ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ–ಋಷಿ | ಸಹಜ ಕೃಷಿ: ತಿಂಗಳಿಗೆ ಲಕ್ಷ ಆದಾಯ

ಕೆಬ್ಬೇದೊಡ್ಡಿಯ ‘ದೊಡ್ಡಣ್ಣ ಫಾರಂ’ಈಗ ಆಕರ್ಷಣೆಯ ಕೇಂದ್ರ
Last Updated 25 ಡಿಸೆಂಬರ್ 2021, 9:49 IST
ಅಕ್ಷರ ಗಾತ್ರ

ಕನಕಪುರ ತಾಲ್ಲೂಕಿನ ಕೆಬ್ಬೇದೊಡ್ಡಿಯಲ್ಲಿರುವ ‘ದೊಡ್ಡಣ್ಣ ಫಾರಂ’ಕಳೆದ ಮೂರು ದಶಕಗಳಲ್ಲಿ ಹಲವು ಪ್ರಯೋಗಗಳಿಗೆ ವೇದಿಕೆ ಆಗಿದ್ದು, ಇದೀಗ ಆಕರ್ಷಣೆಯ ಕೇಂದ್ರವೂ ಆಗಿದೆ. ಇಲ್ಲಿ ವಿಷಮುಕ್ತ ಕೃಷಿಯಲ್ಲೇ ಈ ಕುಟುಂಬ ತಿಂಗಳಿಗೆ ಸರಾಸರಿ ಲಕ್ಷ ರೂಪಾಯಿ ಲೆಕ್ಕದಲ್ಲಿ ಆದಾಯ ಕಾಣತೊಡಗಿದೆ.

ಫುಕವೋಕಾ, ಸುಭಾಷ್‌ ಪಾಳೆಕರ್‌ರಂತಹವರಿಂದ ಪ್ರೇರಣೆಗೊಂಡ ದೊಡ್ಡಣ್ಣ ಇಲ್ಲಿ ಸುಮಾರು ಮೂವತ್ತು ವರ್ಷಗಳ ಹಿಂದೆಯೇ ಸಾವಯವ ಕೃಷಿ ಆರಂಭಿಸಿದ್ದರು. 11 ಎಕರೆ ಹೊಲದಲ್ಲಿ ಸಾವಯವ ಮಾದರಿಯಲ್ಲಿ ಹಲವು ಬೆಳೆಗಳನ್ನು ಬೆಳೆಯುತ್ತಾ ಬಂದಿದ್ದಾರೆ. ಇದೀಗ ಅವರ ಜೊತೆಗೆ ಪುತ್ರ ಮಂಜೇಶ್‌ ಕೂಡ ತಂದೆಯ ಕೃಷಿ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಜೊತೆಗೆ ಹಲವು ಉಪ ಕಸುಬುಗಳ ಮೂಲಕ ಉತ್ತಮ ಲಾಭವನ್ನೂ ಗಳಿಸತೊಡಗಿದ್ದಾರೆ.

ಲಾಭದಾಯಕ ಅಣಬೆ ಕೃಷಿ: ತೋಟದಲ್ಲಿನ ಕೇವಲ 30X40 ಚ.ಅಡಿ ಅಳತೆಯ ಪುಟ್ಟ ಕೋಣೆಯಲ್ಲಿ ಈ ಕುಟುಂಬ ಕಳೆದ ಆರು ವರ್ಷದಿಂದ ಸಾವಯವ ಮಾದರಿಯಲ್ಲಿ ಅಣಬೆ ಕೃಷಿ ಮಾಡುತ್ತ ಬರುತ್ತಿದೆ. ಇಲ್ಲಿ ನಿತ್ಯ ಸರಾಸರಿ 10 ಕೆ.ಜಿ.ಯಷ್ಟು ಸಾವಯವ ಅಣಬೆಯ ಕೊಯ್ಲು ನಡೆಯುತ್ತದೆ. ಹೀಗೆ ಕೊಯ್ಲಾದ ಅಣಬೆ ಮಧ್ಯಾಹ್ನದ ಹೊತ್ತಿಗೆಲ್ಲ ಖಾಲಿ. ಗ್ರಾಹಕರೇ ತೋಟಕ್ಕೆ ಬಂದು ಕೊಂಡೊಯ್ಯುತ್ತಾರೆ. ಉಳಿದ ಅಣಬೆಯನ್ನು ಒಣಗಿಸಿ ಮಾರಾಟ ಮಾಡಲಾಗುತ್ತಿದ್ದು, ಅದಕ್ಕೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ₹2500–3000 ವರೆಗೆ ಬೆಲೆ ಇದೆ. ಅಣಬೆ ಕೃಷಿಯೊಂದರಿಂದಲೇ ಈ ಕುಟುಂಬ ತಿಂಗಳಿಗೆ ಸರಾಸರಿ ₹70 ಸಾವಿರದಷ್ಟು ಆದಾಯ ಗಳಿಸತೊಡಗಿದೆ.

ಮಂಜೇಶ್‌ ಮೆಕ್ಯಾನಿಕಲ್‌ ಎಂಜಿನಿಯರಿಂಗ್ ಪದವೀಧರ ಹಾಗೂ ಯೋಗ ಶಿಕ್ಷಕ ಕೂಡ. ಮರ್ಚೆಂಟ್‌ ನೇವಿಗೆ ಸೇರುವ ಕನಸು ಇದ್ದರೂ ಅದನ್ನು ಬದಿಗಿಟ್ಟು ತಂದೆಯಂತೆ ಪ್ರಗತಿಪರ ರೈತನಾಗಿ ಗುರುತಿಸಿಕೊಳ್ಳತೊಡಗಿದ್ದಾರೆ. ತಂದೆಯ ಸಾಂಪ್ರದಾಯಿಕ ಬೇಸಾಯದ ಜೊತೆಗೆ ಹಲವು ಹೊಸ ಪ್ರಯೋಗಗಳನ್ನೂ ಮಾಡತೊಡಗಿದ್ದಾರೆ.

ಕೃಷಿಯಲ್ಲಿ ಇನ್ನಷ್ಟು ಹೊಸ ಪ್ರಯೋಗಗಳ ಬಗ್ಗೆ ಆಸಕ್ತಿ ಹೊಂದಿರುವ ಅವರು ಈ ನೆಲಕ್ಕೆ ಹೊಸತೆನ್ನುವ ಖರ್ಜೂರ, ಡ್ರ್ಯಾಗನ್‌ ಫ್ರೂಟ್‌ ಮೊದಲಾದ ಬೆಳೆಗಳನ್ನೂ ಬೆಳೆಯತೊಡಗಿದ್ದಾರೆ. ನಾಲ್ಕು ವರ್ಷದ ಹಿಂದೆ ನೆಟ್ಟ ಖರ್ಜೂರದ ಮರಗಳು ಇದೀಗ ಹೂವಿನ ಗೊಂಚಲು ಮೈದುಂಬಿ ನಿಂತಿದ್ದು, ಮೊದಲ ಫಲದ ನಿರೀಕ್ಷೆ ಇದೆ. ಅರ್ಧ ಎಕರೆ ಪ್ರದೇಶದಲ್ಲಿ ಡ್ಯ್ರಾಗನ್‌ ಫ್ರೂಟ್‌ ಬೆಳೆಯಲೂ ಅವರು ಯೋಜಿಸಿದ್ದಾರೆ. ಹೊಲದ ಮತ್ತೊಂದು ಬದಿಯಲ್ಲಿ ಹತ್ತಾರು ಏಕ ಬಿಲ್ವಪತ್ರೆ ಮರಗಳನ್ನು ಒಳಗೊಂಡ ವನವೂ ಇಲ್ಲಿದ್ದು, ನೈಸರ್ಗಿಕ ಔಷಧಗಳ ತಯಾರಿಕೆ ಮೂಲಕವೂ ಆದಾಯ ಗಳಿಸುವ ಗುರಿ ಇವರದ್ದು.

ಸದ್ಯ ಜಮೀನಿನಲ್ಲಿ ಕಬ್ಬಿನ ಜೊತೆಗೆ ಅಂತರ ಬೆಳೆಯಾಗಿ ಬಾಳೆ ಬೆಳೆಯಲಾಗುತ್ತಿದೆ. ಅದರಲ್ಲೂ ನೇಂದ್ರ ಬಾಳೆ ಗಮನ ಸೆಳೆಯುವಂತಿದೆ. ಜೊತೆಗೆ ಸಿರಿಧಾನ್ಯಗಳು. ಅರಿಶಿನ, ತೊಗರಿ, ನೀರಾವರಿ ಮೂಲಕ ವಿವಿಧ ತಳಿಗಳ ಭತ್ತದ ಕೃಷಿ ನಡೆದಿದೆ. ವಿವಿಧ ಬಗೆಯ ತರಕಾರಿಗಳ ತೋಟವೂ ಇದೆ.

ಪ್ರಾಣಿ–ಪಕ್ಷಿಗಳನ್ನು ಒಳಗೊಂಡ ಸಮಗ್ರ ಕೃಷಿ ಇಲ್ಲಿನ ವಿಶೇಷತೆ. ಜೇನು ಕೃಷಿ ಜೊತೆಗೆ ಮೊಲ, ನಾಟಿಕೋಳಿ, ಎಮುವಿನಂತಹ ದೊಡ್ಡ ಪಕ್ಷಿಗಳನ್ನೂ ಕೇವಲ ಗೊಬ್ಬರ ಹಾಗೂ ಕೀಟಗಳ ನಿಯಂತ್ರಣಕ್ಕೆಂದೇ ಸಾಕುತ್ತಿದ್ದಾರೆ. ಹೊಲದಲ್ಲಿನ ಕೃಷಿ ಹೊಂಡ, ಕೊಳದಲ್ಲಿ ರಾಶಿಗಟ್ಟಲೆ ಮೀನುಗಳಿವೆ. ಇದ್ಯಾವುದನ್ನೂ ಅವರು ಮಾರುವುದಿಲ್ಲ. ಮೀನುಗಳಿರುವ ನೀರಿನಿಂದ ಹೊಲದ ಫಲವತ್ತತೆ ಹೆಚ್ಚಿ ಬೆಳೆಯೂ ಹೆಚ್ಚುತ್ತದೆ ಎನ್ನುವುದು ಅವರ ಸಿದ್ಧಾಂತ.

ಸ್ವಂತ ಮಾರುಕಟ್ಟೆ: ತಮ್ಮ ಉತ್ಪನ್ನಗಳನ್ನು ತಾವೇ ಮಾರುವ ಮೂಲಕ ದೊಡ್ಡಣ್ಣ ಕುಟುಂಬ ಆದಾಯ ವೃದ್ಧಿಸಿಕೊಂಡಿದೆ. ಕೆಬ್ಬೇದೊಡ್ಡಿ ಗ್ರಾಮದ ಮುಖ್ಯರಸ್ಥೆಯಲ್ಲಿ ಇವರದ್ದೇ ಆದ ಆರ್ಗಾನಿಕ್‌ ಮಳಿಗೆ ಇದೆ. ಹೊಲದಲ್ಲಿ ಬೆಳೆಯುವ ವಿವಿಧ ಬಗೆಯ ಅಕ್ಕಿ, ಸಿರಿಧಾನ್ಯಗಳನ್ನು ಪ್ಯಾಕಿಂಗ್‌ ಮಾಡಿ ಗ್ರಾಹಕರಿಗೆ ನೀಡಲಾಗುತ್ತಿದೆ. ಹೊಲದ ಸಾವಯವ ಕಬ್ಬು ಇಲ್ಲಿ ಜ್ಯೂಸ್ ಆಗುತ್ತಿದೆ. ಜೊತೆಗೆ ಅರಿಶಿನ, ಬಾಳೆ, ವಿವಿಧ ತರಕಾರಿ, ಹಣ್ಣುಗಳನ್ನೂ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ. ಇದಲ್ಲದೆ ವಾಟ್ಸಪ್‌ ಗ್ರೂಪ್‌ಗಳ ಮೂಲಕವೂ ಗ್ರಾಹಕರಿಗೆ ಉತ್ಪನ್ನಗಳು ಸಿಗುತ್ತಿವೆ. ಇವೆಲ್ಲದರಿಂದ ಕೃಷಿ ಆದಾಯ ದುಪ್ಪಟ್ಟುಗೊಂಡಿದೆ.

60ಕ್ಕೂ ಹೆಚ್ಚು ಹಣ್ಣಿನ ಮರ: ಅರಣ್ಯ ಕೃಷಿ ಹಾಗೂ ತೋಟಗಾರಿಕೆಗೂ ಈ ಕುಟುಂಬ ಒತ್ತು ನೀಡಿದೆ. ಇದರಿಂದ ದೀರ್ಘಕಾಲದಲ್ಲಿ ಉತ್ತಮ ಆದಾಯ ಕಾಣುವ ನಿರೀಕ್ಷೆ ಅವರದ್ದು. 60ಕ್ಕೂ ಹೆಚ್ಚು ಬಗೆಯ ಹಣ್ಣಿನ ಮರಗಳು ಇಲ್ಲಿವೆ. ಸೀಬೆಯಲ್ಲೇ ನಾಲ್ಕಾರು ಬಗೆ ಮರಗಳಿವೆ. ಜೊತೆಗೆ ರಾಮಫಲ, ಲಕ್ಷ್ಮಣ ಫಲ, ನೋನಿ, ಹಲಸು, ಮಾವು, ಸೇಬು, ನೇರಳೆ, ಚೆರ್ರಿ, ಅಂಜೂರ ಮೊದಲಾದ ಹಣ್ಣಿನ ಮರಗಳು ಪ್ರಾಣಿ–ಪಕ್ಷಿಗಳಿಗೂ ಆಹಾರ ಒದಗಿಸುತ್ತಿವೆ.

ಆಕರ್ಷಣೆಯ ಕೇಂದ್ರ: ಹಾರೋಹಳ್ಳಿ ಬಳಿಯ ಪಿರಮಿಡ್ ವ್ಯಾಲಿಗೆ ಸಮೀಪದಲ್ಲೇ ಈ ತೋಟ ಇದ್ದು, ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು, ವಿದ್ಯಾರ್ಥಿಗಳು ದೊಡ್ಡಣ್ಣ ಫಾರಂಗೆ ಭೇಟಿ ನೀಡುತ್ತಾರೆ. ಈ ಮೂಲಕ ಸಾವಯವ ಕೃಷಿಯ ಪ್ರಾಯೋಗಿಕ ಅನುಭವ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT