ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡದಿ: ಪಬ್ಲಿಕ್ ಶಾಲೆ ಪ್ರಾರಂಭಕ್ಕೆ ವಿರೋಧ

ಕಾಕರಾಮನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಮುಚ್ಚುವ ಹುನ್ನಾರ: ಪೋಷಕರ ಆರೋಪ
Last Updated 7 ಏಪ್ರಿಲ್ 2022, 4:30 IST
ಅಕ್ಷರ ಗಾತ್ರ

ಬಿಡದಿ: ಗಾಣಕಲ್ ಸರ್ಕಾರಿ ಪೌಢಶಾಲಾ ಆವರಣದಲ್ಲಿ ಗ್ರಾಮ ಪಂಚಾಯಿತಿಯಿಂದ ಪಬ್ಲಿಕ್ ಶಾಲೆ ಪ್ರಾರಂಭಿಸುವ ಮೂಲಕ ಕಾಕರಾಮನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ವಿಲೀನದ ಹೆಸರಿನಲ್ಲಿ ಮುಚ್ಚುವ ಹುನ್ನಾರ ನಡೆದಿದೆ ಎಂದು ವಿದ್ಯಾರ್ಥಿಗಳ ಪೋಷಕರು ದೂರಿದರು.

‘ಪಬ್ಲಿಕ್ ಶಾಲೆಗೆ ಮಕ್ಕಳನ್ನು ಕಳುಹಿಸದಿರಲು ನಿರ್ಧರಿಸಿದ್ದೇವೆ. ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಉಳಿಸಿಕೊಳ್ಳಲು ಹೋರಾಟದ ಹಾದಿ ಹಿಡಿಯುತ್ತೇವೆ’ ಎಂದು ಪೋಷಕರಾದ ಕನ್ನಡ ಮಂಜು, ಗಂಗಾಧರ್ ಹಾಗೂ ರವಿ ಅವರು ಬುಧವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ನಮ್ಮೂರ ಶಾಲೆ ಉಳಿಯಲಿ ಎಂಬ ಉದ್ದೇಶದಿಂದ ಮಕ್ಕಳನ್ನು ಖಾಸಗಿ ಶಾಲೆಯಿಂದ ಕಾಕರಾಮನಹಳ್ಳಿ ಸರ್ಕಾರಿ ಶಾಲೆಗೆ ಸೇರಿಸಿದ್ದೇವೆ. ಈಗ ಶಾಲೆಯಲ್ಲಿ 52 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಪಬ್ಲಿಕ್ ಶಾಲೆ ಹೆಸರಿನಲ್ಲಿ 70 ವರ್ಷಗಳ ಇತಿಹಾಸ ಇರುವ ನಮ್ಮೂರ ಶಾಲೆ ಮುಚ್ಚುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.

ಪಬ್ಲಿಕ್ ಶಾಲೆ ಪ್ರಾರಂಭಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಶಾಲೆಯಲ್ಲಿ ಆಟದ ಮೈದಾನ, ಅಡುಗೆ ಕೊಠಡಿ, ಶೌಚಾಲಯ ಸೇರಿದಂತೆ ಮೂಲಸೌಲಭ್ಯಗಳೇ ಇಲ್ಲ. ಆ ಶಾಲೆಯಲ್ಲಿ 50 ರಿಂದ 60 ಮಕ್ಕಳಿಗೆ ಬಿಸಿಯೂಟ ನೀಡಲು ಆಗುತ್ತಿಲ್ಲ. ಹೀಗಿರುವಾಗ 600 ಮಕ್ಕಳಿಗೆ ಯಾವ ರೀತಿ ಸೌಲಭ್ಯ ಕಲ್ಪಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಮಾಡಲು ಆಸಕ್ತಿಯಿರುವ ಮಕ್ಕಳು ಬರಬಹುದು. ಬೇಡ ಎನ್ನುವವರು ಅದೇ ಶಾಲೆಯಲ್ಲಿ ವ್ಯಾಸಂಗ ಮುಂದುವರಿಸಬಹುದೆಂದು ಶಾಸಕರು ಹೇಳುತ್ತಾರೆ. ಹಾಗಾದರೆ ಕಾಕರಾಮನಹಳ್ಳಿ ಶಾಲೆಯ ಇಬ್ಬರು ಶಿಕ್ಷಕರನ್ನು ಪಬ್ಲಿಕ್ ಶಾಲೆಗೆ ಏಕೆ ವರ್ಗಾವಣೆ ಮಾಡಲಾಗಿದೆ ಎಂದು ಕಿಡಿಕಾರಿದರು.

ಶಾಸಕರಿಗೆ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ಇದ್ದರೆ ಹೌಸಿಂಗ್ ಬೋರ್ಡ್ ನಿವೇಶನದ ಸುತ್ತಮುತ್ತ ಕಿತ್ತೂರು ರಾಣಿ ಚನ್ನಮ್ಮ ಹಾಗೂ ನವೋದಯ ಶಾಲೆ ಮಾದರಿಯಲ್ಲಿ ಹೊಸ ಶಾಲೆ ನಿರ್ಮಾಣ ಮಾಡಲಿ. ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು.

ಗಾಣಕಲ್‌ನಲ್ಲಿರುವ ಪಬ್ಲಿಕ್ ಶಾಲೆಗೆ ಮಕ್ಕಳನ್ನು ದಾಖಲಿಸುವಂತೆ ಒತ್ತಡ ಹೇರುವುದು ಸರಿಯಲ್ಲ. ಹಾಗೊಂದು ವೇಳೆ ಬಲವಂತಪಡಿಸಿದರೆ ಮಕ್ಕಳನ್ನು ಸರ್ಕಾರಿ ಶಾಲೆಯಿಂದ ವರ್ಗಾವಣೆ ಪತ್ರ ಪಡೆದು ಖಾಸಗಿ ಶಾಲೆಗಳಲ್ಲಿ ದಾಖಲು ಮಾಡಿಸುತ್ತೇವೆ ಎಂದು ಹೇಳಿದರು.

ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಓದಿಸುವಷ್ಟು ಆರ್ಥಿಕ ಶಕ್ತಿ ನಮಗಿದೆ. ಆದರೆ, ನಮ್ಮೂರಿನ ಸರ್ಕಾರಿ ಶಾಲೆ ಉಳಿಯಬೇಕೆಂಬ ಏಕೈಕ ಉದ್ದೇಶದಿಂದ ಮಕ್ಕಳನ್ನು ಇಲ್ಲಿ ದಾಖಲಾತಿ ಮಾಡಿಸಿದ್ದೇವೆ. ಶಿಕ್ಷಣ ಇಲಾಖೆ ನೇಮಕ ಮಾಡದಿದ್ದರೂ ಎಸ್‌ಡಿಎಂಸಿ ಹಾಗೂ ಹಳೇಯ ವಿದ್ಯಾರ್ಥಿಗಳ ಸಂಘದ ಮೂಲಕ ಆಂಗ್ಲ ಭಾಷಾ ಬೋಧನೆಗೆ ಒಬ್ಬರು ಶಿಕ್ಷಕರನ್ನು ನಿಯೋಜಿಸಿ ವೇತನ ಕೂಡ ನೀಡುತ್ತಿದ್ದೇವೆ. ಶಾಲೆ ಮಾದರಿಯಾಗಿ ನಡೆಯುತ್ತಿದೆ ಎಂದು ಹೇಳಿದರು.

ಶಾಸಕರು ಒಣ ಪ್ರತಿಷ್ಠೆ ಬಿಡಬೇಕು. ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುವ ಯಾವುದೇ ನಿರ್ಧಾರ ಕೈಗೊಳ್ಳಬಾರದು. ಇಲ್ಲದಿದ್ದರೆ ನಮ್ಮೂರ ಸರ್ಕಾರಿ ಶಾಲೆ ಉಳಿಸಿಕೊಳ್ಳಲು ಹೋರಾಟದ ಹಾದಿ ಹಿಡಿಯುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪೋಷಕರಾದ ಗ್ರಾ.ಪಂ. ಸದಸ್ಯೆ ಸುಕನ್ಯಾ ನಾರಾಯಣಪ್ಪ, ಕೃಷ್ಣಪ್ಪ, ಚಂದ್ರು, ಶಾಲಿನಿ, ಕಾಂತರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT