ಹೇಮಾವತಿ ನೀರಿಗಾಗಿ ತುಮಕೂರಿನಿಂದ ಬೆಂಗಳೂರು ಮುಖ್ಯಮಂತ್ರಿ ಅಧಿಕೃತ ನಿವಾಸದವರೆಗೂ ಪಾದಯಾತ್ರೆ ಮಾಡುತ್ತೇವೆ. ಇದು ಸರ್ಕಾರದ ವಿರುದ್ಧ ಪ್ರತಿಭಟನೆ ಅಲ್ಲ. ಕಾನೂನು ಮೀರಿ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿಗೆ ತಡೆಯೊಡ್ಡುತ್ತಿರುವ ತುಮಕೂರು ಜಿಲ್ಲೆಯ ನಾಯಕರ ವಿರುದ್ಧ ನಮ್ಮ ಹೋರಾಟ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಸ್ಪಷ್ಟಪಡಿಸಿದರು. ನಮ್ಮ ಹೋರಾಟಕ್ಕೆ ಪ್ರತಿಪಕ್ಷಗಳು ಬೆಂಬಲ ಕೊಡುತ್ತಿಲ್ಲ. ಮಾಧ್ಯಮಗಳ ಮುಂದೆ ಹುಲಿ ರೀತಿ ಘರ್ಜಿಸುತ್ತಾರೆಯೇ ಹೊರತು ಅವರು ಬೀದಿಗಿಳಿದು ಹೋರಾಟ ಮಾಡುತ್ತಿಲ್ಲ. ನನ್ನ ಕ್ಷೇತ್ರ ಎಂಬ ಛಲ ಅವರಿಗೆ ಬರಬೇಕು. ವಿಧಾನಸೌಧ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಸತ್ಯಾಗ್ರಹ ಮಾಡುವಂತೆ ಮಾಜಿ ಶಾಸಕ ಎ. ಮಂಜುನಾಥ್ ಹೇಳುತ್ತಿದ್ದಾರೆ. ಗಾಂಧಿ ಪ್ರತಿಮೆ ಎದುರು ಸತ್ಯಾಗ್ರಹ ಕುಳಿತು ಶಾಂತಿ ಮಂತ್ರ ಜಪಿಸಿದರೆ ಹೇಮಾವತಿ ನೀರು ಸಿಗುತ್ತಾ? ಈ ರೀತಿ ಉಡಾಫೆ ಮಾತು ಬೇಡ ಎಂದು ಹರಿಹಾಯ್ದರು.