ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ಗ್ರಾಮ ಮಾಡಲು ಪಣ

ಜೋಗರದೊಡ್ಡಿ ಮತ್ತು ಬೈರವನದೊಡ್ಡಿ ಗ್ರಾಮಸ್ಥರಿಗೆ ಸಮರ್ಪಣೆ
Last Updated 9 ನವೆಂಬರ್ 2019, 17:30 IST
ಅಕ್ಷರ ಗಾತ್ರ

ಬಿಡದಿ: ಸಾಮಾಜಿಕ ಕಳಕಳಿ ಹೊಂದಿರುವ ಹಿಂದೂಸ್ತಾನ್ ಕೋಕಾ ಕೋಲಾ ಬೆವರೇಜಸ್ (ಎಚ್‌ಸಿಸಿಬಿ) ಕಂಪನಿ ತನ್ನ ಘಟಕಗಳ ಸುತ್ತತಲಿನ ಗ್ರಾಮಗಳನ್ನು ಸಮಗ್ರ ಅಭಿವೃದ್ಧಿ ಪಡಿಸುವ ಮೂಲಕ ಗ್ರಾಮೀಣ ಜನರ ಬದುಕನ್ನು ಹಸನು ಮಾಡುವ ಪಣತೊಟ್ಟಿದೆ ಎಂದು ಕಂಪನಿಯ ದಕ್ಷಿಣ ಸಮೂಹದ ಮುಖ್ಯಸ್ಥ ಮೋಹನ್ ಸಿಂಗ್ ಹೇಳಿದರು.

ತಾಲ್ಲೂಕಿನ ಬಿಡದಿ ಹೋಬಳಿಯ ಜೋಗರದೊಡ್ಡಿ ಸರ್ಕಾರಿ ಶಾಲೆಯ ಆವರಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾದರಿ ಗ್ರಾಮಗಳಾಗಿ ಪರಿವರ್ತನೆಗೊಂಡಿರುವ ಜೋಗರದೊಡ್ಡಿ ಮತ್ತು ಬೈರವನದೊಡ್ಡಿ ಗ್ರಾಮಗಳನ್ನು ಗ್ರಾಮಸ್ಥರಿಗೆ ಸಮರ್ಪಿಸಿ ಅವರು ಮಾತನಾಡಿದರು.

ಕಂಪನಿಯು ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಚಟುವಟಿಕೆ ಅಡಿಯಲ್ಲಿ ಈ ಗ್ರಾಮಗಳನ್ನು ದತ್ತು ಪಡೆದುಕೊಂಡು ಶುದ್ಧ ಕುಡಿಯುವ ನೀರಿನ ಘಟಕ, ನಿರುದ್ಯೋಗಿಗಳಿಗೆ ಕೌಶಲ ತರಬೇತಿ, ಸರ್ಕಾರಿ ಶಾಲೆಗಳಲ್ಲಿ ಮೂಲಸೌಲಭ್ಯಗಳನ್ನು ವೃದ್ಧಿಸಿ ಕಲಿಕೆಯ ವಾತಾವರಣ ನಿರ್ಮಿಸುವಂತಹ ಕೆಲಸಗಳನ್ನು ಮಾಡಿದೆ ಎಂದರು.

ವಿಶ್ವದಾದ್ಯಂತ ತಮ್ಮ ಕಂಪನಿಯ ಘಟಕಗಳು ಸ್ಥಾಪನೆಯಾಗಿರುವ ಸ್ಥಳಗಳಲ್ಲಿ ಇಂತಹದ್ದೇ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಘಟಕದ ಸುತ್ತ ಇರುವ ಸ್ಥಳೀಯರ ಜೊತೆ ನಿರಂತರ ಒಡನಾಟ ಬೆಳೆಸಿಕೊಳ್ಳುವುದು ವಾಡಿಕೆ. 3 ವರ್ಷಗಳ ಹಿಂದೆ ಈ ಎರಡೂ ಗ್ರಾಮಗಳನ್ನು ದತ್ತು ಪಡೆಯಲಾಗಿತ್ತು ಎಂದರು.

ಸಾರ್ವಜನಿಕ ವಿದ್ಯಮಾನಗಳು ಮತ್ತು ಸಂವಹನ ವಿಭಾಗದ ಉಪಾಧ್ಯಕ್ಷ ಉಮೇಶ್ ಮಲ್ಲಿಕ್ ಮಾತನಾಡಿ, ಮಾದರಿ ಗ್ರಾಮವಾಗಿ ರೂಪುಗೊಂಡಿದ್ದ ಮೇಡನಹಳ್ಳಿ ಗ್ರಾಮವನ್ನು ಕಳೆದ ವರ್ಷ ಸಾರ್ವಜನಿಕರಿಗೆ ಸಮರ್ಪಿಸಲಾಗಿದೆ. ಇಂದು ಮತ್ತೆ 2 ಗ್ರಾಮಗಳನ್ನು ಸಮರ್ಪಿಸಲಾಗಿದೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಗ್ರಾಮಗಳನ್ನು ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು.

ಕೃಷಿಕರಿಗೆ ಉಪಯುಕವಾಗಿರುವ ಕೃಷಿ ಹೊಂಡಗಳನ್ನು ಈ ಬಾರಿ ನಿರ್ಮಿಸಿಕೊಡಲಾಗಿದೆ. ಶಾಲೆಯ ಮಕ್ಕಳಲ್ಲಿ ಸ್ವಚ್ಚತೆಯ ಅರಿವು ಮೂಡಿಸಲಾಗಿದೆ. ಪರಿಸರ ಕಾಳಜಿಯ ಬಗ್ಗೆ ಗ್ರಾಮಸ್ಥರಲ್ಲಿ ಜನ ಜಾಗೃತಿ ನೀಡಲಾಗುತ್ತಿದೆ. ತ್ಯಾಜ್ಯ ವಿಲೇವಾರಿ ವಿಚಾರದಲ್ಲಿ ಗ್ರಾಮಸ್ಥರು ಸ್ಪಂದಿಸುತ್ತಿದ್ಧಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಬಿಡದಿ ಪುರಸಭೆಯ ಹಿಂದಿನ ಅಧ್ಯಕ್ಷೆ ವೆಂಕಟೇಶಮ್ಮ ರಾಮಕೃಷ್ಣಯ್ಯ ಮಾತನಾಡಿ, ಹಿಂದೂಸ್ತಾನ್ ಕೋಕಾ ಕೋಲಾ ಬೆವರೇಜಸ್ ಕಂಪನಿಯು ಗ್ರಾಮಗಳನ್ನು ದತ್ತು ಪಡೆದು ಹಲವಾರು ಜನಪರ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಿಕೊಟ್ಟಿದೆ ಎಂದು ತಿಳಿಸಿದರು.

ಬಿಡದಿ ಕೈಗಾರಿಕೆಗಳ ಸಂಘದ ಅಧ್ಯಕ್ಷ ರಾಜೇಂದ್ರ ಹೆಗ್ಡೆ, ಪುರಸಭೆಯ ಮುಖ್ಯಾಧಿಕಾರಿ ಚೇತನ್ ಎಸ್.ಕೊಳವಿ, ಕೆಪಿಜೆ ಕರಕುಶಲ ತರಬೇತಿ ಕೇಂದ್ರದ ನಿರ್ದೇಶಕ ನಾರಾಯಣ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮೀಸೆ ರಾಮಕೃಷ್ಣಯ್ಯ ಮಾತನಾಡಿದರು.

ಶ್ರಮಿಕರಾಗಿ ಸೇವೆ ಸಲ್ಲಿಸುತ್ತಿರುವ ನಾಲ್ವರು ಮಹಿಳೆಯರನ್ನು ಫಲಕ, ಹಾರ ನೀಡಿ ಗೌರವಿಸಲಾಯಿತು. ರಾಮಕೃಷ್ಣಯ್ಯ, ಬಸವರಾಜು, ಮಲ್ಲಪ್ಪ, ಶಿವಲಿಂಗಯ್ಯ, ಸತ್ಯಮೂರ್ತಿ, ಮಾದಣ್ಣ ಸೀನಪ್ಪ, ನಾಗೇಶ್, ಕೋಕಾ ಕೋಲಾ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ವಿನೋದ್ ಜಕಾತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT