ರಾಮನಗರ: ಐದು ವರ್ಷದ ಹಿಂದೆ ಊರಾಚೆ ಪತ್ನಿಯನ್ನು ಕೊಲೆ ಮಾಡಿ ಶವ ಹೂತು ಹಾಕಿದ್ದ ಪತಿ, ಮತ್ತೆ ಶವ ಹೊರತೆಗೆದು ತನ್ನ ಜಮೀನಿಗೆ ತಂದು ಹೂತಿದ್ದ. ಸಿಕ್ಕಿ ಹಾಕಿಕೊಳ್ಳುವ ಭಯದಿಂದ ಎರಡು ವರ್ಷದ ನಂತರ ಶವ ಹೊರತೆಗೆದು ಸುಟ್ಟು ಹಾಕಿ ಸಾಕ್ಷ್ಯನಾಶ ಮಾಡಿದ್ದ. ಕನ್ನಡದ ‘ದೃಶ್ಯ’ ಸಿನಿಮಾದಿಂದ ಸ್ಫೂರ್ತಿ ಪಡೆದು ಕೃತ್ಯ ಎಸಗಿ ಪಾರಾಗಲು ಯತ್ನಿಸಿದ್ದ. ಮತ್ತೊಂದು ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ತನ್ನ ಕೃತ್ಯ ಬಾಬ್ಬಿಟ್ಟು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ತಾಲ್ಲೂಕಿನ ಹೂಜಗಲ್ ಗ್ರಾಮದ ಕಿರಣ್ (37) ಬಂಧಿತ ಆರೋಪಿ. ಪೂಜಾ (28) ಕೊಲೆಯಾದವರು. ಹದಿನೈದು ದಿನಗಳ ಹಿಂದೆ ಗ್ರಾಮದ ಹೊರವಲಯದ ಚೀಳೂರು ಬೆಟ್ಟದಲ್ಲಿ ಉಮೇಶ್ ಎಂಬಾತ, ತನ್ನ ಪತ್ನಿ ದಿವ್ಯ ಎಂಬುವರನ್ನು ಆಗಸ್ಟ್ 12ರಂದು ಕೊಲೆ ಮಾಡಿದ್ದ. ಅದಕ್ಕೆ ಸ್ನೇಹಿತ ಕಿರಣ್ ಸಾಥ್ ಕೊಟ್ಟಿದ್ದ. ಆತನನ್ನು ಮಾಗಡಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಹಿಂದಿನ ಕೃತ್ಯ ಬೆಳಕಿಗೆ ಬಂದಿದೆ.
ಶಂಕಾಸ್ಪದ ಹೇಳಿಕೆ: ದಿವ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಣ್‌ನನ್ನು ವಿಚಾರಣೆ ನಡೆಸುವಾಗ, ‘ನಿನಗೆ ಮದುವೆಯಾಗಿದೆಯೇ’ ಎಂದು ಪ್ರಶ್ನಿಸಲಾಯಿತು. ಅದಕ್ಕೆ ಆತ, ‘ಮದುವೆಯಾಗಿದ್ದು ಸದ್ಯ 5 ವರ್ಷದ ಮಗಳಿದ್ದಾಳೆ. ಆದರೆ, ಹತ್ತು ವರ್ಷದ ಹಿಂದೆ ಪತ್ನಿ ಬೇರೊಬ್ಬನ ಜತೆ ಓಡಿ ಹೋಗಿದ್ದಾಳೆ. ಇದುವರೆಗೆ ಸಿಕ್ಕಿಲ್ಲ. ಕಾಣೆಯಾಗಿರುವ ಕುರಿತು ದೂರು ಕೊಟ್ಟಿದ್ದೇನೆ’ ಎಂದು ಹೇಳಿಕೆ ನೀಡಿದ್ದ ಎಂದು ಪೊಲೀಸರು ಹೇಳಿದರು.
ಆತನ ಹೇಳಿಕೆ ಮೇರೆಗೆ ಠಾಣೆಯಲ್ಲಿ ಪರಿಶೀಲಿಸಿದಾಗ ದೂರು ಬಂದಿಲ್ಲದಿರುವುದು ಗೊತ್ತಾಯಿತು. ಮತ್ತೆ ವಿಚಾರಿಸಿದಾಗ, ‘ಐದು ವರ್ಷದ ಹಿಂದೆ ಇಬ್ಬರು ಸ್ನೇಹಿತರೊಂದಿಗೆ ಬಂದು ದೂರು ಕೊಟ್ಟಿದ್ದೇನೆ’ ಎಂದಿದ್ದ. ‘ಸ್ನೇಹಿತರನ್ನು ವಿಚಾರಿಸಿದಾಗ, ನಾವ್ಯಾರೂ ಬಂದೇ ಇಲ್ಲ. ಕಿರಣ್ ಸುಳ್ಳು ಹೇಳುತ್ತಿದ್ದಾನೆ’ ಎಂದಿದ್ದರು.
ಅನುಮಾನದ ಮೇರೆಗೆ ಪೂಜಾ ಅವರ ತಾಯಿ ಗೌರಮ್ಮ ಅವರನ್ನು ವಿಚಾರಿಸಿದಾಗ, ‘ಐದು ವರ್ಷದಿಂದ ಮಗಳು ಕಾಣುತ್ತಿಲ್ಲ. ಇವನು ಅದೇನು ಮಾಡಿದ್ದಾನೊ ಗೊತ್ತಿಲ್ಲ’ ಎಂದು ಹೇಳಿದರು. ಕಿರಣ್ ಮತ್ತು ಇತರರ ಹೇಳಿಕೆ ತಾಳೆಯಾಗದಿದ್ದಾಗ, ಮತ್ತೆ ಆತನನ್ನು ವಿಚಾರಣೆ ನಡೆಸಿದಾಗ ಕೃತ್ಯ ಬಾಯಿಟ್ಟ ಎಂದು ಪೊಲೀಸರು ಹೇಳಿದರು.
ಆರೋಪಿ ಕಿರಣ್
ಆರೋಪಿ ಕಿರಣ್ ತನ್ನ ಜಮೀನಿನಲ್ಲಿ ಹೂತಿದ್ದ ಶವವನ್ನು ಹೊರತೆಗೆದು ಸುಟ್ಟು ಹಾಕಿದ್ದ ಸ್ಥಳವನ್ನು ಅಗೆದಾಗ ಸಿಕ್ಕ ಮೂಳೆ ಹಲ್ಲು ಹಾಗೂ ತಲೆಕೂದಲನ್ನು ಮಹಜರು ಮಾಡಲಾಯಿತು. ತಹಶೀಲ್ದಾರ್ ಶರತ್‌ಕುಮಾರ್ ಮಾಗಡಿ ಇನ್‌ಸ್ಪೆಕ್ಟರ್ ಗಿರಿರಾಜ್ ಎಫ್‌ಎಸ್‌ಎಲ್ ಅಧಿಕಾರಿಗಳು ಹಾಗೂ ಪೊಲೀಸರು ಇದ್ದಾರೆ