ಭಾನುವಾರ, ಸೆಪ್ಟೆಂಬರ್ 22, 2019
22 °C
ನಾಳೆ ಜಿಲ್ಲೆಯ ಏಳು ದೇಗುಲಗಳಲ್ಲಿ ಪರ್ಜನ್ಯ ಹೋಮ

ಮಳೆಗಾಗಿ ಹೋಮ: ಸಿಗುತ್ತಿಲ್ಲ ಪುರೋಹಿತರು, ಮುಂದುವರಿದ ಹುಡುಕಾಟ!

Published:
Updated:

ರಾಮನಗರ: ಮಳೆಗೆ ಪ್ರಾರ್ಥಿಸಿ ರಾಜ್ಯ ಸರ್ಕಾರವು ಇದೇ 6ರಂದು ಎಲ್ಲ ರಾಜ್ಯದ ದೇಗುಲಗಳಲ್ಲಿ ಪರ್ಜನ್ಯ ಹೋಮಕ್ಕೆ ಆದೇಶಿಸಿದೆ. ಜಿಲ್ಲೆಯ ಏಳು ದೇಗುಲಗಳಲ್ಲಿ ಈ ಹೋಮ ಕಾರ್ಯ ನಡೆಯಲಿದ್ದು, ಇದಕ್ಕಾಗಿ ಮುಜರಾಯಿ ಇಲಾಖೆಯು ಪುರೋಹಿತರಿಗೆ ಹುಡುಕಾಟ ನಡೆಸಿದೆ.

ಸರ್ಕಾರವು ಪ್ರತಿ ಕಾರ್ಯಕ್ರಮಕ್ಕೆ ₹10 ಸಾವಿರ ಬಳಕೆಗೆ ಅನುಮತಿ ನೀಡಿದೆ. ಆದರೆ ಈ ಖರ್ಚಿನಲ್ಲಿ ಹೋಮ ನಡೆಸುವುದು ಕಷ್ಟವಾಗಿದೆ. ಪೌರೋಹಿತ್ಯ ಮಾಡುವವರಿಗೆ ಸಂಭಾವನೆ, ಸಾಮಗ್ರಿಗಳ ಖರ್ಚು ಎಲ್ಲವೂ ಹೆಚ್ಚಾಗಲಿದೆ. ಹೀಗಾಗಿ ಇಲಾಖೆಯು ಜಿಲ್ಲೆಯಲ್ಲಿ ಆದಾಯ ಹೆಚ್ಚಿರುವ ದೇಗುಲಗಳಲ್ಲಿ ಮಾತ್ರ ಈ ಹೋಮ ಮಾಡಲು ಸಿದ್ಧತೆ ನಡೆದಿದೆ.

ಜಿಲ್ಲೆಯಲ್ಲಿ ಹೋಮ ನಡೆಸಲು ಬೇಕಾದ ಪುರೋಹಿತರೇ ಸಿಗುತ್ತಿಲ್ಲ. ಅವರಿಗಾಗಿ ನೆರೆಹೊರೆಯ ಜಿಲ್ಲೆಗಳಲ್ಲಿ ಹುಡುಕಾಟ ನಡೆಸಿದೆ. ರಾಜ್ಯ ಸರ್ಕಾರವು ಎಲ್ಲ ದೇಗುಲಗಳಲ್ಲಿ ಜಪ–ತಪಕ್ಕೆ ಆದೇಶಿಸಿದ್ದರೂ ಅನುದಾನ ಮತ್ತು ಆಗಮಿಕರ ಕೊರತೆಯಿಂದಾಗಿ ಸೀಮಿತ ದೇಗುಲಗಳಲ್ಲಿ ಮಾತ್ರವೇ ಈ ಕಾರ್ಯಕ್ರಮ ನಡೆಯಲಿದೆ.

ಎಲ್ಲೆಲ್ಲಿ?: ರಾಮನಗರ ತಾಲ್ಲೂಕಿನ ಅವ್ವೇರಹಳ್ಳಿಯ ರೇವಣಸಿದ್ದೇಶ್ವರ ದೇಗುಲ ಕನಕಪುರದ ಕಬ್ಬಾಳು, ಕಲ್ಲಹಳ್ಳಿಯ ವೆಂಕರಮಣ ದೇವಾಲಯ, ಚನ್ನಪಟ್ಟಣದ ಕೆಂಗಲ್ ಆಂಜನೇಯ ಸ್ವಾಮಿ, ಅಪ್ರಮೇಯ ಸ್ವಾಮಿ, ಮಾಗಡಿಯ ರಂಗನಾಥಸ್ವಾಮಿ ದೇವಾಲಯ, ಸಾವನದುರ್ಗ ದೇವಾಲಯಗಳಲ್ಲಿ ಮಾತ್ರವೇ ಈ ಹೋಮ ನಡೆಯುವ ಸಾಧ್ಯತೆ ಇದೆ. ಬುಧವಾರ ಈ ಬಗ್ಗೆ ಅಂತಿಮ ತೀರ್ಮಾನ ಹೊರಬೀಳಲಿದೆ.

***

ಹೋಮಕ್ಕೆ ಪುರೋಹಿತರನ್ನು ಹುಡುಕುವುದೇ ಸಮಸ್ಯೆಯಾಗಿದೆ. ಹೀಗಾಗಿ ಏಳು ದೇಗುಲಗಳಲ್ಲಿ ಮಾತ್ರ ಕಾರ್ಯಕ್ರಮ ನಡೆಯಲಿದೆ.

–ಲಕ್ಷ್ಮೀನಾರಾಯಣ, ತಹಶೀಲ್ದಾರ್, ಮುಜರಾಯಿ ಇಲಾಖೆ

Post Comments (+)