ಮಂಗಳವಾರ, ಡಿಸೆಂಬರ್ 10, 2019
19 °C

ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್‌ ಸವಾರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ಗುರುವಾರ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಬೈಕ್‌ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಇಲ್ಲಿನ ಕಸಬಾ ಹೋಬಳಿ ನಾರಾಯಣಪುರ ಗ್ರಾಮದ ನಾಗರಾಜು ಅವರ ಮಗ ಅವಿನಾಶ್‌ (25) ಮೃತ ಯುವಕ. ಇವರು ತಮ್ಮ ಅಜ್ಜಿ ಮನೆಯಾದ ಶ್ರೀನಿವಾಸನಹಳ್ಳಿಯಲ್ಲಿ ಅಜ್ಜಿಯೊಂದಿಗೆ ವಾಸವಿದ್ದು ಕನಕಪುರ ಬೂದಿಕೆರೆಯಲ್ಲಿ ರಾಜು ಎಂಬುವರ ವೆಲ್ಡಿಂಗ್‌ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು.

ಪ್ರತಿ ದಿನ ತನ್ನ ಬೈಕ್‌ನಲ್ಲಿ ಶ್ರೀನಿವಾಸನಹಳ್ಳಿಯಿಂದ ಅಂಗಡಿಗೆ ಬಂದು ಕೆಲಸ ಮುಗಿಸಿ ರಾತ್ರಿ ವಾಪಸಾಗುತ್ತಿದ್ದರು. ಅದರಂತೆ ಗುರುವಾರ ಸಂಜೆ ಕೆಲಸ ಮುಗಿಸಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಹೀರೋ ಶೋ ರೂಂ ಮುಂಭಾಗ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಅವಿನಾಶ್‌ಗೆ ತಲೆ, ಎದೆಭಾಗ ಮತ್ತು ಹೊಟ್ಟೆಭಾಗಕ್ಕೆ ಬಲವಾದ ಪೆಟ್ಟುಬಿದ್ದಿತ್ತು.

ಹಿಂಬದಿಯ ಸವಾರ ಬೆಟ್ಟಳ್ಳಿ ಗ್ರಾಮದ ಶಿವಕುಮಾರ್‌ (25) ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ತೀವ್ರವಾಗಿ ಗಾಯಗೊಂಡಿದ್ದ ಅವಿನಾಶ್‌ ಅವರನ್ನು ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್‌ಗೆ ಸೇರಿಸಲಾಗಿತ್ತು. ಅಲ್ಲಿಂದ ಸೆಂಟ್‌ಜಾನ್‌ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು.

ಸೋಮವಾರ ರಾತ್ರಿ ನಿಧನರಾಗಿದ್ದು ಮಂಗಳವಾರ ಬೆಳಿಗ್ಗೆ ನಾರಾಯಣಪುರ ಗ್ರಾಮಕ್ಕೆ ಮೃತದೇಹವನ್ನು ತಂದಿದ್ದು ಮಧ್ಯಾಹ್ನದ ವೇಳೆಗೆ ಅಂತ್ಯ ಸಂಸ್ಕಾರ ನೆರವೇರಿತು. ಘಟನೆ ಸಂಬಂಧ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತವಾದ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಪ್ರತಿಕ್ರಿಯಿಸಿ (+)