ಗುರುವಾರ , ಜೂನ್ 24, 2021
24 °C
ಮಳೆನೀರು ಸಂಗ್ರಹ, ಸೌರಶಕ್ತಿ ವ್ಯವಸ್ಥೆ; ಸಮುದಾಯ ಶೌಚಾಲಯದ ನಿರ್ಮಾಣ

ರಾಮನಗರ: ಬನ್ನಿಕುಪ್ಪೆ ಗ್ರಾ.ಪಂ.ನಲ್ಲಿದೆ ಸುಂದರ ಉದ್ಯಾನ

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಗ್ರಾ.ಪಂ. ಆವರಣದೊಳಗೇ ಪುಟ್ಟದೊಂದು ಉದ್ಯಾನ. ಅಲ್ಲಿಯೇ ಸಾರ್ವಜನಿಕರ ಓಡಾಟಕ್ಕೆಂದು ನಡಿಗೆ ಪಥ. ಜ್ಞಾನಾರ್ಜನೆಗೆ ಗ್ರಂಥಾಲಯ. ಮಳೆನೀರು ಸಂಗ್ರಹ, ಸೌರಶಕ್ತಿಯಂತಹ ಪರಿಸರ ಸ್ನೇಹಿ ವ್ಯವಸ್ಥೆಗಳು..

ಇದೆಲ್ಲ ಒಂದೇ ಕಡೆ ಕಾಣಬೇಕು ಎಂದರೆ ನೀವು ತಾಲ್ಲೂಕಿನ ಕೈಲಾಂಚ ಹೋಬಳಿಯಲ್ಲಿರುವ ಬನ್ನಿಕುಪ್ಪೆ ಗ್ರಾಮಕ್ಕೆ ಬರಬೇಕು. ಇಲ್ಲಿನ ಗ್ರಾಮ ಪಂಚಾಯಿತಿ ಕಾರ್ಯಾಲಯವು ತನ್ನಲ್ಲಿನ ಅಭಿವೃದ್ಧಿ ಕಾರ್ಯಗಳು, ವ್ಯವಸ್ಥೆಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ.

ವಿಸ್ತಾರವಾದ ಆವರಣದಲ್ಲಿ ಇರುವ ಗ್ರಾಮ ಪಂಚಾಯಿತಿ ಕಾರ್ಯಾಲಯದ ಒಳಗೆ ಕೆಲವು ತಿಂಗಳ ಹಿಂದಷ್ಟೇ ಸುಂದರವಾದ ಉದ್ಯಾನವನ್ನು ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ನರೇಗಾ ಯೋಜನೆಯನ್ನು ಬಳಸಿಕೊಳ್ಳಲಾಗಿದ್ದು, ಸುಮಾರು ₨5 ಲಕ್ಷ ಅನುದಾನ ವ್ಯಯಿಸಲಾಗಿದೆ. ಆಕರ್ಷಕವಾದ ಅಲಂಕಾರಿಕ ಗಿಡಗಳ ಜೊತೆಜೊತೆಗೇ ಔಷದೀಯ ಸಸ್ಯಗಳನ್ನೂ ನೆಡಲಾಗಿದೆ. ಜೊತೆಗೆ ಮಧ್ಯೆ ಮಧ್ಯೆ ಸಿಮೆಂಟ್‌ ನೆಲಹಾಸು ಹಾಕಿ ಜನರ ಓಡಾಟಕ್ಕೂ ಅವಕಾಶ ಕಲ್ಪಿಸಲಾಗಿದೆ. ಜನರ ವಿಶ್ರಾಂತಿಗೆಂದು ಅಲ್ಲಲ್ಲಿ ಕಲ್ಲುಬೆಂಚುಗಳನ್ನೂ ಅಳವಡಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯಾನದ ಪರಿಕಲ್ಪನೆ ಕಡಿಮೆ. ಕೇವಲ ನಗರ ಪ್ರದೇಶಗಳಲ್ಲಿ ಮಾತ್ರ ಉದ್ಯಾನಗಳು ಹೆಚ್ಚಿನ ಸಂಖ್ಯೆಯಲ್ಲಿ ಇವೆ. ಹೀಗಿರುವಾಗ ಬನ್ನಿಕುಪ್ಪೆ ಗ್ರಾಮದಲ್ಲಿನ ಉದ್ಯಾನ ಗಮನ ಸೆಳೆಯುತ್ತಿದೆ.

ಸೌರಶಕ್ತಿ ವ್ಯವಸ್ಥೆ: ಗ್ರಾಮ ಪಂಚಾಯಿತಿ ಕಟ್ಟಡದ ಮಹಡಿಯಲ್ಲಿ ಸೌರಶಕ್ತಿ ಫಲಕಗಳನ್ನು ಅಳವಡಿಸಲಾಗಿದ್ದು, ಇದರಿಂದ ಉತ್ಪಾದನೆ ಆಗುವ ವಿದ್ಯುತ್‌ ಗ್ರಾ.ಪಂ. ಕೆಲಸಗಳಿಗೆ ಬಳಕೆ ಆಗುತ್ತಿದೆ. 2 ಕಿಲೋ ವ್ಯಾಟ್‌ ಸಾಮರ್ಥ್ಯದ ಈ ಸೌರ ಫಲಕಗಳಿಂದ ಗ್ರಾ,ಪಂ.ನ ವಿದ್ಯುತ್‌ ಬಿಲ್ ಪ್ರಮಾಣ ತಗ್ಗಿದ್ದು, ಕನಿಷ್ಠ ಶುಲ್ಕವಷ್ಟೇ ಬರುತ್ತಿದೆ. ಈ ಮೂಲಕ ಬನ್ನಿಕುಪ್ಪೆ ಗ್ರಾ.ಪಂ. ವಿದ್ಯುತ್‌ ಸ್ವಾವಲಂಬನೆಯತ್ತ ಹೆಜ್ಜೆ ಇಟ್ಟಿದೆ ಎನ್ನುತ್ತಾರೆ ಇಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜೈಶಂಕರ್‍.

ಸಮುದಾಯ ಶೌಚಾಲಯ: ಈಚೆಗೆ ಗ್ರಾಮೀಣ ಪ್ರದೇಶಗಳಲ್ಲಿ ನೈರ್ಮಲ್ಯದ ಅರಿವು ಹೆಚ್ಚುತ್ತಿದೆ. ಜಿಲ್ಲಾ ಪಂಚಾಯಿತಿ ಸಹ ನರೇಗಾ ಯೋಜನೆ ಮೂಲಕ ಹೆಚ್ಚೆಚ್ಚು ಸಮುದಾಯ ಶೌಚಾಲಯಗಳ ನಿರ್ಮಾಣಕ್ಕೆ ಮುಂದಾಗಿದೆ. ಇಲ್ಲಿನ ಗ್ರಾ,ಪಂ. ಆವರಣದಲ್ಲೂ ಸಹ ಸಮುದಾಯ ಶೌಚಾಲಯ ನಿರ್ಮಾಣ ಮಾಡಲಾಗಿದ್ದು, ಇದು ಇನ್ನಷ್ಟೇ ಸಾರ್ವಜನಿಕರ ಬಳಕೆಗೆ ಮುಕ್ತ ಆಗಬೇಕಿದೆ.

ಮಳೆನೀರು ಸಂಗ್ರಹ: ಮಳೆ ನೀರು ಸಂಗ್ರಹ ವ್ಯವಸ್ಥೆ ಇಲ್ಲಿನ ವಿಶೇಷತೆಗಳಲ್ಲಿ ಒಂದು. ಕಟ್ಟಡದ ಮಹಡಿಯಲ್ಲಿ ಬಿದ್ದು ವ್ಯರ್ಥವಾಗುವ ನೀರನ್ನು ಹಿಡಿದಿಟ್ಟು ಇದನ್ನು ಅಗತ್ಯ ಸಂದರ್ಭಗಳಲ್ಲಿ ಬಳಕೆ ಮಾಡುವ ವ್ಯವಸ್ಥೆ ಇಲ್ಲಿ ನಿರ್ಮಾಣ ಆಗುತ್ತಿದೆ. ನೀರಿನ ಸಂಗ್ರಹಕ್ಕೆಂದು ದೊಡ್ಡದಾದ ಸಂಪ್‌ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಇದೇ ನೀರನ್ನು ಇಲ್ಲಿನ ಆವರಣದಲ್ಲಿನ ಶೌಚಾಲಯ, ಉದ್ಯಾನ ಮೊದಲಾದ ಬಳಕೆಗೆ ಯೋಜಿಸಲಾಗಿದೆ ಎನ್ನುತ್ತಾರೆ ಗ್ರಾ.ಪಂ. ಸಿಬ್ಬಂದಿ. ಇದರೊಟ್ಟಿಗೆ ಕಾಂಪೋಸ್ಟ್‌ ಗೊಬ್ಬರ ತಯಾರಿಕೆ ಘಟಕವೂ ಇಲ್ಲಿನ ಆವರಣದಲ್ಲಿದೆ.

"ನರೇಗಾ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡಲ್ಲಿ ಸಾಕಷ್ಟು ಕಾಮಗಾರಿಗಳನ್ನು ಮಾಡಬಹುದಾಗಿದೆ. ಇಲ್ಲಿನ ಬಹುತೇಕ ಕೆಲಸಗಳನ್ನು ಆ ಯೋಜನೆಯಿಂದಲೇ ಪೂರ್ಣಗೊಳಿಸಲಾಗಿದೆ. ಜೊತೆಗೆ ನರೇಗಾ ಕೆಲಸಗಳಲ್ಲಿ ಬನ್ನಿಕುಪ್ಪೆ ಗ್ರಾ.ಪಂ. ಸದಾ ಮುಂದೆ ಇದ್ದು, ಈಗಾಗಲೇ ನಮ್ಮ ವ್ಯಾಪ್ತಿಯ 17 ಕೆರೆಗಳನ್ನು ಪುನಶ್ಚೇತನಗೊಳಿಸಿತ್ತೇವೆ’ ಎನ್ನುತ್ತಾರೆ ಪಿಡಿಒ ಜೈಶಂಕರ್‍.

ವಿದ್ಯಾರ್ಥಿಗಳಿಗೆ ಸಿಗಲಿದೆ ಸ್ಮಾರ್ಟ್‌ ಕಾರ್ಡ್‌
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲ ಶಾಲೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಗ್ರಂಥಾಲಯ ಸದಸ್ಯತ್ವ ನೀಡುವ ಜೊತೆಗೆ ಪುಸ್ತಕಗಳ ಎರವಲು ಪಡೆಯಲು ಅನುಕೂಲ ಆಗುವಂತೆ ಸ್ಮಾರ್ಟ್‌ ಕಾರ್ಡ್‌ ವಿತರಿಸಲು ಗ್ರಾ,ಪಂ. ಸಿದ್ಧತೆ ನಡೆಸಿದೆ.

ಗ್ರಾ,ಪಂ. ವ್ಯಾಪ್ತಿಯಲ್ಲಿ ಒಂದು ಪಿ.ಯು. ಕಾಲೇಜು, ಎರಡು ಪ್ರೌಢಶಾಲೆ ಹಾಗೂ ಆರು ಪ್ರಾಥಮಿಕ ಶಾಲೆಗಳಿವೆ. ಇದರಲ್ಲಿ 580ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಈ ಎಲ್ಲ ವಿದ್ಯಾರ್ಥಿಗಳಿಗೆ ಸದ್ಯದಲ್ಲೇ ಕಾರ್ಡ್‌ ವಿತರಣೆ ಆಗಲಿದೆ.

ಹಳೆಯ ಕಟ್ಟಡಕ್ಕೆ ಹೊಸ ರೂಪ
ಗ್ರಾಮ ಪಂಚಾಯಿತಿ ಆವರಣದಲ್ಲಿನ ಹಳೆಯ ಕಟ್ಟಡಕ್ಕೆ ನರೇಗಾ ಅಡಿ ಹೊಸ ರೂಪ ನೀಡಲಾಗಿದ್ದು, ಸದ್ಯ ಇಲ್ಲಿ ಸುಸಜ್ಜಿತವಾದ ಗ್ರಂಥಾಲಯ ಕಾರ್ಯ ನಿರ್ವಹಿಸುತ್ತಿದೆ.

1958ರಲ್ಲಿ ಇಲ್ಲಿ ಗ್ರಾಮ ಪಂಚಾಯಿತಿಗೆಂದು ಕಟ್ಟಡ ನಿರ್ಮಿಸಲಾಗಿತ್ತು. ಹೊಸ ಕಟ್ಟಡ ಕಟ್ಟಿದ ಬಳಿಕ ಇದು ಹಾಗೆಯೇ ಉಳಿದುಕೊಂಡಿತ್ತು. ಇದನ್ನೇ ನವೀಕರಿಸಿ ಗ್ರಂಥಾಲಯವನ್ನಾಗಿ ಮಾರ್ಪಡಿಸಲಾಗಿದೆ. ಸಾಕಷ್ಟು ಪುಸ್ತಕಗಳ ಸಂಗ್ರಹವೂ ಇದೆ. ಬೆಳಿಗ್ಗೆ 9ರಿಂದ 11 ಹಾಗೂ ಸಂಜೆ 4ರಿಂದ 6ರವರೆಗೆ ಈ ಗ್ರಂಥಾಲಯದ ಬಾಗಿಲು ತೆರೆದಿರುತ್ತದೆ.

ನರೇಗಾ ಯೋಜನೆಯಿಂದ ಗ್ರಾ.ಪಂ. ಆವರಣದಲ್ಲಿ ಉದ್ಯಾನ, ಮಳೆಕೊಯ್ಲು ಸಹಿತ ವಿವಿಧ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ಇಡೀ ಆವರಣ ಸುಂದರವಾಗಿ ರೂಪುಗೊಳ್ಳುತ್ತಿದೆ
-ಜೈಶಂಕರ್‌
ಪಿಡಿಒ, ಬನ್ನಿಕುಪ್ಪೆ ಗ್ರಾ.ಪಂ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.