ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಗ್ರಾ.ಪಂ. ಮುಂದೆ ಪ್ರತಿಭಟನೆಯ ಎಚ್ಚರಿಕೆ

ಸ್ಮಶಾನಕ್ಕೆ ಜಾಗ ಒದಗಿಸಿದ ಕಂದಾಯ ಇಲಾಖೆ
Last Updated 19 ಸೆಪ್ಟೆಂಬರ್ 2021, 5:16 IST
ಅಕ್ಷರ ಗಾತ್ರ

ಬಿಡದಿ: ಹೋಬಳಿಯ ಬನ್ನಿಕುಪ್ಪೆ ಗ್ರಾಮದಲ್ಲಿ ಹೆಣ ಹೂಳಲು ಜಾಗವಿಲ್ಲದೇ ಪರದಾಡುತ್ತಿದ್ದ ಗ್ರಾಮಸ್ಥರು ಪಂಚಾಯಿತಿ ಮುಂಭಾಗ ಶವವಿಟ್ಟು ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು, ತಕ್ಷಣವೇ ಶವ ಸಂಸ್ಕಾರಕ್ಕೆ ಅನುವು ಮಾಡಿಕೊಟ್ಟರು.

ಗ್ರಾಮ ಪಂಚಾಯಿತಿ ಕಚೇರಿ ಇರುವ ಕೇಂದ್ರ ಸ್ಥಾನವಾದ ಬನ್ನಿಕುಪ್ಪೆ ಗ್ರಾಮದಲ್ಲಿ ಹಿಂದಿನಿಂದಲೂ ಸ್ಮಶಾನಕ್ಕೆ ಜಾಗವೇ ನಿಗದಿಯಾಗಿಲ್ಲ. ಗ್ರಾಮದ ನಿವಾಸಿಗಳು ಮೃತಪಟ್ಟಾಗ ಕೆಲವರು ತಮ್ಮ ಜಮೀನುಗಳಲ್ಲಿ, ಇಲ್ಲದವರು ಕೆರೆಯ ಮಗ್ಗುಲಲ್ಲಿ ಶವ ಸಂಸ್ಕಾರ ಮಾಡುವುದು ನಡೆದುಕೊಂಡು ಬಂದಿದೆ. ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗ ಮಂಜೂರು ಮಾಡುವಂತೆ ಸ್ಥಳೀಯರು ತಾಲ್ಲೂಕು ಆಡಳಿತಕ್ಕೆ ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಗ್ರಾಮದಲ್ಲಿ ಬುಧವಾರ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಶವ ಸಂಸ್ಕಾರಕ್ಕಾಗಿ ಜಾಗದ ಹುಡುಕಾಟ ನಡೆದಿತ್ತು. ಕೆರೆ ಬಳಿ ಅಂತ್ಯಕ್ರಿಯೆ ಮಾಡಲು ಕೆಲವರಿಂದ ವಿರೋಧ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು.

ಈ ವೇಳೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಬಿಡದಿ ಹೋಬಳಿ ಘಟಕದ ಸಂಚಾಲಕ ನಿಖಿಲ್ ಸಜ್ಜೆಲಿಂಗಯ್ಯ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಶವ ಸಂಸ್ಕಾರಕ್ಕೆ ಜಾಗ ಗುರುತಿಸುವಂತೆ ಒತ್ತಾಯಿಸಿ ಪಂಚಾಯಿತಿ ಕಚೇರಿ ಎದುರು ಶವವಿಟ್ಟು ಪ್ರತಿಭಟಿಸುವ ನಿರ್ಧಾರ ಮಾಡಿದ್ದರು.

ಅಧಿಕಾರಿಗಳಿಗೆ ಪ್ರತಿಭಟನೆ ವಿಚಾರವನ್ನು ದೂರವಾಣಿ ಕರೆ ಮಾಡಿ ತಿಳಿಸುತ್ತಿದ್ದಂತೆ ಗ್ರಾಮಕ್ಕೆ ಧಾವಿಸಿದ ಕಂದಾಯ ಹಾಗೂ ಸರ್ವೆ ಇಲಾಖೆ ಅಧಿಕಾರಿಗಳು ಸರ್ವೆ ನಂ. 68ರ ಗೋಮಾಳ ಜಾಗದಲ್ಲಿ ಸ್ಮಶಾನಕ್ಕೆ ಜಾಗ ಗುರುತಿಸಿ ಕೊಟ್ಟು ಶವ ಸಂಸ್ಕಾರಕ್ಕೆ ಅನುವು ಮಾಡಿಕೊಟ್ಟರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚಿಕ್ಕೇಗೌಡ, ಮುಖಂಡರಾದ ಮಾರೇಗೌಡ, ವೆಂಕಟೇಶ್, ದುರ್ಗಯ್ಯ, ರಮೇಶ್, ರೇವಣಸಿದ್ದಯ್ಯ, ಡಿಎಸ್‌ಎಸ್ ಮುಖಂಡರಾದ ಬಾನಂದೂರು ಕುಮಾರ್, ಕಲ್ಲುಗೋಪಹಳ್ಳಿ ಲೋಕೇಶ್, ಸಂಜಯ್, ಕಾರ್ತಿಕ್, ದಿನೇಶ್, ಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT