ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರತಿನಿಧಿಗಳ ಕಚೇರಿ ಸದಾ ‘ಬಂದ್’: ಅಸಮಾಧಾನ

ದೂಳು ತುಂಬಿದ ಅಧಿಕೃತ ಕಚೇರಿಗಳು; ಜನರ ಸಂಪರ್ಕಕ್ಕಿಲ್ಲ ಅವಕಾಶ
Last Updated 20 ಜೂನ್ 2022, 4:28 IST
ಅಕ್ಷರ ಗಾತ್ರ

ರಾಮನಗರ: ಜನಪ್ರತಿನಿಧಿಗಳು ಹಾಗೂ ಜನಸಾಮಾನ್ಯರ ನಡುವೆ ಸಂಪರ್ಕ ಬೆಸೆಯಲೆಂದು ನೀಡಲಾಗಿರುವ ಅಧಿಕೃತ ಕಚೇರಿಗಳು ಸದಾ ಬಂದ್ ಆಗಿವೆ. ಇದರಿಂದಾಗಿ ಜನರ ಅಹವಾಲು ಸಲ್ಲಿಕೆಗೆ ಅಡ್ಡಿಯಾಗಿದೆ.

ಸಂಸದರು, ಶಾಸಕರೂ ಸೇರಿದಂತೆ ಜಿಲ್ಲೆಯ ಪ್ರತಿ ಜನಪ್ರತಿನಿಧಿಗೂ ಸರ್ಕಾರ ಅಧಿಕೃತ ಕಚೇರಿಯನ್ನು ಒದಗಿಸಿದೆ. ಇಲ್ಲಿ ಶಾಸಕರು ಇಲ್ಲವೇ ಅವರ ಪ್ರತಿನಿಧಿ, ಸಿಬ್ಬಂದಿ ಹಾಜರಿದ್ದು ಜನರ ದೂರು ದುಮ್ಮಾನಗಳಿಗೆ ಸ್ಪಂದಿಸಬೇಕಿದೆ. ಆದರೆ ಜಿಲ್ಲೆಯಲ್ಲಿರುವ ಬಹುತೇಕ ಶಾಸಕರ ಕಚೇರಿಗಳು ಕಾಟಾಚಾರಕ್ಕೆ ಎಂಬಂತೆ ಇದ್ದು, ಜನಪ್ರತಿನಿಧಿಗಳು ಇಲ್ಲಿಗೆ ಭೇಟಿ ನೀಡುವುದೇ ಅಪರೂಪವಾಗಿದೆ.

ಎಲ್ಲೆಲ್ಲಿ ಕಚೇರಿ?: ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ರಾಮನಗರದ ಕೆಂಗಲ್‌ ಭವನದಲ್ಲಿ ಇರುವ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಆವರಣದಲ್ಲಿಯೇ ಪ್ರತ್ಯೇಕ ಕೊಠಡಿಯನ್ನು ನೀಡಲಾಗಿದೆ. ಸರ್ಕಾರದ ಹಣ ವ್ಯಯಿಸಿ ಅದನ್ನು ನವೀಕರಣ ಸಹ ಮಾಡಲಾಗಿದೆ. ಎರಡು ವರ್ಷದ ಹಿಂದೆ ಸಚಿವರು ಈ ಕಚೇರಿ ಉದ್ಘಾಟಿಸಿದ್ದು ಬಿಟ್ಟರೆ ಮತ್ತೆ ಭೇಟಿ ನೀಡಿದ್ದು ಜನರಿಗೆ ನೆನಪಿಲ್ಲ.

ತಾಲ್ಲೂಕು ಆಡಳಿತ ಸೌಧ (ಮಿನಿ ವಿಧಾನಸೌಧ)ದ ಬಾಗಿಲಿನಲ್ಲೇ ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ ಅವರಿಗೆ ಕಚೇರಿ ವ್ಯವಸ್ಥೆ ಮಾಡಲಾಗಿದೆ. ಶಾಸಕಿ ಅನಿತಾ ಕುಮಾರಸ್ವಾಮಿ ರೇಷ್ಮೆಗೂಡು ಮಾರುಕಟ್ಟೆ ಸಮೀಪ ಬೆಂಗಳೂರು–ಮೈಸೂರು ಹೆದ್ದಾರಿ ಪಕ್ಕ ಶಾಸಕ ಭವನದಲ್ಲಿ ಪ್ರತ್ಯೇಕ ಕಚೇರಿ ಹೊಂದಿದ್ದಾರೆ. ಕನಕಪುರದಲ್ಲಿ ಹೊಸತಾಗಿ ನಿರ್ಮಾಣ ಆಗಿರುವ ತಾಲ್ಲೂಕು ಆಡಳಿತ ಸೌಧದಲ್ಲಿ ಸಂಸದ
ಡಿ.ಕೆ. ಸುರೇಶ್‌ ಹಾಗೂ ಶಾಸಕ ಡಿ.ಕೆ. ಶಿವಕುಮಾರ್, ಚನ್ನಪಟ್ಟಣ ತಾ.ಪಂ. ಭವನದಲ್ಲಿ ಶಾಸಕ ಎಚ್‌.ಡಿ. ಕುಮಾರಸ್ವಾಮಿ, ಮಾಗಡಿಯಲ್ಲಿ ಶಾಸಕ ಎ.ಮಂಜುನಾಥ್‌ ಪ್ರತ್ಯೇಕವಾದ ಕಚೇರಿಗಳನ್ನು ಹೊಂದಿದ್ದಾರೆ.

ಖಾಸಗಿ ಕಚೇರಿಗಳಲ್ಲೇ ಹೆಚ್ಚು: ಪ್ರತಿ ಶಾಸಕರೂ ತಮ್ಮ ಆಪ್ತರ ಮೂಲಕ ಜನರ ಅಹವಾಲು ಸ್ವೀಕಾರ ಕೆಲಸ ಮಾಡುತ್ತಾರೆ. ಆದರೆ ಅದು ಸರ್ಕಾರದ ಅಧಿಕೃತ ಕಚೇರಿಗಳಲ್ಲಿ ಮಾತ್ರ ನಡೆಯುತ್ತಿಲ್ಲ. ಸಂಸದ ಡಿ.ಕೆ. ಸುರೇಶ್ ಹಾಗೂ ಶಾಸಕ ಡಿ.ಕೆ.ಶಿವಕುಮಾರ್‌ ಅವರ ಕನಕಪುರ ನಿವಾಸದಲ್ಲಿಯೇ ಜನರ ಕುಂದುಕೊರತೆ ಆಲಿಸುವ ಕಾರ್ಯ ನಡೆದಿದೆ. ಶಾಸಕ ಎಚ್‌.ಡಿ. ಕುಮಾರಸ್ವಾಮಿ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಇದಕ್ಕೆಂದೇ ಪ್ರತ್ಯೇಕ ಸಭಾಂಗಣದ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮಾಗಡಿ ಶಾಸಕ ಎ.ಮಂಜುನಾಥ್‌ ಸಹ ಮಾಗಡಿಯಲ್ಲಿ ಪ್ರತ್ಯೇಕ ಕಚೇರಿ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT