ‘ಒಳಗೆ ಬರಬಹುದಾ‘ ಎಂದು ಕೇಳಿದಾಗ, ಒಂದು ಕ್ಷಣ ಶಿಕ್ಷಕರ ಜೊತೆಗೆ ವಿದ್ಯಾರ್ಥಿಗಳು ಆಶ್ಚರ್ಯಕ್ಕೆ ಒಳಗಾದರು.

ಯಾವಾಗ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತದೆ ಎಂಬ ಗೊಂದಲ ವಿದ್ಯಾರ್ಥಿಗಳಲ್ಲಿ ಇದೆ. ಹೀಗಾಗಿ ಯಾವಾಗ ಪರೀಕ್ಷೆ ನಡೆಸಬೇಕು ಎಂದು ಸಚಿವರು ವಿದ್ಯಾರ್ಥಿಗಳನ್ನೇ ಪ್ರಶ್ನಿಸಿದರು. ‘ನಾವು ಯಾವಾಗ ಪರೀಕ್ಷೆಮಾಡಬೇಕು? ಮಾರ್ಚ್‍ನಲ್ಲಿ ನಡೆದರೇ ಸರಿನಾ?’ ಎಂದು ವಿದ್ಯಾರ್ಥಿಗಳನ್ನು ಕೇಳಿದರು.

ಇದಕ್ಕೆ ಉತ್ತರಿಸಿದ ವಿದ್ಯಾರ್ಥಿಗಳು, ‘ಜೂನ್‌ನಲ್ಲಿ ಪರೀಕ್ಷೆ ನಡೆಸಿ’ ಎಂದು ಶಿಕ್ಷಣ ಸಚಿಚರಿಗೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವರು ‘ಕನಿಷ್ಠ ಪಠ್ಯಗಳಿಗೆ ಒತ್ತು ನೀಡುತ್ತಿದ್ದೇವೆ. ಈ ಬಗ್ಗೆ ಅಧಿಕಾರಿಗಳು, ತಜ್ಞರ ಬಳಿ ಚರ್ಚೆ ಮಾಡುತ್ತೇನೆ. ನೀವು ಯಾವುದಕ್ಕೂ ಹೆದರಬೇಡಿ. ಓದಿನ ಕಡೆಗೆ ಗಮನ ಕೊಡಿ. ಶಾಲೆಗೆ ಚಕ್ಕರ್‌ ಹಾಕದೇ, ನಿತ್ಯ ತರಗತಿಗೆ ಹಾಜರಾಗಿ’ ಎಂದು ಕಿವಿಮಾತು ಹೇಳಿದರು.

‘ನಿಮ್ಮಲ್ಲಿ ಎಷ್ಟು ಜನ ರಾಮನಗರದ ಡಿ.ಸಿ. ಆಗುತ್ತೀರಾ’ಎಂದು ಪ್ರಶ್ನಿಸಿದ ಅವರು ‘ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಬೇಡಿ. ಆರೋಗ್ಯದ ಕಡೆ ಗಮನ ಕೊಡಿ. ಉತ್ತಮ ಓದು, ಆಹಾರ ಅಭ್ಯಾಸಗಳ ಕಡೆಗಮನ ಕೊಡಿ. ದಿನಪತ್ರಿಕೆಗಳನ್ನು ತಪ್ಪದೇ ಓದಿ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕೋವಿಡ್ ನಿಯಾಮಾವಳಿಗನ್ನು ತಪ್ಪದೇ ಪಾಲಿಸಿ, ಮಾಸ್ಕ್ ಮತ್ತು ಸ್ಯಾನಿಟೈಸರ್ ಅನ್ನು ಕಡ್ಡಾಯವಾಗಿ ಬಳಕೆ ಮಾಡಿ. ಈ ಬಗ್ಗೆ ನಿಮ್ಮ ಪೋಷಕರಲ್ಲಿಯೂ ಈ ಬಗ್ಗೆ ಜಾಗೃತಿ ಮೂಡಿಸಿ ಎಂದು ಸಲಹೆ ನೀಡಿದರು.

ಇದೇ ಸಂದರ್ಭ ಶಾಲೆಗಳ ಪುನರಾರಂಭ ಕುರಿತು ‘ಪ್ರಜಾವಾಣಿ’ಯ ಶನಿವಾರದ ಪೂರ್ಣ ಪುಟದ ವರದಿಯನ್ನು ಸರ್ಕಾರಿ ಪ್ರೌಢಶಾಲೆ ಶಿಕ್ಷಕರು ಸಚಿವರಿಗೆ ನೀಡಿದರು. ರಾಮನಗರ ಬಿಇಒ ಕಚೇರಿ ಪಕ್ಕದಲ್ಲಿ ನಿರ್ಮಾಣ ಆಗುತ್ತಿರುವ ಶಾಲಾ ಕಟ್ಟಡ ಕಾಮಗಾರಿ ವೀಕ್ಷಣೆ ಮಾಡಿದ ಸಚಿವರು, ಸ್ಥಳೀಯ ಶಾಸಕರನ್ನು ಕೇಳಿ ದಿನಾಂಕ ನಿಗದಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಎಂ.ಎಸ್‌. ಅರ್ಚನಾ, ಶಿಕ್ಷಣ ಇಲಾಖೆಅಧಿಕಾರಿಗಳು ಜೊತೆಗಿದ್ದರು.

ಎಲ್ಲೆಲ್ಲಿಗೆ ಭೇಟಿ?
ಸಚಿವ ಸುರೇಶ್ ಕುಮಾರ್‌ ಮೊದಲಿಗೆ ಬಿಡದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಸವೇಶ್ವರ ಶಾಲೆಗಳಿಗೆ ಭೇಟಿ ನೀಡಿದರು. ನಂತರ ರಾಮನಗರ ಟೌನ್ ವ್ಯಾಪ್ತಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆ,ಶಾಂತಿನಿಕೇತನ ಶಾಲೆ, ಮಾಗಡಿ ತಾಲ್ಲೂಕಿನ ವಿ.ಜಿದೊಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹೊಸಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾಚೇನ ಹಟ್ಟಿಯ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT