ಶುಕ್ರವಾರ, ಸೆಪ್ಟೆಂಬರ್ 20, 2019
21 °C
ಅಂಬೇಡ್ಕರ್‌ ವಸತಿ ಶಾಲೆ ಪ್ರಕರಣ: ಸಚಿವರಿಂದ ಮತ್ತೆ ಪರಿಶೀಲನೆ

ಮಕ್ಕಳೊಂದಿಗೆ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಸಂವಾದ

Published:
Updated:
Prajavani

ಕೈಲಾಂಚ (ರಾಮನಗರ): ‘ಮುಂದೆ ಏನಾಗಬೇಕು ಎಂದುಕೊಂಡಿದ್ದೀರಾ. ನಮ್ಮ ರಾಷ್ಟ್ರಗೀತೆ, ನಾಡಗೀತೆ ಹಾಡೋಕೆ ಬರುತ್ತಾ... ಎಲ್ಲಿ ಯೋಗ ಮಾಡಿ ತೋರಿಸು ನೋಡೋಣ....

ತಾಲ್ಲೂಕಿನ ಕೈಲಾಂಚ ಗ್ರಾಮದ ಅಂಬೇಡ್ಕರ್ ವಸತಿ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆಯ ಪ್ರತಿ ವಿದ್ಯಾರ್ಥಿಯನ್ನೂ ಹೀಗೆ ಆತ್ಮೀಯವಾಗಿ ವಿಚಾರಿಸುತ್ತಾ ಅವರೊಂದಿಗೆ ಸಂವಾದ ನಡೆಸಿದ್ದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‌ಕುಮಾರ್.

ಅಂಬೇಡ್ಕರ್‌ ವಸತಿ ಶಾಲೆಯಲ್ಲಿನ ಮಕ್ಕಳ ಪುನರ್ವಸತಿ ವ್ಯವಸ್ಥೆ ಪರಿಶೀಲಿಸುವ ಸಲುವಾಗಿ ಸೋಮವಾರ ಶಾಲೆಗೆ ಭೇಟಿ ನೀಡಿದ ಅವರು ಸುಮಾರು ಒಂದು ಗಂಟೆ ಕಾಲ ಮಕ್ಕಳೊಂದಿಗೆ ಬೆರೆತರು. ಅವರ ಆಸೆ, ಆಸಕ್ತಿಗಳನ್ನು ಕೇಳುತ್ತಾ ಹುರಿದುಂಬಿಸಿದರು. ಸಮಸ್ಯೆಗಳನ್ನೂ ಆಲಿಸಿ, ಬಗೆಹರಿಸುವ ಭರವಸೆ ನೀಡಿದರು.

ಮಕ್ಕಳಿಂದ ರಾಷ್ಟ್ರಗೀತೆ, ನಾಡಗೀತೆ ಹಾಡಿಸಿದ ಅವರು ಅದು ಬರೆದದ್ದು ಯಾರು ಎನ್ನುವ ಪ್ರಶ್ನೆಯನ್ನೂ ಇಟ್ಟರು. ಮುಂದೆ ಏನಾಗಬೇಕು ಎಂದುಕೊಂಡಿದ್ದೀರಾ? ಎಂದು ಪ್ರಶ್ನಿಸಿದರು. ಮಕ್ಕಳು ಐಎಎಸ್‌, ಐಪಿಎಸ್‌ ಕನಸಿನ ಬಗ್ಗೆ ಹೇಳಿಕೊಂಡಾಗ ‘ಹೋ ಒಬ್ಬರು ಜಿಲ್ಲಾಧಿಕಾರಿ, ಮತ್ತೊಬ್ಬರು ಎಸ್ಪಿ... ಭಲೇ ಭಲೇ.....’ ಎಂದು ಬೆನ್ನು ತಟ್ಟಿದರು.

‘ಗಣಿತ ನಿಮಗೆ ಕಷ್ಟವೇ’ ಎಂದು ಪ್ರಶ್ನಿಸಿದ ಅವರು ‘ನಿಮಗೊಂದು ಲೆಕ್ಕ ಕೊಡಲೇ’ ಎಂದು ವಿದ್ಯಾರ್ಥಿಗಳನ್ನು ಕಿಚಾಯಿಸಿದರು.

ಸೈಕಲ್‌ ಏಕಿಲ್ಲ: ‘ಯಾರು ಯಾರು ಶಾಲೆಗೆ ಸೈಕಲ್‌ ತರುತ್ತೀರಿ. ಎಷ್ಟು ದೂರದಿಂದ ಬರುತ್ತೀರಿ’ ಎಂದು ಸಚಿವರು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು.

ಅರ್ಧದಷ್ಟು ವಿದ್ಯಾರ್ಥಿಗಳು ಮಾತ್ರ ಶಾಲೆಗೆ ಸೈಕಲ್‌ ತರುವುದಾಗಿ ಉತ್ತರಿಸಿದರು. ಇದರಿಂದ ಬೇಸರಗೊಂಡ ಸಚಿವರು, ಎಲ್ಲ ಮಕ್ಕಳಿಗೂ ಸರ್ಕಾರ ಸೈಕಲ್‌ ಕೊಟ್ಟಿದ್ದರೂ ಉಳಿದವರು ಏಕೆ ತರುತ್ತಿಲ್ಲ ಎಂದು ಪ್ರಶ್ನಿಸಿದರು. ಒಬ್ಬೊಬ್ಬರು ಒಂದೊಂದು ಕಾರಣ ನೀಡಿದರು. ‘ಎಲ್ಲರೂ ಶಾಲೆಗೆ ಸೈಕಲ್‌ ತನ್ನಿ. ಒಂದು ದಿನ ಇಲ್ಲಿಂದ ಮೈಸೂರಿಗೆ ರೇಸ್‌ ಹೋಗೋಣ....’ ಎಂದು ಸುರೇಶ್‌ಕುಮಾರ್‌ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಶಾಲೆಯೊಂದು ಕಂಪ್ಯೂಟರ್ ಲ್ಯಾಬ್‌ ಕೊಡಿಸುವಂತೆ ವಿದ್ಯಾರ್ಥಿಗಳು ಬೇಡಿಕೆ ಇಟ್ಟರು. ಮತ್ತೊಬ್ಬರು ವಿದ್ಯಾರ್ಥಿನಿ ಲ್ಯಾಪ್‌ಟಾಪ್‌ ಕೊಡುವಂತೆ ಕೋರಿದರು. ಮಕ್ಕಳಿಗೆ ಕಂಪ್ಯೂಟರ್‌ ಶಿಕ್ಷಣಕ್ಕೆ ವ್ಯವಸ್ಥೆ ಮಾಡುವುದಾಗಿ ಸಚಿವರು ಭರವಸೆ ನೀಡಿದರು.

ಶಿಕ್ಷಕರೊಂದಿಗೆ ಸಭೆ: ಶಾಲೆಯ ಶಿಕ್ಷಕರೊಂದಿಗೆ ಸಚಿವರು ಪ್ರತ್ಯೇಕವಾಗಿ ಸಭೆ ನಡೆಸಿದರು.

ಶಾಲೆಯಲ್ಲಿ ಎಷ್ಟು ಮಕ್ಕಳಿದ್ದಾರೆ. ಯಾವ ವಿಷಯ ಬೋಧನೆ ಮಾಡುತ್ತೀರಿ ಎಂಬ ಮಾಹಿತಿ ಪಡೆದ ಅವರು ಗ್ರಾಮೀಣ  ಮಕ್ಕಳಿಗೆ ಕಠಿಣವಾದ ಗಣಿತ, ಇಂಗ್ಲಿಷ್, ವಿಜ್ಞಾನ ವಿಷಯಗಳ ಕುರಿತು ಅಗತ್ಯಬಿದ್ದರೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದರು. ‘ಯಾವ ಮಕ್ಕಳಿಗೂ ಹೊಡೆಯಬೇಡಿ, ಬಯ್ಯಬೇಡಿ’ ಎಂದು ಸಲಹೆ ನೀಡಿದರು. ಮಕ್ಕಳಿಗೆ ನಿತ್ಯ ಕ್ರೀಡೆ, ಯೋಗಾಭ್ಯಾಸ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಸೂಚಿಸಿದರು.

ಈ ಸಂದರ್ಭ ಶಾಲೆಯ ಶಿಕ್ಷಕಿ ಶೈಲಾ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸರ್ಕಾರ ಶೀಘ್ರವಾಗಿ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಅರ್ಚನಾ, ಜಿಲ್ಲಾ ಮಟ್ಟದ ಅಧಿಕಾರಿಗಳು ಜೊತೆಗಿದ್ದರು.

ವಾರದಲ್ಲೊಂದು ದಿನ ‘ಬ್ಯಾಗ್‌ ರಹಿತ’

‘ಶಾಲೆಗಳಲ್ಲಿ ವಾರಕ್ಕೆ ಒಂದು ದಿನ ಬ್ಯಾಗ್‌ ರಹಿತ ತರಗತಿ ನಡೆಸಲು ಚಿಂತನೆ ನಡೆದಿದೆ’ ಎಂದು ಶಿಕ್ಷಣ ಸಚಿವ ಸುರೇಶ್‌ಕುಮಾರ್ ತಿಳಿಸಿದರು.

ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಸರ್ಕಾರಿ ಸೌಲಭ್ಯ ತಲುಪುತ್ತಿಲ್ಲ ಎಂಬ ದೂರುಗಳಿವೆ. ಹೀಗಾಗಿ ಮುಂದಿನ ವರ್ಷದಿಂದ ಶಾಲೆ ಆರಂಭದ ದಿನವೇ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಿಸಲಾಗುವುದು. ವರ್ಗಾವಣೆ ಸೇರಿದಂತೆ ಶಿಕ್ಷಕರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಶಿಕ್ಷಕರಿಂದ ಮನವಿ

ವರ್ಗಾವಣೆ ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸಬೇಕು. ನಮ್ಮ ಸಮಸ್ಯೆಗಳಿಗೆ ಸ್ಪಂದಿಸಬೇಕು ಶಿಕ್ಷಕರು ಸಚಿವರಲ್ಲಿ ಮನವಿ ಮಾಡಿದರು.

‘ಜಿಲ್ಲೆಯಲ್ಲಿ ಈ ವರ್ಷ 107 ಶಿಕ್ಷಕರನ್ನು ಕಡ್ಡಾಯವಾಗಿ ವರ್ಗಾಗಣೆ ಮಾಡಲಾಗಿದೆ. ಇದರಲ್ಲಿ 100 ಮಂದಿ ಮಹಿಳೆಯರೇ ಇದ್ದಾರೆ. ಕನಿಷ್ಠ ಅಕ್ಟೋಬರ್‌ ರಜೆಯವರೆಗಾದರೂ ವಿನಾಯಿತಿ ನೀಡಿ’ ಎಂದು ಶಿಕ್ಷಕರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು ‘ಇಲಾಖೆಯಲ್ಲಿ ಶೇ 70ರಷ್ಟು ಮಹಿಳಾ ಸಿಬ್ಬಂದಿಯೇ ಇರುವುದರಿಂದ ಅವರ ವರ್ಗವೇ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗುವುದು’ ಎಂದು ಭರವಸೆ ನೀಡಿದರು.

Post Comments (+)