ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಭೂಜಲ ಮಾಹಿತಿಗೆ ಸೂಚನೆ

ಜಿಲ್ಲೆಯ 49 ಗ್ರಾ.ಪಂ.ಗಳಲ್ಲಿ ಯೋಜನೆ ಅನುಷ್ಠಾನ
Last Updated 18 ಏಪ್ರಿಲ್ 2021, 3:46 IST
ಅಕ್ಷರ ಗಾತ್ರ

ರಾಮನಗರ: ಅಂತರ್ಜಲ ಮರುಪೂರಣಗೊಳಿಸಲು ಕೇಂದ್ರದಿಂದ ಜಾರಿಗೊಳಿಸಿರುವ ಅಟಲ್ ಭೂಜಲ ಯೋಜನೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಉಮೇಶ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಯೋಜನೆಯು ಶೇ 100ರಷ್ಟು ಕೇಂದ್ರ ಪುರಸ್ಕೃತ ಯೋಜನೆಯಾಗಿದೆ. ಯೋಜನೆಯು ಅಂತರ್ಜಲ ಶೋಷಿತ ಕ್ಷೇತ್ರ, ತಾಲ್ಲೂಕುಗಳಲ್ಲಿ ಕೇಂದ್ರೀಕೃತಗೊಂಡಿದೆ. ಕರ್ನಾಟಕ ರಾಜ್ಯದ 14 ಜಿಲ್ಲೆಗಳ 41 ತಾಲ್ಲೂಕುಗಳ 1,199 ಗ್ರಾಮ ಪಂಚಾಯಿತಿಗಳು ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಈ ಯೋಜನೆಯನ್ನು ಪ್ರಾಥಮಿಕ ಹಂತದಲ್ಲಿ ಕರ್ನಾಟಕ ರಾಜ್ಯದ 1,199 ನೀರಿನ ಶೋಷಿತ ಗ್ರಾಮ ಪಂಚಾಯಿತಿಗಳಲ್ಲಿ ₹ 1,201.52 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದರು.

ಜಿಲ್ಲೆಯ ರಾಮನಗರ ಹಾಗೂ ಕನಕಪುರ ತಾಲ್ಲೂಕುಗಳನ್ನು ಯೋಜನೆಯಲ್ಲಿ ಪರಿಗಣಿಸಲಾಗಿದ್ದು, ಒಟ್ಟು 49 ಗ್ರಾಮ ಪಂಚಾಯಿತಿಗಳು ಈ ಯೋಜನೆಯಲ್ಲಿ ಪರಿಗಣಿಸಲಾಗಿರುತ್ತದೆ. ಇದರ ಪಾಲುದಾರ ಇಲಾಖೆಗಳಾದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್‌ಡಿಪಿಆರ್), ಕೃಷಿ ಮತ್ತು ಜಲಾನಯನ ಅಭಿವೃದ್ಧಿ, ಕೇಂದ್ರ ಅಂತರ್ಜಲ ಮಂಡಳಿ, ತೋಟಗಾರಿಕೆ, ರೇಷ್ಮೆ, ಇಂಧನ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಗಳಿಂದ ಬೇಸ್‌ಲೈನ್ ಡೇಟಾವನ್ನು ಕ್ರೋಢೀಕರಿಸಿ ಪಡೆಯಬೇಕಿರುತ್ತದೆ ಎಂದರು.

ಪ್ರಥಮ ಹಂತದಲ್ಲಿ ರಾಮನಗರ ತಾಲ್ಲೂಕಿನ ಸುಗ್ಗನಹಳ್ಳಿ, ಮಾಯಗಾನಹಳ್ಳಿ, ಹರೀಸಂದ್ರ ಹಾಗೂ ಕನಕಪುರ ತಾಲ್ಲೂಕಿನ ತುಂಗಣಿ, ಹಳ್ಳಿಮಾರನಹಳ್ಳಿ ಹಾಗೂ ಕಲ್ಲಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಪರಿಗಣಿಸಲು ಉದ್ದೇಶಿಸಲಾಗಿದೆ. ನಂತರ ಎಲ್ಲಾ 49 ಗ್ರಾಮ ಪಂಚಾಯಿತಿಗಳಿಗೂ ವಿಸ್ತರಿಸಲು ಯೋಜಿಸಲಾಗಿರುತ್ತದೆ.

ಭೂವಿಜ್ಞಾನಿ ರಾಜಶ್ರೀ, ಅಟಲ್ ಭೂ ಯೋಜನೆಯ ನೋಡಲ್ ಅಧಿಕಾರಿ ರವಿ, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ವೆಂಕಟೇಗೌಡ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ದೊರೆಸ್ವಾಮಿ, ಸ್ಟೆಪ್ಸ್ ಸ್ವಯಂಸೇವಾ ಸಂಸ್ಥೆಯ ನಾರಾಯಣ್, ಎಚ್.ಕೆ.ಸಿ.ಎಲ್ ಸಂಸ್ಥೆಯ ಮನೋಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT