ಶನಿವಾರ, ಆಗಸ್ಟ್ 24, 2019
23 °C
₹78 ಲಕ್ಷ ಅನುದಾನ ಬಾಕಿ

ಮೂರು ವರ್ಷದಿಂದ ಬಾರದ ಸಹಾಯಧನ | ಅಂತ್ಯಸಂಸ್ಕಾರ ಪರಿಹಾರಕ್ಕಾಗಿ ಅಲೆದಾಟ

Published:
Updated:

ರಾಮನಗರ: ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವ ಕುಟುಂಬದ ಸದಸ್ಯರು ಮೃತ ಪಟ್ಟಲ್ಲಿ ಅವರ ಅಂತಿಮ ಕ್ರಿಯೆಗಾಗಿ ರಾಜ್ಯ ಸರ್ಕಾರ ನೆರವು ನೀಡುವ ಅಂತ್ಯ ಸಂಸ್ಕಾರ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸಿದವರು ಪ್ರತಿ ದಿನ ಇಲ್ಲಿನ ತಾಲ್ಲೂಕು ಕಚೇರಿಗೆ ಅಲೆಯುತ್ತಿದ್ದಾರೆ.

ಸರ್ಕಾರ ಬಡವರಿಗಾಗಿ ರೂಪಿಸಿದ ನಾನಾ ಯೋಜನೆಗಳಲ್ಲಿ ಅಂತ್ಯ ಸಂಸ್ಕಾರ ಪರಿಹಾರವೂ ಒಂದಾಗಿದೆ. ಆರ್ಥಿಕವಾಗಿ ದುರ್ಬಲರಾದ ಕುಟುಂಬಗಳಲ್ಲಿ ಯಾರಾದರೂ ತೀರಿ ಹೋದರೆ ಶವ ಸಂಸ್ಕಾರ ವೆಚ್ಚಕ್ಕಾಗಿ ನೀಡಬಹುದಾದ ಯೋಜನೆ ಇದಾಗಿದೆ. ರಾಜ್ಯ ಸರ್ಕಾರ 2015-–16ನೇ ಸಾಲಿನ ಬಜೆಟ್ ನಲ್ಲಿ ಶವ ಸಂಸ್ಕಾರಕ್ಕೆ ನೀಡುತ್ತಿದ್ದ ₹ 1 ಸಾವಿರದಿಂದ ₹ 5 ಸಾವಿರಕ್ಕೆ ಹೆಚ್ಚಿಸಿತ್ತು. ಈ ನೆರವನ್ನು ಜೀವಂತ ವಾರಸುದಾರರಿಗೆ ಅಥವಾ ಕುಟುಂಬದ ಅವಲಂಬಿತ ಸದಸ್ಯರಿಗೆ ಅಥವಾ ಅವರ ಅಂತ್ಯ ಕ್ರಿಯೆ ನೆರವೇರಿಸುವ ಜವಾಬ್ದಾರಿ ಇರುವ ಸದಸ್ಯರಿಗೆ ಅಂತ್ಯ ಕ್ರಿಯೆ ನೆರವೇರಿಸುತ್ತಾರೆಂದು ಖಚಿತಪಡಿಸಿಕೊಂಡು ತಹಶೀಲ್ದಾರ್‌ ಹಣ ಬಿಡುಗಡೆ ಮಾಡುತ್ತಾರೆ. ಆದರೆ ಈಗ ಸಹಾಯ ಧನವೇ ಬಿಡುಗಡೆಯಾಗದ ಕಾರಣ ತಹಸೀಲ್ದಾರರು ಕೈಚೆಲ್ಲಿ ಕುಳಿತಿದ್ದಾರೆ.

ಮೂರು ವರ್ಷದಿಂದ ಸಹಾಯಧನ ಬಂದಿಲ್ಲ : 2015ರ ಏಪ್ರಿಲ್ 1 ರ ನಂತರ ಮರಣವಾದ ಪ್ರಕರಣಗಳಿಗೆ ₹ 5 ಸಾವಿರ ಸಹಾಯಧನ ಹೆಚ್ಚಿಸಿ ಸರ್ಕಾರ ಅದೇ ವರ್ಷದ ಆಗಸ್ಟ್ 14 ರಂದು ಆದೇಶ ಹೊರಡಿಸಿತು. ಪ್ರತಿ ತ್ರೈಮಾಸಿಕ ಅವಧಿಗೆ ಒಂದು ಕಂತಿನಂತೆ ಅನುದಾನ ನಿಗದಿಪಡಿಸಿ ಎಲ್ಲ ಜಿಲ್ಲೆಯ ಮೂಲಕ ಆಯಾಯ ತಾಲ್ಲೂಕುಗಳಿಗೆ ಬಿಡುಗಡೆ ಗೊಳಿಸುವುದಾಗಿ ಹೇಳಿತ್ತು. ಆ ವರ್ಷದ ಜೂನ್ ಅಂತ್ಯದವರೆಗೆ ಕೇವಲ 2 ಕಂತಿನಡಿ ಅನುದಾನ ಬಿಡುಗಡೆಗೊಳಿಸಿತ್ತು. 2016ರ ಜುಲೈವರೆಗೆ 320 ಮಂದಿಗೆ ಸಹಾಯಧನ ನೀಡಲಾಗಿದೆ.

2016–-17 ರಿಂದ 2018-–19ರವರೆಗೆ ಒಟ್ಟು 1746 ಅರ್ಜಿಗಳು ಅಂತ್ಯ ಸಂಸ್ಕಾರ ಪರಿಹಾರ ನಿಧಿಗಾಗಿ ಸಲ್ಲಿಕೆಯಾಗಿದ್ದು, ಇವುಗಳಲ್ಲಿ 176 ಅರ್ಜಿಗಳು ತಿರಸ್ಕೃತಗೊಂಡು, 1570 ಅರ್ಜಿಗಳು ಬಾಕಿ ಉಳಿದಿವೆ. ಇಲ್ಲಿಯವರೆಗೂ ಬಾಕಿ ಅನುದಾನವನ್ನು ಬಿಡುಗಡೆಗೊಳಿಸಿಲ್ಲ. ಹೀಗಾಗಿ ಸಾವಿರಾರು ಅರ್ಜಿದಾರರು ಸಹಾಯಧನಕ್ಕಾಗಿ ತಹಶೀಲ್ದಾರ್‌ ಕಚೇರಿ ಮತ್ತು ಕಂದಾಯ ಅಧಿಕಾರಿಗಳ ಕಚೇರಿಗೆ ಅಲೆದಾಡುತ್ತಿದ್ದಾರೆ. ಫಲಾನುಭವಿಗಳಿಗೆ ಉತ್ತರ ಹೇಳಲು ಅಧಿಕಾರಿಗಳು ಹರಸಾಹಸಪಡುವಂತಾಗಿದೆ.

ಅಂತ್ಯ ಸಂಸ್ಕಾರ ಸಹಾಯ ನಿಧಿ ಯೋಜನೆಯಡಿ ಬಿಪಿಎಲ್ ಕುಟುಂಬಕ್ಕೆ ಸೇರಿದ ಪರಿಶಿಷ್ಟ ಜಾತಿ, ಪಂಗಡ, ಇತರೇ ವರ್ಗದ ಜನರಿಗೆ ಸಹಾಧನ ನೀಡಲಾಗುತ್ತದೆ. ಮೃತಪಟ್ಟ ತಕ್ಷಣ ಆತನ ಕುಟುಂಬದ ಸದಸ್ಯರು ಅಥವಾ ಸಂಬಂಧಿಕರು ತಾಲ್ಲೂಕು ಕಚೇರಿಗೆ ಅರ್ಜಿ ಸಲ್ಲಿಸಬೇಕಿದೆ. ಬಳಿಕ ಮರಣ ಪ್ರಮಾಣ ಪತ್ರ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಒಂದು ತಿಂಗಳ ಒಳಗೆ ಸಹಾಯಧನ ನೀಡಬೇಕು ಎಂದು ಸರ್ಕಾರದ ಮಾರ್ಗಸೂಚಿಯಲ್ಲಿಯೇ ಸ್ಪಷ್ಟಪಡಿಸಲಾಗಿದೆ.

ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೇ ವರ್ಗಕ್ಕೆ ಸೇರಿದ ನೂರಾರು ಕುಟುಂಬದ ಫಲಾನುಭವಿಗಳು ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿದಾರರಿಗೆ ವಿತರಿಸಲು ಒಟ್ಟು ₹ 78 ಲಕ್ಷ ಅನುದಾನ ಬೇಕಿದ್ದು, ಇನ್ನೂ ಬಿಡುಗಡೆಯಾಗಿಲ್ಲ. ಹೀಗಾಗಿ ಬಡ ಕುಟುಂಬಗಳು ಅಂತ್ಯ ಸಂಸ್ಕಾರದ ಸಹಾಯಧನಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿವೆ.

‘ಅಂತ್ಯ ಸಂಸ್ಕಾರ ಪರಿಹಾರ ನಿಧಿ ₹ 1 ಸಾವಿರ ಇದ್ದಾಗ ಇಷ್ಟೊಂದು ಬೇಡಿಕೆ ಇರಲಿಲ್ಲ. ಸರ್ಕಾರ ₹ 5 ಸಾವಿರಕ್ಕೆ ಹೆಚ್ಚಿಸಿದ್ದರಿಂದ ಬೇಡಿಕೆಗಳ ಅರ್ಜಿ ಹೆಚ್ಚಾಗಿದೆ. ಇವುಗಳ ಭರಾಟೆಯಲ್ಲಿ ನೈಜ ಫಲಾನುಭವಿಗಳಿಗೆ ಪರಿಹಾರ ದೊರೆಯದಂತಾಗಿದೆ’ ಎಂದು ಹೆಸರು ಹೇಳಲು ಬಯಸದ ಅಧಿಕಾರಿ ತಿಳಿಸಿದರು.

ರಾಮನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಅಂತ್ಯ ಸಂಸ್ಕಾರ ನಿಧಿಯೋಜನೆಯಡಿ ಹೆಚ್ಚಿನ ಪ್ರಮಾಣದ ಅರ್ಜಿಗಳು ಮಂಜೂರಾಗಿದ್ದು ,ಅನುದಾನ ಕೊರತೆಯಿಂದಾಗಿ ಸದರಿ ಅರ್ಜಿಗಳ ವಿಲೇವಾರಿ ವಿಳಂಬವಾಗಿದೆ. 2018ರ ಡಿಸೆಂಬರ್ ವರೆಗೆ ಮಂಜೂರಾಗಿರುವ 1082 ಅರ್ಜಿಗಳನ್ನು ವಿಲೇವಾರಿ ಮಾಡಲು ಅವಶ್ಯವಿರುವ ₹ 54.10 ಲಕ್ಷ ಹಣವನ್ನು ತುರ್ತಾಗಿ ಬಿಡುಗಡೆ ಮಾಡುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅನುದಾನ ಬಿಡುಗಡೆಯಾದಲ್ಲಿ ಆದ್ಯತಾನುಸಾರ ವಿತರಣೆ ಮಾಲಾಗುತ್ತದೆ ಎಂದು ತಿಳಿಸಿದರು.

ತಿಥಿಗೂ ಬರಲಿಲ್ಲ, ಪುಣ್ಯ ಸ್ಮರಣೆಗೂ ಸಿಗಲಿಲ್ಲ

ಈ ಸಹಾಯಧನ ಮನೆಯವರಿಗೆ ಸತ್ತವರ ದಿನಕರ್ಮ(ತಿಥಿ) ಮಾಡಲೂ ಬರಲಿಲ್ಲ. ಕೊನೆ ಪಕ್ಷ ಪ್ರಥಮ ಹಾಗೂ ದ್ವಿತೀಯ ಪುಣ್ಯ ಸ್ಮರಣೆಗಾದರೂ ಅವರಿಗೆ ದೊರೆಯಬೇಕಾದ ಪರಿಹಾರ ಸಿಕ್ಕಿಲ್ಲ. ಇನ್ನು ಪರಿಹಾರಕ್ಕಾಗಿ ಅಲೆದಾಡಿದವರಲ್ಲಿ ಕೆಲವರು ಸಹ ಅಂತ್ಯ ಕಂಡಿದ್ದಾರೆ. ಆದರೂ ಅವರ ಕುಟುಂಬಕ್ಕೆ ದೊರೆಯಬೇಕಾದ ಅಂತ್ಯ(ಶವ) ಸಂಸ್ಕಾರ ಪರಿಹಾರ ನಿಧಿ ಮಾತ್ರ ದೊರೆತಿಲ್ಲ.

ರಾಮನಗರ ತಾಲ್ಲೂಕಿನಲ್ಲಿ ಅಂತ್ಯ ಸಂಸ್ಕಾರ ಪರಿಹಾರ ನಿಧಿಗಾಗಿ ಸಲ್ಲಿಕೆಯಾದ ಅರ್ಜಿಗಳ ವಿವರ

ವರ್ಷ; ಸಲ್ಲಿಕೆಯಾದ ಅರ್ಜಿ; ವಜಾಗೊಂಡ ಅರ್ಜಿ; ಮಂಜೂರಾದ ಅರ್ಜಿ
2016--–17; 558; 77; 481
2017-–18; 632; 60; 572
2018-–19: 556; 39; 517
ಒಟ್ಟು; 1746; ; 176; 1570

Post Comments (+)