ಬಿಡದಿ (ರಾಮನಗರ): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಬಿಜೆಪಿ–ಜೆಡಿಎಸ್ ಮೈತ್ರಿಕೂಟ ಹಮ್ಮಿಕೊಂಡಿರುವ ಪಾದಯಾತ್ರೆ ಅಸ್ತ್ರಕ್ಕೆ ಪ್ರತಿಯಾಗಿ, ಕಾಂಗ್ರೆಸ್ ಪಕ್ಷವು ಒಂದು ದಿನ ಮುಂಚೆ ಪ್ರಯೋಗಿಸಿರುವ ‘ಜನಾಂದೋಲನ’ದ ಪ್ರತ್ಯಸ್ತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿತು.
ಪಟ್ಟಣದ ಬಿಜಿಎಸ್ ವೃತ್ತದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ, ವಿವಿಧ ಭಾಗಗಳಿಂದ ಬಂದಿದ್ದ ಪಕ್ಷದ ಕಾರ್ಯಕರ್ತರು ಕಿಕ್ಕಿರಿದು ಸೇರಿದ್ದರು. ಕಾಂಗ್ರೆಸ್ ನಾಯಕರು ತಮ್ಮ ಭಾಷಣದಲ್ಲಿ ವಿರೋಧ ಪಕ್ಷದ ನಾಯಕರಿಗೆ ಆಕ್ರೋಶದಿಂದ ಸವಾಲು ಹಾಕುತ್ತಿದ್ದರೆ, ಕಾರ್ಯಕರ್ತರು ಚಪ್ಪಾಳೆ ತಟ್ಟಿ ಶಿಳ್ಳೆ ಹಾಕಿ ಹುರಿದುಂಬಿಸುತ್ತಿದ್ದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದಿಡಿದು ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಎಲ್ಲಾ ನಾಯಕರು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ವಿರುದ್ಧ ಗುಡುಗಿದರು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಕೆಲ ಹಗರಣಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ವ್ಯಕ್ತಪಡಿಸಿದರು. ಹಗರಣಗಳ ಕುರಿತು ಪ್ರಶ್ನೆ ಎತ್ತಿ, ಉತ್ತರಿಸುವಂತೆ ವಿರೋಧ ಪಕ್ಷದವರಿಗೆ ಸವಾಲು ಹಾಕಿದರು.
‘ಸ್ವಾಭಿಮಾನ ಬಿಡುವುದಿಲ್ಲ’: ಶಿವಕುಮಾರ್ ಮಾತನಾಡಿ, ‘ಬೆಂಗಳೂರು ನಿರ್ಮಾತೃ ಕೆಂಪೇಗೌಡರು, ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿ ಇಲ್ಲಿ ಜನಿಸಿದ್ದಾರೆ. ನಾವು ಬೆಂಗಳೂರಿನವರು. ಈ ಭಾಗ ಬೆಂಗಳೂರಿನಿಂದ ಬೆಂಗಳೂರು ಗ್ರಾಮಾಂತರವಾಗಿತ್ತು. ಇದೀಗ, ಮತ್ತೆ ಬೆಂಗಳೂರು ಭಾಗವಾಗಿದೆ. ನಮ್ಮ ಸ್ವಾಭಿಮಾನ ಬಿಟ್ಟುಕೊಡಲು ಸಾಧ್ಯವಿಲ್ಲ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಗುಡುಗಿದರು.
‘ನೀವು ಇಲ್ಲಿ ಬಂದು ಜನರ ಮತಗಳ ಆಧಾರದ ಮೇಲೆ ಅಧಿಕಾರ ಮಾಡಿದ್ದೀರಿ. ಅದಕ್ಕೆ ನಮ್ಮ ಆಕ್ಷೇಪವಿಲ್ಲ. ನಿಮ್ಮ ತಂದೆ ದೇವೇಗೌಡರು ಪ್ರಧಾನಿಯಾದ ಜಾಗದಲ್ಲೇ ಸಿ.ಎಂ. ಲಿಂಗಪ್ಪ ಅವರು ಗೆದ್ದಿರುವ ಇತಿಹಾಸವನ್ನು ಯಾರೂ ಬದಲಿಸಲು ಸಾಧ್ಯವಿಲ್ಲ. ಜನ ಏನು ಬೇಕಾದರೂ ತೀರ್ಮಾನ ಮಾಡಲು ಅವಕಾಶವಿದೆ’ ಎಂದು ತಿಳಿಸಿದರು.
