ಮಂಗಳವಾರ, ಫೆಬ್ರವರಿ 18, 2020
20 °C

ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ, ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ಪತ್ನಿಯನ್ನು ಕರೆದುಕೊಂಡು ಹೋದ ವ್ಯಕ್ತಿಯನ್ನು ಕೊಲೆಮಾಡಿದ್ದ ವ್ಯಕ್ತಿ ಮತ್ತು ಕೊಲೆಗೆ ಸಹಕರಿಸಿದವರನ್ನು ಅಪರಾಧಿಗಳೆಂದು ಪರಿಗಣಿಸಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಬುಧವಾರ ಜೀವಾವಧಿ ಶಿಕ್ಷೆ ಮತ್ತು ತಲಾ ₹1 ಲಕ್ಷ ದಂಡ ವಿಧಿಸಿದೆ.

ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಚಂಬಳಿಕೆದೊಡ್ಡಿ ಗ್ರಾಮದ ಸ್ವಾಮಿ ಕೊಲೆ ಮಾಡಿದ ಆರೋಪ, ಶಿವಣ್ಣ, ಕರಿಯಪ್ಪ, ಈರೇಗೌಡ ಕೊಲೆಗೆ ಸಹಕರಿಸಿದ ಆರೋಪದಡಿ ಶಿಕ್ಷೆ ವಿಧಿಸಿ ಆದೇಶ ನೀಡಲಾಗಿದೆ.

ಘಟನೆಯ ವಿವರ: 2018 ಏಪ್ರಿಲ್‌ 21 ರಂದು ಚಂಬಳಿಕೆದೊಡ್ಡಿ ಗ್ರಾಮದ ಸ್ವಾಮಿಯ ಪತ್ನಿಯನ್ನು ಕೊಲೆಯಾಗಿರುವ ನಂಜಯ್ಯ ಕರೆದುಕೊಂಡು ಹೋಗಿದ್ದು 2018 ಏಪ್ರಿಲ್‌ 28 ಕ್ಕೆ ವಾಪಸ್‌ ಕಳಿಸಿ ತಲೆಮರೆಸಿಕೊಂಡಿದ್ದ. 2018 ಜೂನ್‌ 9 ರಂದು ನಂಜಯ್ಯ ಗ್ರಾಮಕ್ಕೆ ಬಂದಿದ್ದ.

ಆತನಿಗಾಗಿ ಕಾಯುತ್ತಿದ್ದ ಸ್ವಾಮಿ ಗ್ರಾಮದವರಾದ ಶಿವಣ್ಣ, ಕರಿಯಪ್ಪ, ಈರೇಗೌಡ, ಶಿವನೇಗೌಡ, ಚಿಕ್ಕೇಗೌಡ, ಬಸಮ್ಮ ಗುಂಪು ಕಟ್ಟಿಕೊಂಡು ನಂಜಯ್ಯನ ಮನೆಗೆ ನುಗ್ಗಿದ್ದರು. ನಂಜಯ್ಯನ ಪತ್ನಿ ಮತ್ತು ಅತ್ತೆಯ ಕಣ್ಮುಂದೆ ಆತನನ್ನು ಹೆಗಲ ಮೇಲೆ ಎತ್ತಿಕೊಂಡು ಗ್ರಾಮದ ಕಬ್ಬಾಳಮ್ಮನ ದೇವಾಲಯದ ಬಳಿಗೆ ತಂದು ಎರಡು ಕಾಲು ಮತ್ತು ಎರಡು ಕೈಗಳನ್ನು ಮುರಿದು ಆಕ್ರೋಶ ವ್ಯಕ್ತಪಡಿಸಿದ್ದರು. ಹಲ್ಲೆಗೊಳಗಾಗಿದ್ದ ನಂಜಯ್ಯನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು 2018 ರ ಜೂನ್‌ 11 ರಂದು  ಮಧ್ಯರಾತ್ರಿ ಮೃತಪಟ್ಟಿದ್ದರು.

ಈ ಬಗ್ಗೆ ಮೃತನ ಸಹೋದರ ಶಿವಶಂಕರ್‌ ನೀಡಿದ ದೂರಿನ ಮೇರೆಗೆ ಕೋಡಿಹಳ್ಳಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಅಂದಿನ ಕನಕಪುರ ಸರ್ಕಲ್‌ ಇನ್‌ಸ್ಪೆಕ್ಟರ್‌ ಕೆ.ಮಲ್ಲೇಶ್‌ ತನಿಖೆ ಕೈಗೊಂಡು ಸ್ವಾಮಿ, ಶಿವಣ್ಣ, ಕರಿಯಪ್ಪ, ಈರೇಗೌಡ ಅವರ‌ನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಒಂದು ವ‍ರ್ಷದಿಂದ ಆರೋಪಿಗಳು ಜೈಲಿನಲ್ಲಿದ್ದರು.

ತನಿಖಾಧಿಕಾರಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆದಿದ್ದು, ಸರ್ಕಾರದ ಪರ ಪ್ರಾಸಿಕ್ಯೂಟರ್‌ ಟಿ.ಎಂ.ನರೇಂದ್ರ ವಾದ ಮಂಡಿಸಿದ್ದರು.

ವಾದ ವಿವಾದಗಳನ್ನು ಆಲಿಸಿದ ನ್ಯಾಯಾಧೀಶ ಶಂಕರಪ್ಪ ನಿಂಬಣ್ಣ ಕಲ್ಕಣಿ, ಒಳಸಂಚು ರೂಪಿಸಿ ಕೊಲೆ ಮಾಡಿರುತ್ತಾರೆ ಎಂದು ತಿಳಿಸಿ ಆದೇಶ ನೀಡಿದರು.

ಕೆ.ಮಲ್ಲೇಶ್‌ ನೇತೃತ್ವದಲ್ಲಿ ನಡೆದ ತನಿಖೆಗೆ ಎಸ್‌.ಐ. ಕುಮಾರಸ್ವಾಮಿ, ತನಿಖಾ ಸಹಾಯಕ ಮೋಹನ್‌, ಸಿಬ್ಬಂದಿ ಶಂಕರ್‌, ಮಂಜು ಮಹದೇವ್‌, ಶಿವಶಂಕರ್‌, ವೆಂಕಟೇಗೌಡ ಸಹಕರಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು