ಶುಕ್ರವಾರ, ನವೆಂಬರ್ 22, 2019
24 °C

ಕಡಿಸಿಕೊಪ್ಪ: ಚಿರತೆ ದಾಳಿಗೆ ಕುರಿ, ಮೇಕೆ ಬಲಿ

Published:
Updated:
Prajavani

ಹಾರೋಹಳ್ಳಿ (ಕನಕಪುರ): ಇಲ್ಲಿನ ಹಾರೋಹಳ್ಳಿ ಹೋಬಳಿ ಕಡಿಸಿಕೊಪ್ಪ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ಕುರಿ ಮೇಕೆ ಕೋಳಿಗಳನ್ನು ಕೊಂದು ಹಾಕಿದ್ದರಿಂದ ಗ್ರಾಮದಲ್ಲಿ ಜನ ಭಯ ಭೀತಿಯಿಂದ ಬದುಕುವಂತಾಗಿದೆ.

ಗ್ರಾಮದ ಬಾಬುರಾವ್‌ ಎಂಬುವರಿಗೆ ಸೇರಿದ ಕುರಿ ಮೇಕೆಗಳಾಗಿವೆ. ರಾತ್ರಿ ಸುಮಾರು 2 ಗಂಟೆ ಸಮಯದಲ್ಲಿ ಮೇಕೆ ಮತ್ತು ಕೋಳಿಗಳು ಚೀರಾಡಿದ ಶಬ್ದವಾಗಿ ಎದ್ದು ಮನೆಯಿಂದ ಹೊರಗಡೆ ಬಂದು ನೋಡಿದಾಗ ಕೊಪ್ಪಲಿನಲ್ಲಿ ಕುರಿ ಮೇಕೆಗಳು ಸತ್ತಿರುವುದು ಗೊತ್ತಾಗಿದೆ ಎಂದು ಬಾಬುರಾವ್‌ ತಿಳಿಸಿದರು.

ಜಮುನಾಪುರ ತಳಿಯ ಜೋಡಿ ಮೇಕೆಗಳನ್ನು ₹ 35 ಸಾವಿರ ಕೊಟ್ಟು ಖರೀದಿ ಮಾಡಿಕೊಂಡು ತರಲಾಗಿತ್ತು. ಬೀಟೆಲ್‌ ತಳಿಯ ಟಗರನ್ನು ಸಾಕಿದ್ದು ಬಕ್ರೀದ್‌ ಹಬ್ಬದಲ್ಲಿ ಸುಮಾರು ₹ 30 ಸಾವಿರಕ್ಕೆ ಕೇಳಿದ್ದು ಕೊಟ್ಟಿರಲಿಲ್ಲ. ಚಿರತೆ ದಾಳಿಯಿಂದ ಸುಮಾರು ₹ 80 ಸಾವಿರದಷ್ಟು ನಷ್ಟವಾಗಿರುವುದಾಗಿ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಈ ಭಾಗದಲ್ಲಿ ಚಿರತೆ ಓಡಾಡುತ್ತಿರುವ ಬಗ್ಗೆ ಮಾಹಿತಿಯಿದ್ದು ಎರಡು ತಿಂಗಳ ಹಿಂದೆ ಹುಳುಗೊಂಡನಹಳ್ಳಿ, ನಾರಾಯಣಪುರ, ಹೊನ್ನಾಲಗನದೊಡ್ಡಿಯಲ್ಲಿ ದಾಳಿ ನಡೆಸಿ ಕುರಿ, ಮೇಕೆ, ಹಸುವಿನ ಕರುವನ್ನು ಕೊಂದಿತ್ತು. ಎರಡು ದಿನಗಳ ಹಿಂದ ಸೊಂಟೇನಹಳ್ಳಿಯಲ್ಲಿ ಹಸುವಿನ ಮೇಲೆ ದಾಳಿ ನಡೆಸಿದೆ.

ಅರಣ್ಯ ಇಲಾಖೆಯವರು ಚಿರತೆಯನ್ನು ಸೆರೆ ಹಿಡಿಯಲು ಹೊನ್ನಾಲಗನದೊಡ್ಡಿ ಬಳಿ ಬೋನು ಇಟ್ಟಿದ್ದಾರೆ. ಆದರೆ ಈವರೆಗೂ ಚಿರತೆ ಸೆರೆಯಾಗದೆ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ಕೊಂದು ಹಾಕುತ್ತಿದೆ ಎಂದು ಸಂತ್ರಸ್ತರಾದ ರೈತ ಬಾಬುರಾವ್‌ ತಿಳಿಸಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿ ದಿನೇಶ್‌ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಶು ವೈದ್ಯಾಧಿಕಾರಿ ಡಾ.ಗಿರೀಶ್‌ ಮರಣೋತ್ತರ ಪರೀಕ್ಷೆ ನಡೆಸಿದರು. 

ಪಂಚಾಯಿತಿ ಅಧ್ಯಕ್ಷ ಕೆ.ಎನ್‌.ಲಕ್ಷ್ಮಣ್‌, ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಎನ್‌.ರಾಮು, ಸಂತ್ರಸ್ತ ರೈತರ ಮನೆಗೆ ಭೇಟಿ ನೀಡಿದ್ದು ಬಾಬುರಾವ್‌ ಹೊಸದಾಗಿ ಕುರಿಮೇಕೆ ಸಾಕಬೇಕೆಂದು ಆಸಕ್ತಿಯಿಂದ ಸಾಕಿದ್ದರು. ಚಿರತೆ ದಾಳಿಯಿಂದ ಅವರ ಆಸೆ ಮಣ್ಣುಪಾಲಾಗಿದೆ. ಸರ್ಕಾರದಿಂದ ಸೂಕ್ತ ಪರಿಹಾರವನ್ನು ಕೊಡಿಸಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)