ಬಸ್‌ಗಳಲ್ಲಿ ಬಂದ ಜನ: ಕಾರ್ಯಕ್ರಮಕ್ಕೆ ಮಾಗಡಿ ವಿಧಾನಸಭಾ ಕ್ಷೇತ್ರ ಸೇರಿದಂತೆ ಆನೇಕಲ್ ಮತ್ತು ನೆಲಮಂಗಲದಿಂದಲೂ ಕಾಂಗ್ರೆಸ್ ಕಾರ್ಯಕರ್ತರನ್ನು ಬಸ್‌ಗಳಲ್ಲಿ ಕರೆಸಲಾಗಿತ್ತು. ಹಲವರು ಸ್ವಂತ ವಾಹನಗಳಲ್ಲಿ ಸಹ ಬಂದಿದ್ದರು. ಪಟ್ಟಣದ ವಿವಿಧೆಡೆ ಬಸ್‌ಗಳು ಮತ್ತು ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಡಿಸಿಎಂ ಬಂದಾಗ ಮತ್ತು ಹೊರಡುವಾಗ ಕೆಲ ಹೊತ್ತು ಸಂಚಾರ ದಟ್ಟಣೆ ಕಂಡುಬಂತು.
ಶಾಸಕರಾದ ಅಜಯ್ ಸಿಂಗ್, ಆನೇಕಲ್ ಶಿವಣ್ಣ, ಎಂ.ಸಿ. ಶ್ರೀನಿವಾಸ್, ಶ್ರೀನಿವಾಸ್, ಭೀಮಣ್ಣ ನಾಯ್ಕ, ರಿಜ್ವಾನ್ ಅರ್ಷದ್, ವಿಧಾನ ಪರಿಷ್ ಸದಸ್ಯರಾದ ಪುಟ್ಟಣ್ಣ, ಎಸ್. ರವಿ, ನಜೀರ್ ಅಹ್ಮದ್, ರಾಮೋಜಿ ಗೌಡ, ಮಾಜಿ ಸಂಸದ ಡಿ.ಕೆ. ಸುರೇಶ್, ಮಾಜಿ ಶಾಸಕರಾದ ಸಿ.ಎಂ. ಲಿಂಗಪ್ಪ, ಪ್ರಕಾಶ್ ರಾಥೋಡ್, ವಿ.ಆರ್. ಸುದರ್ಶನ್, ಎಂ.ಸಿ. ಅಶ್ವಥ್, ವೀಣಾ ಕಾಶಪ್ಪನವರ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್ ಹಾಗೂ ಸ್ಥಳೀಯ ನಾಯಕರು ಇದ್ದರು.
ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕಾಗಿರುವ ಅನ್ಯಾಯದ ಕುರಿತು ದನಿ ಎತ್ತದ ಹಾಗೂ ಮಂಡ್ಯ ಮತ್ತು ರಾಮನಗರಕ್ಕೆ ಯಾವುದೇ ಯೋಜನೆ ತರದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾರಕ್ಕೊಮ್ಮೆ ರಾಜ್ಯಕ್ಕೆ ಬಂದು ತೀಟೆ ಮಾಡುತ್ತಿದ್ದಾರೆ– ಎಚ್.ಸಿ. ಬಾಲಕೃಷ್ಣ ಮಾಗಡಿ ಶಾಸಕ
ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರ ಭ್ರಷ್ಟಾಚಾರದಿಂದಾಗಿಯೇ ಅಧಿಕಾರ ಕಳೆದುಕೊಂಡಿತು. ಜನಾದೇಶವಿರುವ ಕಾಂಗ್ರೆಸ್ ಸರ್ಕಾರ ಕೆಡವಲು ಯತ್ನಿಸುತ್ತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು– ಎಸ್. ರವಿ ವಿಧಾನ ಪರಿಷತ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.