ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನವ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಿದ ಧೀಮಂತ’

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 135ನೇ ಜಯಂತ್ಯುತ್ಸವ ಆಚರಣೆ
Last Updated 5 ಜೂನ್ 2019, 15:43 IST
ಅಕ್ಷರ ಗಾತ್ರ

ರಾಮನಗರ: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನವ ಕರ್ನಾಟಕದ ಅಭಿವೃದ್ದಿಗೆ ಅಂದೇ ಹಲವು ಯೋಜನೆಗಳನ್ನು ಜಾರಿಗೊಳಿಸಿದರು ಎಂದು ಹಿರಿಯ ಸಂಶೋಧಕ ಡಾ. ಮುನಿರಾಜಪ್ಪ ಹೇಳಿದರು.

ಇಲ್ಲಿನ ಸ್ಪೂರ್ತಿ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 135 ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಒಡೆಯರ್ ತಮ್ಮ ಅಧಿಕಾರಾವಧಿಯಲ್ಲಿ ಜಾರಿಗೊಳಿಸಿದ ಗ್ರಾಮ ನೈರ್ಮಲೀಕರಣ, ವೈದ್ಯ ಸಹಾಯ, ವಿದ್ಯಾ ಪ್ರಚಾರ, ನೀರಿನ ಸೌಕರ್ಯ, ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳು ಸ್ವಯಂ ಆಡಳಿತ ಸಂಸ್ಥೆಗಳಾಗಿವೆ ಎಂದು ತಿಳಿಸಿದರು.

1907ರಲ್ಲಿ 'ವಾಣೀವಿಲಾಸ ಸಾಗರ'(ಮಾರಿ ಕಣಿವೆ) ಕಟ್ಟಲ್ಪಟ್ಟಿತು. 1911 ರಲ್ಲಿ ಆರಂಭವಾದ 'ಕೃಷ್ಣರಾಜ ಸಾಗರ' ಭಾರತದ ಮೊಟ್ಟ ಮೊದಲ ಬೃಹತ್ ಜಲಾಶಯ. 1900ರಲ್ಲಿಯೇ ಶಿವನ ಸಮುದ್ರದ ಬಳಿ ಕಾವೇರಿ ನದಿಯಿಂದ ಜಲ ವಿದ್ಯುತ್ ಕೇಂದ್ರ ಆರಂಭವಾಯಿತು. ಇದು ಭಾರತದ ಮೊದಲ ಜಲ ವಿದ್ಯುತ್ ಕೇಂದ್ರ. ಏಷ್ಯಾ ಖಂಡದಲ್ಲೇ ಮೊದಲ ಜಲ ವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದ ಕೀರ್ತಿ ನಾಲ್ವಡಿಯವರದು. ಇದರ ಫಲಿತಾಂಶವಾಗಿ 1905 ಆಗಸ್ಟ್ 3 ರಂದು ಪ್ರಥಮವಾಗಿ ಬೆಂಗಳೂರಿನಲ್ಲಿ ದೀಪಗಳು ಬೆಳಗಿದವು ಎಂದರು.

ಇದಲ್ಲದೆ 1909 ರಲ್ಲಿ ದೇವದಾಸಿ ಪದ್ಧತಿ ನಿಷೇಧ, 1910 ರಲ್ಲಿ ಬಸವಿ ಪದ್ಧತಿ ರದ್ಧತಿ, 1910 ರಲ್ಲಿ 'ಗೆಜ್ಜೆಪೂಜೆ' ಪದ್ಧತಿ ಸಂಪೂರ್ಣ ನಿರ್ಮೂಲನೆ, 1936 ಜುಲೈ 14 ರಂದು ವೇಶ್ಯಾವೃತ್ತಿ ತಡೆಗಟ್ಟುವ ಕಾಯ್ದೆ ಜಾರಿ, 1936 ಜುಲೈ 7 ರಂದು ವಿಧವೆಯರಿಗೆ ಮರುವಿವಾಹ ಮಾಡಿಕೊಳ್ಳುವ ಕಾಯ್ದೆಯ ಜಾರಿ, 1936 ಜುಲೈ 7 ರಂದು ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ ಜಾರಿ, 1914 ರಲ್ಲಿ ಶಾಲಾ ಪ್ರವೇಶಕ್ಕೆ ಜಾತಿ ಪರಿಗಣನೆಯ ನಿಷೇಧ, 1919 ರಲ್ಲಿ ಮಾಧ್ಯಮಿಕ ಶಾಲಾ ಮಟ್ಟದಲ್ಲಿ ಶಿಕ್ಷಣ ಶುಲ್ಕ ರದ್ಧತಿ, 1927 ರಲ್ಲಿ ಸ್ತ್ರೀಯರಿಗೆ ಮತದಾನದ ಹಕ್ಕನ್ನು ಮೊಟ್ಟಮೊದಲ ಬಾರಿಗೆ ಕಲ್ಪಿಸಿಕೊಟ್ಟರು, 1905 ರಲ್ಲಿ ಸಹಕಾರಿ ಕಾರ್ಮಿಕ ಪರಿಹಾರ ಕಾಯ್ದೆಯನ್ನು ಜಾರಿಗೆ ತಂದರು. 1913 ರಲ್ಲಿ ಮೈಸೂರು ಗ್ರಾಮ ನ್ಯಾಯಾಲಯ ಕಾಯ್ದೆಯನ್ನು ಜಾರಿ ಮಾಡಿದರು. 1918 ರಲ್ಲಿ ಗ್ರಾಮ ಪಂಚಾಯ್ತಿಗಳ ಕಾಯ್ದೆಯನ್ನು ಜಾರಿಗೆ ತಂದರು ಎಂದು ಅವರು ಹೇಳಿದರು.

1914ರಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಸ್ಕೂಲ್ ಅನ್ನು ಆರಂಭಿಸಿದರು. ಈ ಸಂದರ್ಭದಲ್ಲಿ ಭದ್ರಾವತಿಯ ಮೈಸೂರು ಕಬ್ಬಿಣದ ಕಾರ್ಖಾನೆ, ಬೆಂಗಳೂರಿನ ಸಾಬೂನು ಕಾರ್ಖಾನೆ, ಮೈಸೂರಿನ ಗಂಧದೆಣ್ಣೆ ಕಾರ್ಖಾನೆ, ಸಿಮೆಂಟ್ ಕಾರ್ಖಾನೆ, 1934 - ಮಂಡ್ಯದಲ್ಲಿ ಮೈಸೂರು ಸಕ್ಕರೆ ಕಂಪೆನಿ ಪ್ರಾರಂಭ, 1936 - ಮೊಟ್ಟ ಮೊದಲ ಮೈಸೂರು ಪೇಪರ್ ಮಿಲ್ ಆರಂಭ, ಮಂಗಳೂರು ಹೆಂಚು ಕಾರ್ಖಾನೆ, ಷಹಬಾದಿನ ಸಿಮೆಂಟ್ ಕಾರ್ಖಾನೆ ಮೈಸೂರಿನ ಅರಗು ಮತ್ತು ಬಣ್ಣದ ಕಾರ್ಖಾನೆ, ಕೊಡಗಿನ ಕಾಫಿ ಸಂಶೋಧನಾ ಕೇಂದ್ರಗಳು ಪ್ರಾರಂಭಗೊಂಡವು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ. ನಾಗರಾಜ್, ಗೌರವ ಕಾರ್ಯದರ್ಶಿಗಳಾದ ಎಚ್.ಎಸ್. ರೂಪೇಶ್ ಕುಮಾರ್, ರವೀಂದ್ರ ಹುಲುವಾಡಿ, ಕೋಶಾಧ್ಯಕ್ಷ ಎಚ್.ಪಿ. ನಂಜೇಗೌಡ, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಕಲ್ಪನಾ ಶಿವಣ್ಣ, ಮತ್ತಿಕೆರೆ ಚಲುವರಾಜು, ಬಿ.ಟಿ. ದಿನೇಶ್, ಗೌರವ ಕಾರ್ಯದರ್ಶಿ ಎಚ್.ಕೆ. ಶೈಲಾ ಶ್ರೀನಿವಾಸ್, ಸಂಶೋಧಕ ಡಾ. ಚಿಕ್ಕಚನ್ನಯ್ಯ, ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಕೂ.ಗಿ. ಗಿರಿಯಪ್ಪ, ಶಿಕ್ಷಕಿ ಎಸ್. ಸುಮಂಗಳ ಸಿದ್ದರಾಜು, ಗಾಯಕರಾದ ಚೌ.ಪು. ಸ್ವಾಮಿ, ಬಿ. ವಿನಯ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಯಕ್ಷರಾಜು, ನಿವೃತ್ತ ಪ್ರಾಚಾರ್ಯ ಎಸ್.ಎಲ್. ವನರಾಜು, ಎಂ.ಡಿ. ಶಿವಕುಮಾರ್ ಇದ್ದರು.

"ಮೀಸಲಾತಿಯ ಜನಕ"

ಉಪನ್ಯಾಸ ನೀಡಿದ ಚನ್ನಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಅಣ್ಣಯ್ಯ ತೈಲ್ಲೂರು ಮಾತನಾಡಿ ಸಾಮಾಜಿಕ ಕಳಕಳಿ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಮೈಗೂಡಿಸಿಕೊಂಡಿದ್ದ ಕೃಷ್ಣರಾಜ ಒಡೆಯರ್ ಅವರು ಮೇಲ್ವರ್ಗದ ವಿರೋಧವನ್ನು ಕಟ್ಟಿಕೊಂಡು ತಮ್ಮ ಅಧಿಕಾರಾವಧಿಯಲ್ಲಿ ದಲಿತರಿಗೆ ಮತ್ತು ಮಹಿಳೆಯರಿಗೆ ಪ್ರಥಮ ಬಾರಿಗೆ ದೇಶದಲ್ಲಿಯೇ ಮೀಸಲಾತಿಯನ್ನು ಜಾರಿಗೆ ತಂದಂತಹ ಮೇರು ವ್ಯಕ್ತಿ. 1921ರಲ್ಲಿ ಪ್ರಥಮ ಭಾರಿಗೆ ಎಲ್ಲಾ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ನೀಡಲು ಆದೇಶ ಹೊರಡಿಸಿದರು. ಹಾಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು "ಮೀಸಲಾತಿಯ ಜನಕ" ಎನ್ನಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT