ಗುರುವಾರ , ಜೂನ್ 17, 2021
22 °C
ರಾಮನಗರ ಜಿಲ್ಲೆಯ ತಾಲ್ಲೂಕು ಆಸ್ಪತ್ರೆಗಳಿಗೆ ನಿತ್ಯ ಸರಬರಾಜು

ಬಿಡದಿ: ಬೆನ್ಟ್ಲೇ ಕಂಪನಿಯಿಂದ ಆಕ್ಸಿಜನ್‌ ಪೂರೈಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಿಡದಿ: ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಇರುವ ಬೆನ್ಟ್ಲೇ ಇಂಡಿಯಾ ಕಂಪನಿಯು ಜಿಲ್ಲೆಯ ಏಕೈಕ ಆಮ್ಲಜನಕ ತಯಾರಿಕಾ ಘಟಕವಾಗಿದೆ.

ಸುಮಾರು 5 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದು, ಕೈಗಾರಿಕೆಗಳಿಗೆ ಶೇ 80ರಷ್ಟು ಆಕ್ಸಿಜನ್‌ ಪೂರೈಸುತ್ತಿತ್ತು. ಉಳಿದ ಶೇ 20ರಷ್ಟು ಆಕ್ಸಿಜನ್‌ ಅನ್ನು ಆಸ್ಪತ್ರೆಗಳಿಗೆ ನೀಡುತ್ತಿತ್ತು. ಕೋವಿಡ್‌ ಸಂಕಷ್ಟದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್‌ ಅನ್ನು ಸಂಪೂರ್ಣವಾಗಿ ಜಿಲ್ಲೆಯ ಆಸ್ಪತ್ರೆಗಳಿಗೆ ಪೂರೈಕೆ ಮಾಡುತ್ತಿದೆ.

ಕೋವಿಡ್ ಎರಡನೇ ಅಲೆಗೆ ಸಾರ್ವಜನಿಕರು ತತ್ತರಿಸಿದ್ದಾರೆ. ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆಯಿಂದ ಜನರು ಪರದಾಡುತ್ತಿದ್ದಾರೆ. ಬೆನ್ಟ್ಲೇ ಇಂಡಿಯಾ ಕಂಪನಿಯು ರೋಗಿಗಳ ಹಿತದೃಷ್ಟಿಯಿಂದ ಹಗಲು-ರಾತ್ರಿ ಎನ್ನದೆ ಒಂದು ತಿಂಗಳಿನಿಂದಲೂ 450ಕ್ಕೂ ಹೆಚ್ಚು ಸಿಲಿಂಡರ್‌ಗಳಿಗೆ ರಿಫೀಲ್ ಮಾಡುವ ಕೆಲಸದಲ್ಲಿ ತೊಡಗಿದೆ.

‘ಒಂದು ಲೈನ್ ಸಿಲಿಂಡರ್ ತುಂಬಲು 45 ನಿಮಿಷ ಕಾಲಾವಕಾಶಬೇಕಾಗುತ್ತದೆ. ಅಲ್ಲದೆ ದಿನನಿತ್ಯ ನಿಗದಿತ ಸಮಯದಲ್ಲಿ ವಿದ್ಯುತ್ ಪೂರೈಕೆಯಾದರೆ 450 ಸಿಲಿಂಡರ್‌ಗಳಿಗೆ ರಿಫೀಲ್ ಮಾಡಬಹುದು’ ಎಂದು ಕಂಪನಿಯ ವ್ಯವಸ್ಥಾಪಕ ಹರಿಯಂತ್ ರಾಂಕ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಉತ್ಪಾದನೆಯಾಗುತ್ತಿರುವ ಆಮ್ಲಜನಕವನ್ನು ಜಿಲ್ಲೆಯ ನಾಲ್ಕು ತಾಲ್ಲೂಕಿನ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಇತ್ತೀಚೆಗೆ ಜಿಲ್ಲಾಧಿಕಾರಿ ಅವರು ಈ ಘಟಕಕ್ಕೆ ಭೇಟಿ ನೀಡಿ ಇಲ್ಲಿ ನಡೆಯುತ್ತಿರುವ ಕೆಲಸ ವೀಕ್ಷಿಸಿ ಪ್ರೋತ್ಸಾಹಿಸಿದ್ದಾರೆ. ಈಗ ಅತಿ ಕಠಿಣ ಪರಿಸ್ಥಿತಿ ಎದುರಾಗಿದೆ. ನೀವು ನಮ್ಮೊಂದಿಗೆ ಸಹಕರಿಸಬೇಕೆಂದು ಕೋರಿದ್ದಾರೆ. ಅವಶ್ಯಕತೆ ಇರುವ ಮೂಲಸೌಕರ್ಯ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ ಎಂದರು.

‘ಬಿಡದಿಯಲ್ಲಿ ಆಕ್ಸಿಜನ್ ಪ್ಲಾಂಟ್ ಇರುವುದರಿಂದ ಅನುಕೂಲವಾಗುತ್ತಿದೆ. 24 ಗಂಟೆಯೂ ಆಕ್ಸಿಜನ್‌ ಸಿಗುತ್ತಿದೆ. ಇದೇ ರೀತಿ ಇನ್ನೊಂದು ಪ್ಲಾಂಟ್ ನಿರ್ಮಿಸಬೇಕು. ಇದರಿಂದ ರೋಗಿಗಳಿಗೆ ಅನುಕೂಲವಾಗಲಿದೆ’ ಎಂದು ಸ್ಥಳೀಯ ಆಸ್ಪತ್ರೆಯ ಸಿಬ್ಬಂದಿ ಹರ್ಷದ್ ಅಲಿಖಾನ್ ಒತ್ತಾಯಿಸಿದರು.

ಮಣಿಪಾಲ್ ಆಸ್ಪತ್ರೆಯ ಸಿಬ್ಬಂದಿ ಜೀವನ್ ಮಾತನಾಡಿ, ‘ಮೊದಲು ಆಕ್ಸಿಜನ್ ಕೊರತೆ ಇರಲಿಲ್ಲ. ಕೊರೊನಾ ಸೋಂಕಿನಿಂದ ಸಂಕಷ್ಟಕ್ಕೀಡಾಗುವವರ ಸಂಖ್ಯೆ ಹೆಚ್ಚಿದ್ದರ ಪರಿಣಾಮ ಆಕ್ಸಿಜನ್ ಸಮಸ್ಯೆಯಾಯಿತು. ಸಂಗ್ರಹ ಇರುವ ಕಡೆಯಲ್ಲಿ ಹೋಗಿ ರೋಗಿಯ ಜೀವ ಉಳಿಸಬೇಕೆಂದು ದಿನದ 24 ಗಂಟೆಯೂ ಕೆಲಸ ನಿರ್ವಹಿಸುತ್ತಿದ್ದೇವೆ. ಆಕ್ಸಿಜನ್ ಶೇಖರಣೆಗೆ ಮುಂದಾಗಿದ್ದೇವೆ’ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು