ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Cauvery issue | ತಮಿಳುನಾಡಿನ ಬೇಡಿಕೆ ತಿರಸ್ಕಾರದಿಂದ ಸಂತಸವಾಗಿದೆ: ಶಿವಕುಮಾರ್‌

Published 26 ಸೆಪ್ಟೆಂಬರ್ 2023, 12:47 IST
Last Updated 26 ಸೆಪ್ಟೆಂಬರ್ 2023, 12:47 IST
ಅಕ್ಷರ ಗಾತ್ರ

ಬೆಂಗಳೂರು: ನಿತ್ಯ 12,500 ಕ್ಯೂಸೆಕ್‌ ನೀರು ಬಿಡುಗಡೆಗೆ ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಕಾವೇರಿ ನೀರು ನಿಯಂತ್ರಣ ಸಮಿತಿ ತಿರಸ್ಕರಿಸಿರುವುದರಿಂದ ಸಂತೋಷವಾಗಿದೆ ಎಂದು ಜಲ ಸಂಪನ್ಮೂಲ ಸಚಿವರೂ ಆಗಿರುವ ಉ‍ಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯ ತೀರ್ಮಾನದ ಕುರಿತು ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಸಿದ ಅವರು, ‘ತಮಿಳುನಾಡಿನ ಬೇಡಿಕೆಯನ್ನು ಪರಿಗಣಿಸದ ಸಮಿತಿಯು ನಿತ್ಯ 3,000 ಕ್ಯೂಸೆಕ್‌ ನೀರು ಮಾತ್ರ ಬಿಡುಗಡೆಗೆ ಶಿಫಾರಸು ಮಾಡಿದೆ. ರಾಜ್ಯದ ಅಧಿಕಾರಿಗಳು ಕರ್ನಾಟಕದಲ್ಲಿನ ಬರ ಪರಿಸ್ಥಿತಿ ಕುರಿತು ಸಮರ್ಥವಾಗಿ ಮನವರಿಕೆ ಮಾಡಿಕೊಟ್ಟಿರುವುದರಿಂದ ಈ ತೀರ್ಮಾನ ಬಂದಿದೆ’ ಎಂದರು.

ಕಾವೇರಿ ನೀರು ಹಂಚಿಕೆಯ ಸಂಕಷ್ಟ ಪರಿಹಾರ ಮೇಕೆದಾಟು ಯೋಜನೆ ಅನುಷ್ಠಾನದಿಂದ ಮಾತ್ರ ಸಾಧ್ಯ. ಅಣೆಕಟ್ಟೆ ನಿರ್ಮಿಸಿದರೆ 66 ಟಿಎಂಸಿ ಅಡಿ ನೀರು ಸಂಗ್ರಹಿಸಿಟ್ಟುಕೊಳ್ಳಬಹುದು. ಸಂಕಷ್ಟದ ಸಂದರ್ಭದಲ್ಲಿ ತಮಿಳುನಾಡಿಗೆ ಅದನ್ನು ಬಿಡುಗಡೆ ಮಾಡಬಹುದು. ಸುಪ್ರೀಂ ಕೋರ್ಟ್‌ ಕೂಡ ಯೋಜನೆ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದೆ ಎಂದು ಹೇಳಿದರು.

‘ಕನಕಪುರಕ್ಕೆ ನೀರು ಒದಗಿಸಲು ಮೇಕೆದಾಟು ಯೋಜನೆ ರೂಪಿಸಲಾಗಿದೆ ಎಂದು ಯಾರೋ ಹೇಳಿದ್ದರು. ವಾಸ್ತವದಲ್ಲಿ ಮೇಕೆದಾಟು ಇರುವುದು ತಮಿಳುನಾಡಿನ ಗಡಿಯಲ್ಲಿ. ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದ ಎರಡೂ ಸಮಿತಿಗಳಿಗೆ ಯೋಜನೆ ಕುರಿತು ಮನವರಿಕೆ ಮಾಡಿಕೊಡುತ್ತೇವೆ. ಯೋಜನೆ ಅನುಷ್ಠಾನಕ್ಕೆ ಒಪ್ಪಿಗೆ ನೀಡುವಂತೆ ಕೇಂದ್ರ ಮೇಲೆ ಒತ್ತಡ ತರಲು ರಾಜ್ಯದ ಸಂಸದರಿಗೆ ಮನವಿ ಮಾಡುತ್ತೇನೆ’ ಎಂದರು.

ಮತ್ತೆ ಬಂದ್‌ ಅಗತ್ಯವಿಲ್ಲ: ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯದ ಜನರು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದಾರೆ. ಮತ್ತೊಮ್ಮೆ ಬಂದ್‌ ಮಾಡುವ ಅಗತ್ಯವಿಲ್ಲ. ನ್ಯಾಯಾಲಯವೂ ಇದಕ್ಕೆ ಅವಕಾಶ ನೀಡುವುದಿಲ್ಲ. ಶುಕ್ರವಾರ ರಾಜ್ಯ ಬಂದ್‌ ನಡೆಸಲು ಅವಕಾಶವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಶಿವಕುಮಾರ್‌ ಉತ್ತರಿಸಿದರು.

‘ಕಾವೇರಿ ನೀರಿಗಾಗಿ ಹೋರಾಟ ನಡೆಸುವ ಸಂದರ್ಭದಲ್ಲೂ ಕೆಲವರು ರಾಜಕೀಯವಾಗಿ ಟೀಕೆ ಮಾಡಿದ್ದಾರೆ. ಟೀಕೆ ಮಾಡಬಾರದು ಎಂದು ವಿರೋಧ ಪಕ್ಷದವರಿಗೆ ಹೇಳಲು ಸಾಧ್ಯವಿಲ್ಲ. ಯಾರ ಬಾಯಿ ಮುಚ್ಚಿಸುವುದಕ್ಕೂ ಸಾಧ್ಯವಿಲ್ಲ. ಬೇಸರ ಮಾಡಿಕೊಳ್ಳುವುದೂ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT