ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗಾಗಿ ನಂಜಾಪುರ ಗ್ರಾಮಸ್ಥರ ಪ್ರತಿಭಟನೆ

ಪದೇ ಪದೇ ನೀರು ಸರಬರಾಜಿನಲ್ಲಿ ವ್ಯತ್ಯಯ: ಗ್ರಾ.ಪಂ. ಮಾಜಿ ಸಿಬ್ಬಂದಿ ವಿರುದ್ಧ ಆರೋಪ
Last Updated 30 ಮಾರ್ಚ್ 2020, 14:01 IST
ಅಕ್ಷರ ಗಾತ್ರ

ರಾಮನಗರ: ಗ್ರಾಮಕ್ಕೆ ನೀರು ಪೂರೈಕೆಯಲ್ಲಿ ಪದೇ ಪದೇ ವ್ಯತ್ಯಯವಾಗುತ್ತಿದ್ದು, ಇದನ್ನು ಸರಿಪಡಿಸುವಂತೆ ಆಗ್ರಹಿಸಿ ಕೈಲಾಂಚ ಹೋಬಳಿಯ ನಂಜಾಪುರ ಗ್ರಾಮಸ್ಥರು ಸೋಮವಾರ ಬಿಂದಿಗೆಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಗ್ರಾಮಕ್ಕೆ ಬೋರ್‌ವೆಲ್‌ ಮೂಲಕ ನೀರು ಪೂರೈಕೆ ಆಗುತ್ತಿದೆ. ಆದರೆ, ಹೀಗೆ ನೀರು ಸರಬರಾಜಾಗುವ ಕೊಳವೆ ಬಾವಿಯ ವಿದ್ಯುತ್ ಸಂಪರ್ಕ ಪದೇ ಪದೇ ಕೈಕೊಡುತ್ತಲೇ ಇದೆ. ಇದರಿಂದಾಗಿ ನೀರಿಗೆ ತತ್ವರವಾಗಿದೆ. ಗ್ರಾಮ ಪಂಚಾಯಿತಿ ಸಿಬ್ಬಂದಿ ಸಹ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.

ಆರೋಪ: ನಂಜಾಪುರ ಗ್ರಾಮಕ್ಕೆ ಈ ಹಿಂದೆ ಹೊಸದೊಡ್ಡಿ ನಿವಾಸಿ ಕೆಂಗಲಯ್ಯ ಎಂಬ ವ್ಯಕ್ತಿ ನೀರುಘಂಟಿಯಾಗಿ ಕೆಲಸ ಮಾಡುತ್ತಿದ್ದರು. ಹತ್ತಾರು ವರ್ಷದಿಂದ ಸೇವೆಯಲ್ಲಿ ಇದ್ದ ಆತ ಗ್ರಾ.ಪಂ.ನವರು ಸರಿಯಾಗಿ ವೇತನ ನೀಡುತ್ತಿಲ್ಲ ಎಂದು ಕೆಲಸ ಬಿಟ್ಟಿದ್ದರು. ನಂತರ ಅದೇ ಕೆಲಸಕ್ಕೆ ನಂಜಾಪುರದ ರೇಣುಕಾ ಎಂಬುವರು ನೇಮಕಗೊಂಡಿದ್ದರು.

‘ಕೆಲಸ ಕಳೆದುಕೊಂಡದ್ದರಿಂದ ಹತಾಶಾಗಿದ್ದ ಕೆಂಗಲಯ್ಯ ಈ ಹಿಂದೆ ಅನೇಕ ಬಾರಿ ಗ್ರಾಮಕ್ಕೆ ನೀರು ಸರಬರಾಜಾಗುವ ಕೊಳವೆ ಬಾವಿಗೆ ಸಂಪರ್ಕಿಸಲಾದ ವಿದ್ಯುತ್ ತಂತಿಯನ್ನು ತುಂಡರಿಸಿದ್ದರು. ಆದರೆ, ಇದು ಯಾರ ಗಮನಕ್ಕೂ ಬಂದಿರಲಿಲ್ಲ. ಪದೇ ಪದೇ ದುರಸ್ತಿ ಕಾರ್ಯ ನಡೆದೇ ಇತ್ತು. ಆದರೆ, ಭಾನುವಾರ ಕೆಂಗಲಯ್ಯ ಆಯುಧದಿಂದ ವೈರ್‌ ಅನ್ನು ಕುಯ್ಯುತ್ತಿದ್ದ ವೇಳೆ ಮಹಿಳೆಯೊಬ್ಬರು ಗಮನಿಸಿದ್ದಾರೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

"ವೈರ್ ತುಂಡರಿಸಿ ಸಿಕ್ಕಿಬಿದ್ದಿರುವ ವ್ಯಕ್ತಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. ಮತ್ತೆ ‌ಗ್ರಾಮಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳಬೇಕು’ ಎಂದು ಎಚ್ಚರಿಸಿದರು.

ಗ್ರಾಮಸ್ಥರಾದ ಸಿದ್ದರಾಜು, ಶಿವಲಿಂಗಯ್ಯ ಕೃಷ್ಣೇಗೌಡ ರಾಜು, ಶಿವು, ಪ್ರಮೀಳಾ, ಸುಂದರಮ್ಮ, ನಿಂಗಮ್ಮ ಚಂದ್ರಮ್ಮ ಭಾಗ್ಯಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಈ ಕುರಿತು ಬನ್ನಿಕುಪ್ಪೆ ಗ್ರಾ.ಪಂ. ಪಿಡಿಒ ಜಯಶಂಕರ್‍ ಪ್ರತಿಕ್ರಿಯಿಸಿ ‘ಈ ಬಗ್ಗೆ ಮಾಜಿ ನೀರುಘಂಟಿ ಕೆಂಗಲಯ್ಯ ಅವರನ್ನು ವಿಚಾರಿಸಿದಾಗ ಅವರು ತಾನು ಈ ಕೃತ್ಯ ಮಾಡಿಲ್ಲ ಎಂದಿದ್ದಾರೆ. ಗ್ರಾಮಕ್ಕೆ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT