ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಷ್ಟ್ರೀಯ ಶಿಕ್ಷಣ ನೀತಿ: ಚರ್ಚೆ ಅಗತ್ಯ’

ಜಿಲ್ಲಾ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರ ಸಭೆ
Last Updated 29 ಜೂನ್ 2019, 11:24 IST
ಅಕ್ಷರ ಗಾತ್ರ

ರಾಮನಗರ: ರಾಷ್ಟ್ರೀಯ ಶಿಕ್ಷಣ ನೀತಿಯ ಅನುಕೂಲ ಅನಾನುಕೂಲಗಳನ್ನು ಚರ್ಚಿಸಲು ಮೂರು ತಿಂಗಳ ಕಾಲಾವಕಾಶ ಕೋರಿ ನ್ಯಾಯಾಲಯದ ಮೊರೆ ಹೋಗಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಹೇಳಿದರು.

ಇಲ್ಲಿನ ಎಂ.ಎಚ್. ಸಮೂಹ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಕಾಮ್ಸ್ ಸಂಘಟನೆ, ಜಿಲ್ಲಾ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ನೀತಿಯ ಬಗ್ಗೆ ಶಿಕ್ಷಣ ತಜ್ಞರು, ಶಿಕ್ಷಕರು ಸಮಗ್ರವಾಗಿ ಚರ್ಚಿಸಿ, ಎಲ್ಲಾ ಅಂಶಗಳ ವರದಿ ಸಿದ್ಧಪಡಿಸಿ ಕಾಮ್ಸ್ ಗೆ ಸಲ್ಲಿಸಿ, ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ಶಿಕ್ಷಣ ಸಂಸ್ಥೆಗಳಲ್ಲಿ ಒಗ್ಗಟ್ಟಿದ್ದರೆ ಮಾತ್ರ ಶೈಕ್ಷಣಿಕ ಗುಣಮಟ್ಟ ಸುಧಾರಿಸಿಕೊಳ್ಳಲು ಸಾಧ್ಯ. ರಾಷ್ಟ್ರೀಯ ಶಿಕ್ಷಣ ನೀತಿಗೆ ಆಕ್ಷೇಪಣೆ ಸಲ್ಲಿಸಲು ಇದೇ 30 ಕೊನೆಯ ದಿನವಾಗಿದೆ. ಈಗ ಸಭೆ ಸೇರಿ ಈ ನೀತಿಯ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸುವ ಕಾರ್ಯಕ್ಕೆ ತೀರಾ ವಿಳಂಬವಾಗಿದೆ. ಇದಕ್ಕೆ ಒಗ್ಗಟ್ಟಿಲ್ಲದೆ ಇರುವುದು ಕಾರಣವಾಗಿದೆ ಎಂದು ತಿಳಿಸಿದರು.

ಇತ್ತೀಚೆಗೆ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ತುಂಬಾ ಕಷ್ಟದ ಕಾರ್ಯವಾಗಿದೆ. ಹಾಗಾಗಿ ಮೊದಲು ಶಿಕ್ಷಣ ಸಂಸ್ಥೆಗಳು ಒಗ್ಗಟ್ಟಾಗಬೇಕು. ನಿಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹೋರಾಟ ಮಾಡಬೇಕು ಎಂದು ಅವರು ಹೇಳಿದರು.

ಸರ್ಕಾರದಿಂದ ಆರ್‌ಟಿಇ ಅನುದಾನ ಸಮರ್ಪಕವಾಗಿ ಬಿಡುಗಡೆಯಾಗುತ್ತಿಲ್ಲ. ಇದರಿಂದ ಅದೆಷ್ಟೋ ಶಿಕ್ಷಣ ಸಂಸ್ಥೆಗಳು ಶಿಕ್ಷಕರಿಗೆ ವೇತನ ನೀಡಲಾಗದ ಸ್ಥಿತಿ ತಲುಪುವಂತಾಗಿದೆ. ಹಾಗಾಗಿ ಸರ್ಕಾರ ಖಾಸಗಿ ಶಾಲೆ ತೆರೆಯಲು ನೀಡಲಾಗುವ ಅನುಮತಿಯ ನಿಯಮಾವಳಿ ಕಠಿಣಗೊಳಿಸಬೇಕು. ಜತೆಗೆ ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ನೀಡಬೇಕು. ಗುಣಮಟ್ಟದ ಶಿಕ್ಷಕರನ್ನು ಉತ್ಪಾದಿಸುವ ಕಾರ್ಯ ನಮ್ಮಿಂದಲೇ ಆಗಬೇಕು. ಆ ನಿಟ್ಟಿನಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳು ಒಗ್ಗಟ್ಟಾಗಿ ಕಾರ್ಯನಿರ್ವಹಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಸುಧಾರಣೆ ತರಬೇಕು ಎಂದರು.

ಕಾಮ್ಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮಾತನಾಡಿ ಕಾಮ್ಸ್ ರಾಜ್ಯ ಮಟ್ಟದ ಸಂಘಟನೆಯಾಗಿ ಬೆಳೆದಿದ್ದು, 3 ಸಾವಿರಕ್ಕೂ ಅಧಿಕ ಸದಸ್ಯರು ಇದ್ದಾರೆ. ನಮ್ಮ ಸಂಘಟನೆಗೆ ಪುಟ್ಟಣ್ಣ ಅವರು ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ಚೆನ್ನಾಗಿದ್ದರೂ ಕೆಲ ಗೊಂದಲಗಳಿವೆ. ಅದನ್ನು ಪರಿಹರಿಸಿಕೊಳ್ಳಲು ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂದು ತಿಳಿಸಿದರು.

ಕಾಮ್ಸ್ ಅಧ್ಯಕ್ಷ ಎಂ.ಎ. ಆನಂದ ಮಾತನಾಡಿ ಈಚಿನ ವರ್ಷಗಳಲ್ಲಿ ಶಿಕ್ಷಣ ಸಂಸ್ಥೆಗಳು ಅನೇಕ ಕಷ್ಟಗಳನ್ನು ಎದುರಿಸುವಂತಾಗಿದೆ. ಬೆಳಗಾವಿ, ಬಳ್ಳಾರಿ, ಮೈಸೂರು, ಮಂಗಳೂರು ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯ ಸಂಘಟನೆ ಬಲ ಕುಸಿದಿದೆ. ಮುಖ್ಯಮಂತ್ರಿಗಳನ್ನು ನೀಡಿದ ನಮ್ಮ ಜಿಲ್ಲೆ ರಾಜ್ಯದಲ್ಲೇ ಪ್ರಬಲ ಸಂಘಟನೆ ಹೊಂದಿರುವ ಜಿಲ್ಲೆಯಾಗಿ ಮಾರ್ಪಡಬೇಕು ಎಂದು ಅವರು ಹೇಳಿದರು.

ಜಿಲ್ಲಾ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟದ ಅಧ್ಯಕ್ಷ ಪಟೇಲ್ ಸಿ. ರಾಜು ಮಾತನಾಡಿ ಒಕ್ಕೂಟವನ್ನು ಬಲಗೊಳಿಸಲು ಶ್ರಮಿಸಲಾಗುತ್ತಿದೆ. ನಾವೆಲ್ಲ ಒಂದೇ ಎಂಬ ಭಾವನೆ ಮೂಡಬೇಕು. ಈ ನಿಟ್ಟಿನಲ್ಲಿ ಎಲ್ಲ ಶಿಕ್ಷಣ ಸಂಸ್ಥೆಗಳು ಒಗ್ಗೂಡಬೇಕು. ಇನ್ನು ಆರ್‌ಟಿಇ ಕಾಯ್ದೆ ಶ್ರೀಮಂತರ ಮತ್ತು ಉಳ್ಳವರ ಪಾಲಾಗುತ್ತಿದೆ. ಇದನ್ನು ತಡೆಯಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು. ಅಂಥವರನ್ನು ಶೋಧಿಸಿ, ಸರ್ಕಾರ ಅವರ ಮಕ್ಕಳಿಗೆ ವಿನಿಯೋಗಿಸಿದ ಹಣವನ್ನು ಬಡ್ಡಿ ಸಮೇತ ವಸೂಲಿ ಮಾಡುವ ಕಾರ್ಯವಾಗಬೇಕು. ಹಾಗಾದರೆ ಮಾತ್ರ ಅರ್ಹರಿಗೆ ಯೋಜನೆಯ ಸೌಲಭ್ಯ ದೊರೆಯಲು ಸಾಧ್ಯ ಎಂದರು.

ಒಕ್ಕೂಟದ ಪದಾಧಿಕಾರಿಗಳಾದ ಸುಬ್ಬಯ್ಯ ಶೆಟ್ಟಿ, ಎಚ್. ಚಂದ್ರಶೇಖರ್, ಪ್ರದೀಪ್, ಬೈರಪ್ಪ, ರಮೇಶ್ ಗುಪ್ತ, ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT