ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗೆ ಜಿಲ್ಲಾಡಳಿತ ಸಿದ್ಧತೆ, ನೀತಿಸಂಹಿತೆ ಕಟ್ಟುನಿಟ್ಟಿನ ಜಾರಿ

ರಾಜಕೀಯ ಪಕ್ಷಗಳ ಚಟುವಟಿಕೆಗಳ ಮೇಲೆ ನಿಗಾ
Last Updated 11 ಮಾರ್ಚ್ 2019, 13:59 IST
ಅಕ್ಷರ ಗಾತ್ರ

ಅಂಕಿ–ಅಂಶ

* 24,56,207–ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿನ ಒಟ್ಟು ಮತದಾರರು
* 12,67,379–ಪುರುಷ ಮತದಾರರು
* 11,88,207–ಮಹಿಳಾ ಮತದಾರರು
* 340–ಇತರೆ ಮತದಾರರು
* 281–ಸೇವಾ ಮತದಾರರು

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಹೊಸ ಸಂಸದರ ಆಯ್ಕೆಗಾಗಿ ಏಪ್ರಿಲ್‌ 18ರಂದು ಮತದಾನ ನಿಗದಿಯಾಗಿದೆ. ಈಗಾಗಲೇ ನೀತಿ ಸಂಹಿತೆಯು ಜಾರಿಗೆ ಬಂದಿದ್ದು, ರಾಜಕೀಯ ಪಕ್ಷಗಳ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಜಾಲತಾಣಗಳ ಮೇಲೂ ಚುನಾವಣಾ ಆಯೋಗವು ಕಣ್ಣಿರಿಸಿದೆ.

ಚುನಾವಣೆಯ ಸಿದ್ಧತೆ ಹಾಗೂ ಮಾದರಿ ನೀತಿಸಂಹಿತೆ ಕುರಿತು ಕ್ಷೇತ್ರದ ಚುನಾವಣಾ ಅಧಿಕಾರಿಯೂ ಆದ ಜಿಲ್ಲಾಧಿಕಾರಿ ಕೆ. ರಾಜೇಂದ್ರ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ‘ಇದೇ 19ರಿಂದ ನಾಮಪತ್ರ ಸಲ್ಲಿಕೆಯು ಆರಂಭಗೊಳ್ಳಲಿದ್ದು, 26 ಕಡೆಯ ದಿನವಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. 27ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್‌ಗೆ 29 ಕಡೆಯ ದಿನವಾಗಿದೆ’ ಎಂದು ವಿವರಿಸಿದರು.

‘ಕ್ಷೇತ್ರದಲ್ಲಿ ಒಟ್ಟು 2672 ಮೂಲ ಹಾಗೂ 16 ಹೆಚ್ಚುವರಿ ಮತಗಟ್ಟೆಗಳೂ ಸೇರಿದಂತೆ 2688 ಮತಗಟ್ಟೆಗಳಿವೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರಂತೆ ಸಹಾಯಕ ಚುನಾವಣಾ ಅಧಿಕಾರಿಗಳನ್ನು ನೇಮಿಸಲಾಗಿದೆ. ಆಯಾ ಕ್ಷೇತ್ರಗಳ ವ್ಯಾಪ್ತಿಯಲ್ಲಿಯೇ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಪ್ರಕ್ರಿಯೆಗಳು ನಡೆಯಲಿವೆ. ಮೇ 23ರಂದು ರಾಮನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಮತ ಎಣಿಕೆ ನಡೆಯಲಿದೆ’ ಎಂದರು.

‘ರಾಮನಗರ ಜಿಲ್ಲೆಯಲ್ಲಿ ಒಟ್ಟು 10,030 ಅಂಗವಿಕಲ ಮತದಾರರು ಇದ್ದಾರೆ. ಅವರನ್ನು ಮತಗಟ್ಟೆಗೆ ಕರೆತರಲು ವಾಹನ ವ್ಯವಸ್ಥೆಯ ಜೊತೆಗೆ ವೀಲ್‌ಚೇರ್‌ಗಳ ವ್ಯವಸ್ಥೆಯನ್ನೂ ಮಾಡಲಾಗುವುದು. ಅಂಗವಿಕಲ ಮತದಾರರು ಚುನಾವಣಾ ಆ್ಯಪ್‌ ಮೂಲಕವೂ ವೀಲ್‌ಚೇರ್‌ಗಳನ್ನು ಕಾಯ್ದಿರಿಸಬಹುದು’ ಎಂದು ತಿಳಿಸಿದರು.

ಹೆಸರು ಸೇರ್ಪಡೆಗೆ ಅವಕಾಶ: ಈಚೆಗೆ ನಡೆಸಿದ ಮತದಾರರ ಮಿಂಚಿನ ಅಭಿಯಾನದ ಮೂಲಕ 14,030 ಯುವ ಮತದಾರರು ಹೊಸತಾಗಿ ಸೇರ್ಪಡೆ ಆಗಿದ್ದಾರೆ. ನಾಮಪತ್ರ ಸಲ್ಲಿಕೆಯ ಕಡೆಯ ದಿನದವರೆಗೂ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ಇದೆ’ ಎಂದರು.

ಜಾಹೀರಾತುಗಳ ತೆರವು: ನೀತಿಸಂಹಿತೆಯ ಹಿನ್ನೆಲೆಯಲ್ಲಿ ಭಾನುವಾರ ಸಂಜೆಯಿಂದಲೇ ಸರ್ಕಾರಿ, ಖಾಸಗಿ ಜಾಹೀರಾತುಗಳನ್ನು ತೆರವುಗೊಳಿಸಲಾಗುತ್ತಿದೆ. ಜಾಹೀರಾತು ಪ್ರಕಟಣೆಗೆ ಪೂರ್ವಾನುಮತಿ ಅವಶ್ಯವಾಗಿದೆ. ಅಕ್ರಮವಾಗಿ ಜಾಹೀರಾತು ನೀಡಿದ್ದು ಕಂಡುಬಂದಲ್ಲಿ ಅದನ್ನು ಅಭ್ಯರ್ಥಿಯ ವೆಚ್ಚಕ್ಕೆ ಸೇರಿಸಲಾಗುವುದು ಎಂದು ಮಾಹಿತಿ ನೀಡಿದರು. ಪ್ರತಿ ಅಭ್ಯರ್ಥಿಯ ಚುನಾವಣಾ ವೆಚ್ಚದ ಮಿತಿಯನ್ನು ₹ 70 ಲಕ್ಷಕ್ಕೆ ಸೀಮಿತಗೊಳಿಸಲಾಗಿದೆ ಎಂದರು.

ಆ್ಯಪ್‌ನಲ್ಲೇ ದೂರು ದಾಖಲಿಸಿ: ಜಿಲ್ಲಾ ಪಂಚಾಯಿತಿ ಸಿಇಒ ಮುಲ್ಲೈ ಮುಹಿಲನ್‌ ಮಾತನಾಡಿ ಚುನಾವಣಾ ಆಯೋಗವು ಚುನಾವಣಾ ಅಕ್ರಮಗಳ ಮೇಲೆ ನಿಗಾ ವಹಿಸುವ ಸಲುವಾಗಿ ‘CVigil’ ಎನ್ನುವ ಆ್ಯಪ್‌ ಅನ್ನು ಜಾರಿಗೆ ತಂದಿದೆ. ನೀತಿಸಂಹಿತೆ ಉಲ್ಲಂಘನೆಗೆ ಸಂಬಂಧಪಟ್ಟಂತೆ ಸಾರ್ವಜನಿಕರು ಈ ಆ್ಯಪ್‌ ಮೂಲಕ ಫೋಟೊ ಅಥವಾ ವೀಡಿಯೊ ಅಪ್‌ಲೋಡ್‌ ಮಾಡಬಹುದು. ದೂರುಗಳ ಬಗ್ಗೆ 100 ನಿಮಿಷಗಳ ಒಳಗೆ ಅಧಿಕಾರಿಗಳ ತಂಡವು ಪರಿಶೀಲಿಸಿ ಕ್ರಮ ಜರುಗಿಸಲಿದೆ. ಟೋಲ್‌ ಫ್ರೀ ಸಂಖ್ಯೆ 1950 ಗೆ ಕರೆ ಮಾಡಿಯೂ ದೂರು ನೀಡಬಹುದಾಗಿದೆ ಎಂದರು.

ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಅಭ್ಯರ್ಥಿಯ ಪರ/ವಿರೋಧವಾಗಿ ಪ್ರಚಾರ ಮಾಡುವಂತೆ ಇಲ್ಲ. ಹಾಗೆ ಕಂಡುಬಂದಲ್ಲಿ ಅದಕ್ಕೆ ತಗುಲುವ ವೆಚ್ಚವನ್ನು ಅಭ್ಯರ್ಥಿಯ ಲೆಕ್ಕಕ್ಕೆ ಸೇರಿಸಲಾಗುವುದು ಎಂದರು.

ಬಂದೂಕು ವಶಕ್ಕೆ
‘ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ವ್ಯಾಪ್ತಿಯಲ್ಲಿ 2224 ಪರವಾನಗಿ ಹೊಂದಿದ ಬಂದೂಕುಗಳು ಇದ್ದು, ಇದರಲ್ಲಿ ಶೇ 60ರಷ್ಟನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ. ರೌಡಿ ಚಟುವಟಿಕೆಗಳ ಮೇಲೂ ನಿಗಾ ಇರಿಸಲಾಗಿದೆ. ಭದ್ರತೆಗಾಗಿ ಕೆಎಸ್‌ಆರ್‌ಪಿ, ಪ್ಯಾರ ಮಿಲಿಟರಿ ತುಕಡಿಗಳು ಬರಲಿವೆ. ಜಿಲ್ಲೆಯಲ್ಲಿ 12 ಕಡೆ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಬಿ. ರಮೇಶ್‌ ಮಾಹಿತಿ ನೀಡಿದರು.

ಪುರುಷ ಮತದಾರರೇ ಹೆಚ್ಚು
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಹಿಳೆಯರಿಗಿಂತ 79,172 ಪುರುಷ ಮತದಾರರು ಹೆಚ್ಚಿದ್ದಾರೆ. ಇಲ್ಲಿನ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ದಕ್ಷಿಣ ಕ್ಷೇತ್ರವು ಅತಿಹೆಚ್ಚು ಸಂಖ್ಯೆಯ ಮತದಾರರನ್ನು ಹೊಂದಿದೆ. ನಂತರದಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರವಿದೆ. ತುಮಕೂರು ಜಿಲ್ಲೆಯ ಕುಣಿಗಲ್ ಕ್ಷೇತ್ರವು ಅತಿ ಕಡಿಮೆ ಮತದಾರರನ್ನು ಹೊಂದಿದೆ.

ಮತದಾನ ಜಾಗೃತಿಗೆ ಸ್ಪರ್ಧೆ
ಮತದಾನದ ಮಹತ್ವ ಸಾರುವ ಸಲುವಾಗಿ ಸ್ವೀಪ್‌ ಸಮಿತಿಯು ಯುವಜನರಿಗಾಗಿ ಸ್ಪರ್ಧೆಗಳನ್ನು ಆಯೋಜಿಸಿದೆ.
ಕಿರುಚಿತ್ರ, ಟಿಕ್‌ ಟಾಕ್‌ ಹಾಗೂ ಸ್ಪೋಗನ್‌ ರೇಟಿಂಗ್ ಸ್ಪರ್ಧೆಗಳು ಇವೆ. ಆಸಕ್ತರು ವೀಡಿಯೊಗಳನ್ನು ಇದೇ 15ರ ಒಳಗೆ ಜಿಲ್ಲಾಡಳಿತದ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬಹುದು. ವಿಜೇತರಿಗೆ ನಗದು ಬಹುಮಾನ ಇದೆ ಎಂದು ಜಿ.ಪಂ. ಸಿಇಒ ಮುಲ್ಲೈ ಮುಹಿಲನ್ ಮಾಹಿತಿ ನೀಡಿದರು.

ಕ್ಷೇತ್ರವಾರು ಮತದಾರರ ವಿವರ

ವಿಧಾನಸಭಾ ಕ್ಷೇತ್ರ ಪುರುಷರು ಮಹಿಳೆಯರು ಇತರೆ ಸೇವಾ ಮತದಾರರು ಒಟ್ಟು
ಕುಣಿಗಲ್‌ 96,144 93,536 15 77 1,89,772
ರಾಜರಾಜೇಶ್ವರಿ ನಗರ 2,32,962 2,12,797 80 08 4,45,847
ಬೆಂಗಳೂರು ದಕ್ಷಿಣ 3,18,956 2,79,149 101 24 5,98,230
ಆನೇಕಲ್‌ 1,88,716 1,67,831 85 6 3,56,638
ಮಾಗಡಿ 1,12,431 1,10,330 19 73 2,22,853
ರಾಮನಗರ 1,02,997 1,04,344 24 23 2,07,388
ಕನಕಪುರ 1,09,588 1,10,244 9 25 2,19,866
ಚನ್ನಪಟ್ಟಣ 1,05,585 1,09,976 7 45 2,15,613

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT