ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿರೋಧಿಗಳಿದ್ದಾಗಲೇ ಜಾಗೃತವಾಗಿರಲು ಸಾಧ್ಯ: ಶಾಸಕ ಇಕ್ಬಾಲ್ ಹುಸೇನ್

ನಗರಸಭೆಯಲ್ಲಿ ಜನಸ್ಪಂದನ ಸಭೆ ನಡೆಸಿದ ಶಾಸಕ ಇಕ್ಬಾಲ್ ಹುಸೇನ್
Published : 4 ಸೆಪ್ಟೆಂಬರ್ 2024, 5:31 IST
Last Updated : 4 ಸೆಪ್ಟೆಂಬರ್ 2024, 5:31 IST
ಫಾಲೋ ಮಾಡಿ
Comments

ರಾಮನಗರ: ‘ರಾಜಕಾರಣದಲ್ಲಿ ವಿರೋಧಿಗಳಿದ್ದಾಗಲೇ ಎಚ್ಚರಿಕೆಯಿಂದ ಕೆಲಸ ಮಾಡಲು ಸಾಧ್ಯ. ನಮ್ಮ ನಡೆ–ನುಡಿಗಳನ್ನು ತಿದ್ದುವಲ್ಲಿ ವಿರೋಧಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಕೆಲವರು ತೊಂದರೆ ಕೊಡಲೆಂದೇ ವಿರೋಧಿಸುತ್ತಾರೆ. ರಾಜಕಾರಣದಲ್ಲಿ ಅದು ಸಾಮಾನ್ಯವಾಗಿದ್ದು, ಧೈರ್ಯವಾಗಿ ಎದುರಿಸಬೇಕಷ್ಟೆ’ ಎಂದು ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಹೇಳಿದರು.

ಇಲ್ಲಿನ ನಗರಸಭೆಯಲ್ಲಿ ಮಂಗಳವಾರ ಜನಸ್ಪಂದನ ಸಭೆ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅಧಿಕಾರವಿದೆ ಎಂದು ರಾಜ್ಯಪಾಲರು ಸಚಿವರಾದ ಎಂ.ಬಿ. ಪಾಟೀಲ ಹಾಗೂ ಪ್ರಿಯಾಂಕ್ ಖರ್ಗೆ ಅವರಿಗೆ ನೋಟಿಸ್ ಕೊಟ್ಟಿದ್ದಾರೆ. ತಕ್ಕ ಉತ್ತರವನ್ನು ಸಚಿವರಿಬ್ಬರೂ ನೀಡಲಿದ್ದಾರೆ. ತಪ್ಪು ಮಾಡಿದ್ದರೆ ಶಿಕ್ಷೆಯಾಗುತ್ತದೆ’ ಎಂದರು.

‘ಸಿದ್ದರಾಮಯ್ಯ ಅನುಮತಿ ಕೊಟ್ಟರೆ ನಾನೂ ಮುಖ್ಯಮಂತ್ರಿ ಆಗುತ್ತೇನೆ ಎಂದು ಶಾಸಕ ಆರ್‌.ವಿ. ದೇಶಪಾಂಡೆ ಅವರು ಹೇಳಿಕೆ ವೈಯಕ್ತಿಕವಾದುದು. ಪ್ರಜಾಪ್ರಭುತ್ವದಲ್ಲಿ ಯಾರು, ಯಾವ ಹುದ್ದೆಗೆ ಬೇಕಾದರೂ ಆಸೆಪಡಬಹುದು. ಆದರೆ, ರಾಜ್ಯದಲ್ಲಿ ಸದ್ಯ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಸಿದ್ದರಾಮಯ್ಯ ಅವರು ಜನಪರ ಆಡಳಿತ ನೀಡುತ್ತಿದ್ದಾರೆ. ಅವರನ್ನು ಸಿ.ಎಂ ಸ್ಥಾನದಿಂದ ಕೆಳಕ್ಕಿಳಿಸಲು ಕಾಂಗ್ರೆಸ್‌ನ ಬಣವೊಂದು ಪ್ರಯತ್ನಿಸುತ್ತಿದೆ ಎಂಬುದು ಸುಳ್ಳು. ನಮ್ಮಲ್ಲಿ ಯಾವ ಬಣವೂ ಇಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಉತ್ತಮ ಆಡಳಿತ ನೀಡುತ್ತಿದ್ದಾರೆ. ಬಿಜೆಪಿಯವರು ಹಿಂಬಾಗಿಲಿನಿಂದ ಬಂದು ಅಧಿಕಾರ ಮಾಡಿದವರು. ಅವರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’ ಎಂದರು.

‘ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಮಗೆ ಕೊಟ್ಟಿರುವ ಕೆಲಸವನ್ನು ನಿಭಾಯಿಸುತ್ತೇವೆ. ಹೊರಗಿನವರು ಅಥವಾ ಸ್ಥಳೀಯರು ಅಭ್ಯರ್ಥಿಯಾಗುತ್ತಾರೊ ಎಂಬುದನ್ನು ಪಕ್ಷದ ಹೈಕಮಾಂಡ್ ತೀರ್ಮಾನಿಸಲಿದೆ’ ಎಂದು ಹೇಳಿದರು.

‘ಇ–ಖಾತೆ ಸಮಸ್ಯೆ ಪರಿಹರಿಸಲು ಒತ್ತಾಯ’

ಕೆಂಗಲ್‌ ಹನುಮಂತಯ್ಯ ಅವರು 1945ರಲ್ಲಿ ರಾಮನಗರದಿಂದ ಗೆದ್ದು ಮುಖ್ಯಮಂತ್ರಿಯಾಗಿದ್ದಾಗ ರಾಮನಗರದ ಗಾಂಧಿನಗರ ಟ್ರೂಪ್‍ಲೈನ್ ಬಾಲಗೇರಿ ಸೇರಿದಂತೆ ಹಲವೆಡೆ ಬಡವರಿಗೆ ನಿವೇಶನಗಳನ್ನು ನೀಡಿದ್ದಾರೆ. ಅವುಗಳಿಗೆ ಇ –ಖಾತೆ ಮಾಡಿಸಲು ಜನ ನಗರಸಭೆಗೆ ಬಂದರೆ ಅಧಿಕಾರಿಗಳು ಮೂಲಪತ್ರ ತಂದು ಕೊಡಿ ಎಂದು ವಾಪಸ್ ಕಳಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಿ ಎಂದು ಜನಸ್ಪಂದನ ಸಭೆಯಲ್ಲಿ ದಲಿತ ಮುಖಂಡ ಶಿವಶಂಕರ್ ಶಾಸಕರ ಗಮನಕ್ಕೆ ತಂದರು.

ಅದಕ್ಕೆ ಪ್ರತಿಕ್ರಿಯಿಸಿದ ಹುಸೇನ್ ‘ನಾನು ಶಾಸಕನಾಗಿ ಕೇವಲ 14 ತಿಂಗಳಾಗಿದೆ. ಇ–ಖಾತೆ ಸೇರಿದಂತೆ ನಗರಸಭೆಯಲ್ಲಿರುವ ಒಂದೊಂದೇ ಸಮಸ್ಯೆಗಳನ್ನು ಅರಿತುಕೊಂಡು ಪರಿಹರಿಸುವೆ. ಇ–ಖಾತೆ ಸಮಸ್ಯೆ ಕುರಿತು ಸಂಬಂಧಿಸಿದ ಸಚಿವರ ಜೊತೆಗೂ ಮಾತನಾಡುವೆ’ ಎಂದು ಭರವಸೆ ನೀಡಿದರು.

‘ಕಂದಾಯ ಶಾಖೆಯಲ್ಲಿ ಖಾಲಿ ಇರುವ ಅಧಿಕಾರಿ ಹಾಗೂ ಸಿಬ್ಬಂದಿ ಹುದ್ದೆಯನ್ನು ಶೀಘ್ರವೇ ಭರ್ತಿ ಮಾಡಲಾಗುವುದು’ ಎಂದು ನಗರಸಭೆ ಸದಸ್ಯ ಸೋಮಶೇಖರ್ ಅವರು ಗಮನ ಸೆಳೆದ ಸಿಬ್ಬಂದಿ ಕೊರತೆ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಪೌರಾಯುಕ್ತ ಜಯಣ್ಣ ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT