ಆಸ್ಪತ್ರೆ ಆವರಣದಲ್ಲಿ ಹಸಿರು ಉದ್ಯಾನ

ಭಾನುವಾರ, ಜೂಲೈ 21, 2019
28 °C
ಗಾಣಕಲ್‌ನ ಈ ಸರ್ಕಾರಿ ಪ್ರಾಥಮಿಕ ಕೇಂದ್ರ ಇತರರಿಗೆ ಮಾದರಿ

ಆಸ್ಪತ್ರೆ ಆವರಣದಲ್ಲಿ ಹಸಿರು ಉದ್ಯಾನ

Published:
Updated:
Prajavani

ರಾಮನಗರ: ಕಣ್ಮನ ಸೆಳೆಯುವ ಉದ್ಯಾನ, ವಿಶಾಲವಾದ ಅಂಗಳ, ಸುಸಜ್ಜಿತ ವೈದ್ಯಕೀಯ ವ್ಯವಸ್ಥೆ, ಸ್ವಚ್ಛವಾದ ಕೊಠಡಿಗಳು...

ಇದು ತಾಲ್ಲೂಕಿನ ಬಿಡದಿ ಹೋಬಳಿಯ ಗಾಣಕಲ್‌ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಚಿತ್ರಣ.

ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವವರು ಇಲ್ಲೊಮ್ಮೆ ಭೇಟಿ ನೀಡಿದರೆ ಅಚ್ಚರಿ ಪಡುತ್ತಾರೆ. ಇಡೀ ಆಸ್ಪತ್ರೆಯ ವಾತಾವರಣ ಜನಸ್ನೇಹಿಯಾಗಿದ್ದು, ಮೆಚ್ಚುಗೆಗೆ ಪಾತ್ರವಾಗುತ್ತಿದೆ.

2010–11ರಲ್ಲಿ ನಿರ್ಮಾಣವಾದ ಆಸ್ಪತ್ರೆಯಲ್ಲಿ ಸದ್ಯ ರೋಗಿಗಳಿಗೆ ಬೇಕಾದ ಮೂಲ ಸೌಕರ್ಯಗಳೆಲ್ಲವೂ ಇವೆ. ವೈದ್ಯರ ಕೊಠಡಿ, ಡ್ರೆಸಿಂಗ್‌ ರೂಮ್‌, ಪ್ರಯೋಗಾಲಯ ಎಲ್ಲಕ್ಕೂ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಔಷಧ ಉಗ್ರಾಣ ಪ್ರತ್ಯೇಕವಾಗಿದ್ದು, ಔಷಧಗಳನ್ನು ಅಷ್ಟೇ ವ್ಯವಸ್ಥಿತವಾಗಿ ಜೋಡಿಸಿ ಇಡಲಾಗಿದೆ. ಲಭ್ಯವಿರುವ ಔಷಧಿಗಳ ಕುರಿತು ಹೊರಗೆ ಬೋರ್ಡು ತಗುಲಿ ಹಾಕಲಾಗಿದೆ.

ಇದಲ್ಲದೆ ಆಸ್ಪತ್ರೆಯ ಒಳ ಆವರಣದಲ್ಲಿಯೇ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳು ಇವೆ. ಕುಡಿಯುವ ನೀರು, ಜನರೇಟರ್‌ ಸಹಿತ ಅವಶ್ಯ ಸೌಲಭ್ಯಗಳನ್ನು ಆರೋಗ್ಯ ಇಲಾಖೆಯು ಕಲ್ಪಿಸಿದೆ.

ಸೌಕರ್ಯಗಳು ಉತ್ತಮವಾದ ಕಾರಣ ಇಲ್ಲಿಗೆ ತಪಾಸಣೆಗೆಂದು ಬರುವ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದ ಗಾಣಕಲ್ ಮತ್ತು ಸುತ್ತಲಿನ ಗ್ರಾಮಗಳ ಜನರು ಈಗ ಸರ್ಕಾರಿ ಆಸ್ಪತ್ರೆಯತ್ತ ಮುಖ ಮಾಡಿದ್ದಾರೆ. ನಿತ್ಯ 60ರಿಂದ 80ರಷ್ಟು ಹೊರರೋಗಿಗಳು ಚಿಕಿತ್ಸೆ ಪಡೆಯುವುದಾಗಿ ಇಲ್ಲಿನ ಸಿಬ್ಬಂದಿ ಹೇಳುತ್ತಾರೆ.

ಸದ್ಯ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಸಹಿತ ಎಂಟು ಸಿಬ್ಬಂದಿ ಇದ್ದಾರೆ. ಶುಶ್ರೂಷಕಿಯರು, ಪ್ರಯೋಗಾಲಯ ತಜ್ಞರ ಸಹಿತ ಅಗತ್ಯ ಸಿಬ್ಬಂದಿ ಇದ್ದಾರೆ. ಚಿಕಿತ್ಸೆಯ ಜೊತೆಗೆ ಸುತ್ತಲಿನ ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನೂ ಮಾಡುತ್ತಾ ಬಂದಿದ್ದಾರೆ.

ಆಕರ್ಷಕ ಉದ್ಯಾನ: ವಿಶಾಲವಾದ ಉದ್ಯಾನ ವ್ಯವಸ್ಥೆಯು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಇಲ್ಲಿ ಪರಿಸರ ದಿನಾಚರಣೆಯ ಸಂದರ್ಭ ಇಲ್ಲಿ ಮುನ್ನೂರಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿತ್ತು. ಅವುಗಳಲ್ಲಿ ಬಹುತೇಕ ಗಿಡಗಳು ಉಳಿದುಕೊಂಡಿದ್ದು, ಬಿರುಬಿಸಲಿನಲ್ಲೂ ನಳನಳಿಸಿ ನಗುತ್ತಿವೆ. ಸದ್ಯ ಮತ್ತಷ್ಟು ಸಸಿಗಳನ್ನು ಹೊಸತಾಗಿ ನೆಡಲಾಗಿದೆ.

ಗಿಡಗಳನ್ನು ನೆಡುವುದು ಮಾತ್ರವಲ್ಲ ಅವುಗಳಿಗೆ ನೀರು ಸರಬರಾಜು ಮಾಡಲು ಅಲ್ಲಲ್ಲಿ ನಲ್ಲಿಗಳನ್ನು ಹಾಕಲಾಗಿದೆ. ಪೈಪುಗಳ ಮೂಲಕ ಗಿಡಗಳಿಗೆ ತಪ್ಪದೇ ನೀರು ಹಾಕಲಾಗುತ್ತದೆ. ಮುಂಭಾಗದಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸುವ ಪ್ರಯತ್ನವೂ ನಡೆದಿದೆ.

ರೋಗಿಗಳು ಸೇರಿದಂತೆ ಸಾರ್ವಜನಿಕರ ಅನುಕೂಲಕ್ಕಾಗಿ ಆಸ್ಪತ್ರೆ ಉದ್ಯಾನದ ನಡುವೆ ನಡಿಗೆ ಪಥವನ್ನೂ ನಿರ್ಮಿಸಲಾಗಿದೆ. ಹೀಗಾಗಿ ಬೆಳಿಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ವಿಹರಿಸಬಹುದಾಗಿದೆ. ಆಸ್ಪತ್ರೆಯ ಸುತ್ತ ಸುಸಜ್ಜಿತವಾದ ಕಂಪೌಂಡ್‌ ವ್ಯವಸ್ಥೆ ಇದೆ.

ಸಮುದಾಯ ಸಹಭಾಗಿತ್ವ
ಆಸ್ಪತ್ರೆಯ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸಿರುವವರು ಗಾಣಕಲ್‌ನವರೇ ಆದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಿ.ಎನ್‌. ನಟರಾಜು. ‘ಅಧಿಕಾರಿಗಳು–ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳ ಶ್ರಮದಿಂದ ಇಂತಹದ್ದೊಂದು ವ್ಯವಸ್ಥೆ ರೂಪಿಸಲು ಸಾಧ್ಯವಾಯಿತು’ ಎನ್ನುತ್ತಾರೆ ಅವರು.

‘ಬನ್ನಿಕುಪ್ಪೆ (ಬಿ) ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಒಟ್ಟು 22 ನೀರುಗಂಟಿಗಳು ಇದ್ದಾರೆ. ಪ್ರತಿಯೊಬ್ಬರು 15 ದಿನಕ್ಕೆ ಒಮ್ಮೆ ಬಂದು ಕಳೆ ತೆಗೆದು, ಗಿಡಗಳಿಗೆ ನೀರು ಹಾಕಿ ಹೋಗುತ್ತಾರೆ. ಹೀಗೆ ಎಲ್ಲರೂ ಸಹಕಾರ ನೀಡುತ್ತಿದ್ದಾರೆ. ಹಿಂದೆ 380 ಗಿಡಗಳನ್ನು ನೆಡಲಾಗಿತ್ತು. ಈಗ 60 ಗಿಡಗಳನ್ನು ಹೊಸತಾಗಿ ನೆಡಲಾಗಿದೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ಅನುದಾನವನ್ನು ಬಳಸಿಕೊಳ್ಳಲಾಗುತ್ತಿದೆ. ಉತ್ತಮ ಪರಿಸರ ಇದೆ. ವೈದ್ಯರು ಮತ್ತು ಸಿಬ್ಬಂದಿಯೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಲ್ಲೂಕಿನ 19 ಆರೋಗ್ಯ ಕೇಂದ್ರಗಳ ಪೈಕಿ ಇದನ್ನು ಮಾದರಿ ಕೇಂದ್ರವನ್ನಾಗಿ ಮಾಡುವ ಗುರಿ ನಮ್ಮದು’ ಎನ್ನುತ್ತಾರೆ ಅವರು.

ಇದಲ್ಲದೆ ರಾಮನಗರ ತಾಲ್ಲೂಕಿನ ಜಾಲಮಂಗಲ, ಬನ್ನಿಕುಪ್ಪೆ, ಕೈಲಾಂಚ, ಮಂಚೇಗೌಡನ ಪಾಳ್ಯಗಳಲ್ಲಿಯೂ ನರೇಗಾ ಅಡಿ ಆಸ್‍ಪತ್ರೆಗಳ ಆವರಣದಲ್ಲಿ ಉದ್ಯಾನ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

**
ಗಾಣಕಲ್‌ ಪ್ರಾಥಮಿಕ ಆರೋಗ್ಯ ಕೇಂದ್ರವು ಇತರರಿಗೆ ಮಾದರಿ ಎಂಬಂತೆ ಇದೆ. ಉತ್ತಮ ವೈದ್ಯಕೀಯ ಸೌಲಭ್ಯದ ಜೊತೆ ಅಷ್ಟೇ ಉತ್ತಮವಾದ ಪರಿಸರ ನಿರ್ಮಾಣವಾಗಿದೆ

- ಗಾಣಕಲ್ ನಟರಾಜು, ತಾ.ಪಂ. ಅಧ್ಯಕ್ಷ

**
ಉತ್ತಮ ಚಿಕಿತ್ಸೆ, ಸೌಲಭ್ಯಗಳು ಆಸ್ಪತ್ರೆಯಲ್ಲಿ ದೊರಕುವ ಕಾರಣ ಹೆಚ್ಚಿನವರು ಇಲ್ಲಿಗೆ ಬರುತ್ತಿದ್ದಾರೆ. ವೈದ್ಯರು ಮತ್ತು ಸಿಬ್ಬಂದಿಯ ಸ್ಪಂದನೆಯು ಉತ್ತಮವಾಗಿದೆ

- ಸತೀಶ್‌, ಗ್ರಾ.ಪಂ. ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !