ಹಾರೋಹಳ್ಳಿ:ನಮ್ಮ ಭೂಮಿಯಲ್ಲಿ ಕೋಟಿ ಕೋಟಿ ಜೀವರಾಶಿ ಬದುಕುತ್ತಿವೆ. ಭೂಮಿಯಲ್ಲಿ ಸ್ವಲ್ಪ ಏರುಪೇರಾದರೂ ಅಪಾರ ಜೀವರಾಶಿಗಳಿಗೆ ತೊಂದರೆಯಾಗುತ್ತದೆ. ಓಝೋನ್ ಪದರ ಭೂಮಿ ಮತ್ತು ಜೀವ ಸಂಕುಲದ ಉಳಿವಿಗೆ ರಕ್ಷಾಕವಚವಾಗಿದೆ ಎಂದು ಜಿಲ್ಲಾ ಪರಿಸರ ಅಧಿಕಾರಿ ಮಂಜುನಾಥ್ ಹೇಳಿದರು
ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಆಂಥಮ್ ಬಯೋಸೈನ್ಸ್ ಕಾರ್ಖಾನೆಯಲ್ಲಿ ಜಿಲ್ಲಾ ಪರಿಸರ ಇಲಾಖೆ ಮತ್ತು ಆಂಥಮ್ ಬಯೋಸೈನ್ಸ್ ಕಾರ್ಖಾನೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ವಿಶ್ವ ಓಝೋನ್ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಓಝೋನ್ ಪದರವನ್ನು ರಕ್ಷಿಸಲು ಗಮನಾರ್ಹವಾದ ಕೆಲಸಗಳು ನಡೆಯುತ್ತಿವೆ. ಈ ಪ್ರಯತ್ನ ಫಲವೇ ಇಂದು ಓಝೋನ್ ಸ್ನೇಹಿ ಫ್ರಿಡ್ಜ್, ಕೂಲರ್ ಮರುಕಟ್ಟೆಗೆ ಬಂದಿವೆ. ಓಝೋನ್ ಪದರದ ಸವಕಳಿಗೆ ಕಾರಣವಾಗುವ ವಸ್ತುಗಳ ಉತ್ಪಾದನೆಯನ್ನು ಕಡಿಮೆ ಮಾಡುವ ಮೂಲಕ ಓಝೋನ್ ಪದರವನ್ನು ರಕ್ಷಿಸುವುದು ಮಾಂಟ್ರಿಯಲ್ ಶಿಷ್ಟಾಚರದ ಉದ್ದೇಶವೂ ಕೂಡ ಆಗಿದೆ ಎಂದರು.
ತಾಯಿ ಹೆಸರಿನಲ್ಲಿ ಗಿಡ ನೆಡಿ; ಹಾಳಾಗಿರುವ ಓಝೋನ್ ಪದರವನ್ನು ಸರಿಪಡಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಎಲ್ಲರೂ ತಮ್ಮ ತಾಯಿಯ ಹೆಸರಿನಲ್ಲಿ ಒಂದು ಗಿಡವನ್ನು ನೆಟ್ಟು ಪೋಷಿಸುವ ಕೆಲಸ ಮಾಡಬೇಕು. ಫ್ಲೋರೋ ಕಾರ್ಬನ್‌ನಲ್ಲಿ ಇರುವ ಫ್ಲೋರಿನ ಅಂಶವನ್ನು ತಡೆಗಟ್ಟಬೇಕು. 2050ರವೇಳೆಗೆ ಓಝೋನ್ ಪದರವನ್ನು ಸಹಜ ಸ್ಥಿತಿಗೆ ತರಲು ಎಲ್ಲಾ ದೇಶಗಳು ಶಪಥ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಜಯ್ ಕೈವಾರ್, ಅಶೋಕ್, ಪ್ರಸಾದ್ ಶಾಂಡಿಲ್ಯಾ, ಸಜಿತ್ಸ ಹದೇವನ್, ರಾಘವೇಂದ್ರ, ಕಪಿನಿಗೌಡ, ಸುನೀಲ್ ಕೆ., ಮಹಿಮಾ, ಮಿಶ್ರಾ, ಶಂಕರ್ ಆರ್., ರಾಮಕೃಷ್ಣ ಸೇರಿದಂತೆ ಅನೇಕರು ಹಾಜರಿದ್ದರು.