ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಲಾಕ್‌ಡೌನ್‌ಗೆ ಸಿಗದ ಬೆಂಬಲ, ಸುರಕ್ಷತೆಗಿಲ್ಲ ಆದ್ಯತೆ

ಎಂದಿನಂತೆ ವಹಿವಾಟು ನಡೆಸಿದ ವರ್ತಕರು
Last Updated 24 ಜೂನ್ 2020, 16:28 IST
ಅಕ್ಷರ ಗಾತ್ರ

ರಾಮನಗರ: ಕೊರೊನಾ ವೈರಸ್ ಹಾವಳಿ ನಿಯಂತ್ರಿಸುವ ಸಲುವಾಗಿ ನಗರದಾದ್ಯಂತ ವರ್ತಕ ಸಂಘಟನೆಗಳು ಕರೆ ನೀಡಿದ್ದ ಸ್ವಯಂಪ್ರೇರಿತ ಲಾಕ್‌ಡೌನ್‌ಗೆ ಬುಧವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಅಂಗಡಿ-ಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು.

ಜಿಲ್ಲೆಯಲ್ಲಿ ಕೋವಿಡ್‌-19 ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ತಿಂಗಳಾಂತ್ಯದವರೆಗೆ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲ ರೀತಿಯ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲು ಮಂಗಳವಾರ ಕನ್ನಿಕಾ ಮಹಲ್‌ ಸಭಾಂಗಣದಲ್ಲಿ ನಡೆದ ವರ್ತಕರೊಂದಿಗಿನ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ ಆ ತೀರ್ಮಾನಕ್ಕೆ ಜನಮನ್ನಣೆ ಸಿಗಲಿಲ್ಲ. ಚಿನ್ನಬೆಳ್ಳಿ ವರ್ತಕರು ಮಾತ್ರ ತಮ್ಮ ಅಂಗಡಿಗಳನ್ನು ಬಂದ್ ಮಾಡಿದ್ದರು.

ಮೈಸೂರು - ಬೆಂಗಳೂರು ಹೆದ್ದಾರಿ ಬದಿ, ಹಳೇ ಬಸ್ ನಿಲ್ದಾಣ ವೃತ್ತ, ರೈಲ್ವೆ ನಿಲ್ದಾಣ ರಸ್ತೆ, ಮಹಾತ್ಮಗಾಂಧಿ ರಸ್ತೆ, ಕಾಯಿಸೊಪ್ಪಿನ ಬೀದಿ, ಟ್ರೂಪ್ ಲೈನ್ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳ ಬದಿಯಲ್ಲಿರುವ ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು. ಹೋಟೆಲ್ ಗಳು, ಟೀ ಅಂಗಡಿಗಳು, ದಿನಸಿ ಅಂಗಡಿಗಳು, ಬಟ್ಟೆ ಅಂಗಡಿಗಳು, ಮಾಂಸದ ಅಂಗಡಿಗಳು, ತರಕಾರಿ ವ್ಯಾಪಾರಿಗಳು, ಹಾರ್ಡ್‌‌ವೇರ್‌, ಎಲೆಕ್ಟ್ರಾನಿಕ್ ಶೋ ರೂಮ್ ಗಳು ತೆರೆದು ವಹಿವಾಟಿನಲ್ಲಿ ತೊಡಗಿದ್ದವು.

ಎಪಿಎಂಸಿ ಹಾಗೂ ರೇಷ್ಮೆಗೂಡು ಮಾರುಕಟ್ಟೆ ಎಂದಿನಂತೆ ಕಾರ್ಯನಿರ್ವಹಿಸಿದವು. ಕೆಎಸ್ ಆರ್ ಟಿಸಿ , ಖಾಸಗಿ ಬಸ್ ಗಳ ಸಂಚಾರಕ್ಕೆ ಯಾವುದೇ ಅಡ್ಡಿ ಇರಲಿಲ್ಲ. ಮೈಸೂರು - ಬೆಂಗಳೂರು ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಮಾಮೂಲಿಯಾಗಿತ್ತು.

ಹಿಂದಿನ ದಿನ ಕೈಗೊಂಡ ನಿರ್ಧಾರದಂತೆ ಕೆಲವು ವರ್ತಕರು ಬೆಳಗ್ಗೆ ಅಂಗಡಿ ಬಂದ್ ಮಾಡಿದ್ದರಾದರೂ ಅಕ್ಕಪಕ್ಕದ ಅಂಗಡಿಯವರು ಬಾಗಿಲು ತೆರೆದಿದ್ದನ್ನು ನೋಡಿ ಅವರೂ ಬಾಗಿಲು ತೆಗೆದು ವಹಿವಾಟು ಆರಂಭಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT