ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್ ಮಾಧ್ಯಮ: ಎಲ್ಲರಿಗೂ ಪ್ರವೇಶಕ್ಕೆ ಒತ್ತಾಯ

Last Updated 4 ಜೂನ್ 2019, 13:12 IST
ಅಕ್ಷರ ಗಾತ್ರ

ರಾಮನಗರ: ಇಂಗ್ಲಿಷ್ ಮಾಧ್ಯಮದ ಒಂದನೇ ತರಗತಿಗೆ ಅರ್ಜಿ ಸಲ್ಲಿಸಿದ ಎಲ್ಲ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಬೇಕೆಂದು ಒತ್ತಾಯಿಸಿ ಅವ್ವೇರಹಳ್ಳಿ ಸುತ್ತಮುತ್ತಲ ಗ್ರಾಮಗಳ ಮಕ್ಕಳ ಪೋಷಕರು ಅವ್ವೇರಹಳ್ಳಿ ಶಾಲಾ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಅವ್ವೇರಹಳ್ಳಿ ಶಾಲೆಯಲ್ಲಿ ಇಂಗ್ಲಿಷ್‌ ಮಾಧ್ಯಮಕ್ಕೆ 40 ಕ್ಕೂ ಹೆಚ್ಚು ಮಕ್ಕಳು ಪ್ರವೇಶ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಶಾಲೆಯ ಮುಖ್ಯಶಿಕ್ಷಕರು ಸರ್ಕಾರದ ನಿಯಮದ ಪ್ರಕಾರ 30 ಮಕ್ಕಳನ್ನು ಮಾತ್ರ ದಾಖಲಾತಿ ಮಾಡಿಕೊಳ್ಳಿ ಎಂದು ಆದೇಶ ನೀಡಿದ್ದಾರೆ. ಲಾಟರಿ ಡ್ರಾ ಮೂಲಕ 30 ಮಕ್ಕಳಿಗೆ ಸೀಮಿತಗೊಳಿಸಿ ದಾಖಲಾತಿ ನಡೆಸಲಾಗುತ್ತದೆ ಎಂದು ಮಕ್ಕಳ ಪೋಷಕರಿಗೆ ತಿಳಿಸಿದ್ದರಿಂದ ಪೋಷಕರು ಮುಖ್ಯಶಿಕ್ಷಕರ ವಿರುದ್ಧ ಹರಿಹಾಯ್ದರು. ಲಾಟರಿ ಡ್ರಾ ಮೂಲಕ ಮಕ್ಕಳ ದಾಖಲಾತಿ ಬೇಡ. ಈಗಾಗಲೇ ನಾವು ಶಾಲೆಯಲ್ಲಿ ಪ್ರವೇಶ ಸಿಗುತ್ತದೆ ಎಂದು ಬೇರೆ ಶಾಲೆಗೆ ಸೇರಿಸಿಲ್ಲ ಎಂದು ತಿಳಿಸಿದರು.

15 ದಿನಗಳ ಹಿಂದೆಯೇ ಅರ್ಜಿ ಸಲ್ಲಿಸಿ ಪ್ರವೇಶ ಸಿಗುತ್ತದೆ ಎಂದು ಕನಸು ಕಂಡಿದ್ದ ನಮಗೆ ಈಗ ಸರ್ಕಾರದ ಆದೇಶ ಎಂದು ಮಕ್ಕಳ ದಾಖಲಾತಿಗೆ ಕುಂಟು ನೆಪಹೇಳಲು ಹೊರಟಿದ್ದೀರಿ, ಅರ್ಜಿ ಸಲ್ಲಿಸಿರುವ ಎಲ್ಲಾ ಮಕ್ಕಳಿಗೂ ಶಾಲೆಯಲ್ಲಿ ಪ್ರವೇಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಪೋಷಕ ಶಾಂತಕುಮಾರ್ ಮಾತನಾಡಿ, ಸರ್ಕಾರ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತೆರೆದು ಒಳ್ಳೆಯ ಕೆಲಸ ಮಾಡಿತು. ಇದರಿಂದ ಗ್ರಾಮೀಣ ಪ್ರದೇಶದ ಜನರಿಗೆ ನೆರವಾಗುತ್ತದೆ ಎಂದು ಸಂತೋಷಗೊಂಡಿದ್ದೇವು. ಆದರೆ ಶಾಲೆಯಲ್ಲಿ ಇಂತಿಷ್ಟೇ ಸೀಟು ಎಂಬ ಆದೇಶ ನೀಡಿ ನಮ್ಮ ಆಸೆಗೆ ತಣ್ಣೀರೆರೆಚುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೂಡಲೇ ಹೆಚ್ಚಿನ ಮಕ್ಕಳಿಗೂ ಅವಕಾಶ ನೀಡಬೇಕು. ಇದರಿಂದ ಮುಚ್ಚುತ್ತಿರುವ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯ. ಲಾಟರಿ ಮೂಲಕ ಮಕ್ಕಳ ಆಯ್ಕೆ ಮಾಡಿಕೊಂಡರೆ ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಶಿಕ್ಷಣ ಇಲಾಖೆ ಅರ್ಜಿ ಸಲ್ಲಿಸಿರುವ ಎಲ್ಲಾ ಮಕ್ಕಳಿಗೂ ದಾಖಲಾತಿ ನೀಡಬೇಕು ಇಲ್ಲದಿದ್ದರೆ ಜಿಲ್ಲಾ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಉಪಪ್ರಾಚಾರ್ಯ ಲಕ್ಷ್ಮಣನಾಯ್ಕ ಮಾತನಾಡಿ ಪ್ರವೇಶಕ್ಕಾಗಿ 40 ಅರ್ಜಿಗಳು ಬಂದಿವೆ. ಆದರೆ ಸರ್ಕಾರ 30 ಮಕ್ಕಳಿಗಷ್ಟೇ ದಾಖಲಾತಿಗೆ ಅನುಮತಿ ನೀಡಿದೆ. ಲಾಟರಿ ಮೂಲಕ ಮಕ್ಕಳ ದಾಖಲಾತಿಗೆ ಮಕ್ಕಳ ಪೋಷಕರು ಒಪ್ಪುತ್ತಿಲ್ಲ. ಇಲ್ಲಿನ ಸಮಸ್ಯೆಯನ್ನು ಈಗಾಗಲೇ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರ ಆದೇಶದಂತೆ ನಡೆಯಲಾಗುತ್ತದೆ ಎಂದು ತಿಳಿಸಿದರು.

ಪೋಷಕರಾದ ಸಿದ್ದೇಗೌಡ, ಶಿವಪ್ಪ, ರಂಜಿತಾ, ಮುಮ್ತಾಜ್, ಮಂಜುನಾಥ್, ಶಾಂತರಾಜು, ದೇವೇಗೌಡ, ಗುರುಪ್ರಸಾದ್, ಹೊನ್ನೇಗೌಡ, ರಾಜು, ಶಿವರುದ್ರಯ್ಯ, ವಿಜಯಕುಮಾರ್, ಲೋಕೇಶ್ ಇದ್ದರು.

ಸೀಟು ಮಿತಿ: ಅಧಿಕಾರಿಗಳ ಪೀಕಲಾಟ

ಜಿಲ್ಲೆಯಲ್ಲಿ ಈ ವರ್ಷ ಸರ್ಕಾರ 24 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸುತ್ತಿದೆ. ಎಲ್ಲ ಶಾಲೆಗಳಲ್ಲೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ.

ಸರ್ಕಾರ ಒಂದು ಶಾಲೆಯಲ್ಲಿ 30 ವಿದ್ಯಾರ್ಥಿಗಳಿಗೆ ಪ್ರವೇಶ ಮಿತಿ ಹೇರಿದ್ದು, ಲಾಟರಿ ಮೂಲಕ ಆಯ್ಕೆ ಮಾಡುವಂತೆ ತಿಳಿಸಿದೆ. ಆದರೆ ಇದಕ್ಕೆ ಪೋಷಕರು ಒಪ್ಪುತ್ತಿಲ್ಲ. ಸರ್ಕಾರಿ ಶಾಲೆಯಾದ್ದರಿಂದ ಯಾವ ಮಗುವಿಗೂ ಪ್ರವೇಶ ನಿರಾಕರಿಸುವಂತೆಯೂ ಇಲ್ಲ. ಹೀಗಾಗಿ ಸರ್ಕಾರದ ಮುಂದಿನ ಆದೇಶಕ್ಕಾಗಿ ಅಧಿಕಾರಿಗಳು ಎದುರು ನೋಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT