ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಲ್‌ ವಿರೋಧಿಸಿ ಸಂಘಟನೆಗಳ ಪ್ರತಿಭಟನೆ

ಸರ್ವೀಸ್‌ ರಸ್ತೆ ಕಾಮಗಾರಿ ಪೂರ್ಣಗೊಳಿಸುವವರೆಗೂ ಟೋಲ್‌ ಪ್ಲಾಜಾ ಸ್ಥಗಿತಕ್ಕೆ ಒತ್ತಾಯ
Last Updated 20 ಮಾರ್ಚ್ 2023, 5:25 IST
ಅಕ್ಷರ ಗಾತ್ರ

ಬಿಡದಿ (ರಾಮನಗರ): ಬೆಂಗಳೂರು–ಮೈಸೂರು ದಶಪಥ ಹೆದ್ದಾರಿಯಲ್ಲಿ ಟೋಲ್‌ ಸಂಗ್ರಹ ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ರೈತ ಸಂಘದ ಕಾರ್ಯಕರ್ತರು ಶೇಷಗಿರಿಹಳ್ಳಿ ಟೋಲ್ ಪ್ಲಾಜಾ ಬಳಿ ಭಾನುವಾರ ಪ್ರತಿಭಟನೆ ನಡೆಸಿದರು.

ಟೋಲ್‌ ಎದುರು ಸಮಾವೇಶಗೊಂಡ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಹೆದ್ದಾರಿಯಲ್ಲಿ ಎಲ್ಲ ಮೂಲ ಸೌಕರ್ಯಗಳನ್ನು ಕಲ್ಪಿಸಿದ ಮೇಲಷ್ಟೇ ಟೋಲ್‌ ಸಂಗ್ರಹ ಆರಂಭಿಸಬೇಕು. ಅಲ್ಲಿವರೆಗೆ ಟೋಲ್‌ ಸಂಗ್ರಹವನ್ನು ಮುಂದೂಡಬೇಕು ಎಂದು ಒತ್ತಾಯಿಸಿದರು.

ಹೆದ್ದಾರಿಗೆ ಅಗತ್ಯ ಇರುವ ಮೂಲ ಸೌಕರ್ಯಗಳನ್ನ ಕಲ್ಪಿಸದೆ ತರಾತುರಿಯಲ್ಲಿ ಟೋಲ್ ಸಂಗ್ರಹಣೆ ಮಾಡುವ ಮೂಲಕ ಹೆದ್ದಾರಿ ಪ್ರಾಧಿಕಾರವು ನಿರ್ಲಕ್ಷ್ಯ ತೋರಿದೆ. ಅನೇಕ ಕಡೆಗಳಲ್ಲಿ ಸರ್ವಿಸ್ ರಸ್ತೆ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಇಷ್ಟೆಲ್ಲ ಕಾಮಗಾರಿಗಳು ಬಾಕಿ ಇದ್ದರೂ ಹೆದ್ದಾರಿಯನ್ನು ತರಾತುರಿಯಲ್ಲಿ ಉದ್ಘಾಟಿಸಲಾಗಿದೆ ಎಂದು ದೂರಿದರು.

ಬೆಂಗಳೂರು– ಮೈಸೂರು ನಡುವೆ ಓಡಾಡುವ ವಾಹನ ಸವಾರರು ದಾರಿ ಮದ್ಯೆ ಶೌಚಾಲಯಕ್ಕೆ , ಊಟಕ್ಕೆ ಏನು ಮಾಡಬೇಕು. ಅಪಘಾತ ನಡೆದರೆ ತುರ್ತು ಚಿಕಿತ್ಸೆ ಎಲ್ಲಿ ನೀಡುತ್ತಾರೆ? ಇಷ್ಟು ಸಾಮಾನ್ಯ ಜ್ಞಾನ ಅಧಿಕಾರಿಗಳಿಗೆ ಇಲ್ಲವೆ ಎಂದು ಪ್ರಶ್ನೆ ಮಾಡಿದರು.

ಹೆದ್ದಾರಿಯ ಕಾಮಗಾರಿ ಅವೈಜ್ಞಾನಿಕತೆಯಿಂದ ಕೂಡಿದೆ. ಸಾಕ್ಷಿ ಶನಿವಾರ ಬಂದ ಸಣ್ಣ ಪ್ರಮಾಣದ ಮಳೆಗೆ ಸಂಗಬಸವನದೊಡ್ಡಿ ಬಳಿ ಹೆದ್ದಾರಿಯಲ್ಲಿ ನೀರು ನಿಂತಿತ್ತು. ಈ ಮಳೆಗೆ ಹೀಗೆ ಆದರೆ ಜೂನ್ - ಜುಲೈ ತಿಂಗಳಲ್ಲಿ ಬರುವ ಮುಂಗಾರು ಮಳೆಗೆ ರಸ್ತೆಯ ಪರಿಸ್ಥಿತಿ ಏನು? ಈ ಹಿಂದೆ ಹೆದ್ದಾರಿಯಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿ ಮತ್ತೆ ಮರುಕಳಿಸಲಿದೆ. ಈ ಬಗ್ಗೆ ಕೂಡ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಹೆದ್ದಾರಿ ನಿರ್ಮಾಣಕ್ಕೆ ಹಲವು ರೈತರು ಜಮೀನು ಕಳೆದುಕೊಂಡಿದ್ದಾರೆ. ಕೆಲವು ಕಡೆ ಇನ್ನೂ ಹಲವು ರೈತರಿಗೆ ಭೂಸ್ವಾಧಿನದ ಹಣವನ್ನ ಕೊಟ್ಟಿಲ್ಲ ಈ ಬಗ್ಗೆ ಮುಂದಿನ ದಿನಗಳಲ್ಲಿ ಪ್ರಾಧಿಕಾರ ಕಚೇರಿ ಎದುರು ಪತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜಯಕರ್ನಾಟಕ ಸಂಘಟನೆಯ ರಾಜ್ಯ ಮುಖ್ಯ ಸಲಹೆಗಾರ ಪ್ರಕಾಶ್ ರೈ, ಜಿಲ್ಲಾ ಅಧ್ಯಕ್ಷ ಕೆ.ರವಿ, ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಜಗದೀಶ್, ಕರವೇ ಮುಖಂಡರಾದ ಎಂ.ಎನ್‌. ರಾಜು, ಮಾದೇಗೌಡ, ರೈತ ಸಂಘಟನೆಗಳ ಮುಖಂಡರಾದ ತುಂಬೇನಹಳ್ಳಿ ಶಿವಕುಮಾರ್, ಬೈರೇಗೌಡ, ಕನ್ನಡ ಜನಮನ ವೇದಿಕೆಯ ರಾಜು, ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಟಿ.ದಿನೇಶ್, ಕಕಜವೇ ವೇದಿಕೆ ಜಿಲ್ಲಾ ಅಧ್ಯಕ್ಷ ಯೋಗೀಶ್ ಗೌಡ ಸೇರಿದಂತೆ ಹಲವು ಸಂಘಟನೆಯ ಪದಾಧಿಕಾರಿಗಳು
ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT