ಕನಕಪುರ: ತಾಲ್ಲೂಕಿನ ಸಾತನೂರು, ಉಯ್ಯಂಬಳ್ಳಿ, ಕೋಡಿಹಳ್ಳಿ ಹೋಬಳಿಯ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳು ಹಾಗೂ ಆನೆಗಳ ಉಪಟಳ ಹೆಚ್ಚಾಗಿದ್ದು ಕಾಡುಪ್ರಾಣಿಗಳನ್ನು ತಡೆಯುವ ಕೆಲಸ ಮಾಡಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಕಾಡಳ್ಳಿ ಅನು ಕುಮಾರ್ ಒತ್ತಾಯಿಸಿದರು.
ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ನಾಯಕನಹಳ್ಳಿ ಗ್ರಾಮದಲ್ಲಿ ರೈತ ಸಂಘದ ನೂತನ ಗ್ರಾಮ ಶಾಖೆ ಮತ್ತು ರೈತ ಸಂಘ ಸೇರ್ಪಡೆ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಮೂರು ಹೋಬಳಿಗಳಲ್ಲಿ ಮಳೆಯಾಶ್ರಯದಲ್ಲಿ ಕೃಷಿ ಮಾಡಲಾಗುತ್ತದೆ, ಇಂತಹ ಪರಿಸ್ಥಿತಿಯಲ್ಲಿ ಕಾಡಾನೆ ಮತ್ತು ಕಾಡು ಹಂದಿಗಳು ಬೆಳೆಗಳನ್ನು ನಾಶಪಡಿಸುತ್ತಿವೆ. ಇವುಗಳ ಹಾವಳಿಯಿಂದ ಕಾಡಂಚಿನ ಪ್ರದೇಶಗಳಲ್ಲಿ ರೈತರು ಕೃಷಿ ಮಾಡಲಾಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆಯು ಕೂಡಲೇ ಕಾಡುಪ್ರಾಣಿಗಳು ಬೆಳೆ ನಾಶ ಮಾಡುವುದನ್ನು ತಡೆಯಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ಅದ್ಯಕ್ಷ ಶಿವಗೂಳಿಗೌಡ, ಉಪಾಧ್ಯಕ್ಷ ಪುಟ್ಟಸ್ವಾಮಿ, ಕಸಬಾ ಅಧ್ಯಕ್ಷ ನಾರಾಯಣ್, ಉಪಾಧ್ಯಕ್ಷ ರಾಜಶೇಖರ್, ಪ್ರಧಾನ ಕಾರ್ಯದರ್ಶಿ ದನಂಜಯ, ಶೇಖರ್, ನಾಯಕನಹಳ್ಳಿ ಸ್ವಾಮಿಗೌಡ ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.