ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪದದಲ್ಲಿ ಉದಾತ್ತ ಮೌಲ್ಯ

Last Updated 25 ಸೆಪ್ಟೆಂಬರ್ 2019, 13:15 IST
ಅಕ್ಷರ ಗಾತ್ರ

ಮಾಗಡಿ: ನಾಡಿನ ಜನಪದ ಕಲೆ, ಸಾಹಿತ್ಯ, ಪರಂಪರೆಯಿಂದ ಬಂದಿರುವ ಜ್ಞಾನ ಹಾಗೂ ಒಟ್ಟು ರೈತಾಪಿ ವರ್ಗ ಜನಸಮುದಾಯದ ಉದಾತ್ತ ಮೌಲ್ಯಗಳು ಜನಪದ ಪದಗಳಲ್ಲಿ ಅಡಗಿದೆ ಎಂದು ಕಲಾವಿದೆ ಜಯಲಕ್ಷ್ಮಮ್ಮ ತಿಳಿಸಿದರು.

ತಾಲ್ಲೂಕಿನ ನೇತೇನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ನೆಸೆಪಾಳ್ಯದಲ್ಲಿ ತಾಲ್ಲೂಕು ಕನ್ನಡ ಜಾನಪದ ಪರಿಷತ್‌ ವತಿಯಿಂದ ಬುಧವಾರ ನಡೆದ ಜನಪದ ಪದ ಗಾಯನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಜನಪದ ಕಥನ ಕಾವ್ಯಗಳಲ್ಲಿ ಜ್ಞಾನಸಂಪತ್ತಿನ ಮಹತ್ವವಿದೆ. ಬದುಕಿಗೆ ಬೇಕಾದ ನವಿರಾದ ಹಾಸ್ಯ, ಬೈಗುಳ, ಹೊಗಳಿಕೆ, ತೆಗಳಿಕೆಗಳಿವೆ. ಜನಸಮುದಾಯದ ಆದಿಮ ರೂಪಗಳ ಪುನರ್‌ ಮನನಕ್ಕೆ ಜನಪದ ಆಕರವಾಗಿದೆ. ಮೂಲ ಜನಪದ ಕಲಾವಿದರನ್ನು ಗುರುತಿಸಿ ಗೌರವಿಸಿ, ಅವರಲ್ಲಿ ಜನಪದ ಬುತ್ತಿಯನ್ನು ಸಂಗ್ರಹಿಸುವ ಗುರುತರವಾದ ಕೆಲಸ ನಡೆಯಬೇಕಿದೆ’ ಎಂದರು.

ಹಿರಿಯ ಕಲಾವಿದೆ ರಂಗಮ್ಮಚಿಕ್ಕಗುಡ್ಡಯ್ಯ ಮಾತನಾಡಿ, ‘ನಾನು ಬಾಲ್ಯದಿಂದಲೂ ನಮ್ಮ ಮನೆಯಲ್ಲಿ ನಮ್ಮ ಅಜ್ಜಿ ಹೇಳುತ್ತಿದ್ದ ಪದಗಳನ್ನು ಹಾಡುತ್ತಾ ಬಂದಿದ್ದೇನೆ. ಹೊಲದಲ್ಲಿ ಪೈರು ನಾಟಿ ಮಾಡುವಾಗ, ದೇವರ ಜಾತ್ರೆ, ಮದುವೆ, ಸೋಬನ ಇತರ ಸಂದರ್ಭದಲ್ಲಿ ಪದಗಳನ್ನು ಹೇಳುತ್ತಾ ಇಳಿವಯಸ್ಸಿನಲ್ಲಿದ್ದೇನೆ. ಜನಪದ ಲೋಕದವರು ನಮ್ಮಂತಹವರನ್ನು ಗುರುತಿಸಿಲ್ಲ’ ಎಂದರು.

ಹಿರಿಯ ಜನಪದ ಕಲಾವಿದರಾದ ಹೊನ್ನಮ್ಮ ಕೆಂಪಗುಡ್ಡಯ್ಯ ಮಾತನಾಡಿ, ‘65 ವರ್ಷಗಳಿಂದಲೂ ಜನಪದ ಕಥೆಗಳನ್ನು ಮತ್ತು ಪದಗಳನ್ನು ಹೇಳುತ್ತಾ ಜೀವನ ಕಳೆಯುತ್ತಿದ್ದೇವೆ. ಸರ್ಕಾರ ನಮಗೆ ಯಾವುದೇ ಸವಲತ್ತು ನೀಡಿಲ್ಲ. ನಮ್ಮಂತಹ ಹಳ್ಳಿಮುಕ್ಕಗಳನ್ನು ಕೇಳುವವರು ಯಾರು?’ ಎಂದು ಸಂಕಟ ತೋಡಿಕೊಂಡರು.

ಮರಿಯಮ್ಮ ಸಂಜೀವಯ್ಯ, ನಿಂಗಮ್ಮ ಕೃಷ್ಣಪ್ಪ, ಲಕ್ಷ್ಮಮ್ಮಲೆಂಕಪ್ಪ, ಪಾರ್ವತಮ್ ಚನ್ನಮಾರಯ್ಯ ಜನಪದ ಜೀವನ ಅನುಭವದ ಬಗ್ಗೆ ಮಾತನಾಡಿದರು. ಮಳೆರಾಯನ ಪದ, ಮಾಗಡಿ ಕೆಂಪೇಗೌಡ, ಪದಗಳನ್ನು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT