ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರಕ್ಕೆ ಸಿಗುವುದೇ ‘ಬೆಂಗಳೂರು’ ಸ್ಪರ್ಶ

ಜಿಲ್ಲಾ ರಾಜಕೀಯ: ಹೊಸ ಚರ್ಚೆ ಹುಟ್ಟು ಹಾಕಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ; ಗರಿಗೆದರಿದ ಪರ–ವಿರೋಧದ ಚರ್ಚೆ
Published 26 ಅಕ್ಟೋಬರ್ 2023, 7:20 IST
Last Updated 26 ಅಕ್ಟೋಬರ್ 2023, 7:20 IST
ಅಕ್ಷರ ಗಾತ್ರ

ರಾಮನಗರ: ಸರಿಯಾಗಿ ಹದಿನಾರು ವರ್ಷಗಳ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಕವಲೊಡೆದು ರಾಮನಗರ ಜಿಲ್ಲೆ ಅಸ್ತಿತ್ವಕ್ಕೆ ಬಂತು. ಈ ಅವಧಿಯಲ್ಲಿ ಹಲವು ರಾಜಕೀಯ ಏಳುಬೀಳುಗಳನ್ನು ಕಂಡಿರುವ ಜಿಲ್ಲೆ, ಮತ್ತೆ ಬೆಂಗಳೂರಿನ ಭಾಗವಾಗಲಿದೆಯೇ ಅಥವಾ ಮರು ನಾಮಕರಣಗೊಳ್ಳಲಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

‘ನಾವು ರಾಮನಗರದವರಲ್ಲ, ಬೆಂಗಳೂರಿಗೆ ಸೇರಿದವರು. ಬೆಂಗಳೂರು ಗ್ರಾಮಾಂತರದವರೂ ಅಲ್ಲ’ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾತು ಇಂತಹದ್ದೊಂದು ಹೊಸ ಚರ್ಚೆಯನ್ನು ಜಿಲ್ಲೆಯಲ್ಲಿ ಹುಟ್ಟು ಹಾಕಿದೆ. ರಾಜಕೀಯ ಮತ್ತು ಅಭಿವೃದ್ಧಿಯ ಅನುಕೂಲ–ಅನನುಕೂಲಗಳ ಆಯಾಮಗಳಲ್ಲಿ ಈ ವಿಷಯದ ಕುರಿತು ಪರ–ವಿರೋಧದ ಚರ್ಚೆಗಳು ನಡೆಯುತ್ತಿವೆ.

2007ರಲ್ಲಿ ಜೆಡಿಎಸ್–ಬಿಜೆಪಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಅವರು, ರಾಜಧಾನಿಯಿಂದ 49 ಕಿ.ಮೀ. ದೂರದಲ್ಲಿರುವ ರಾಮನಗರವನ್ನು ಜಿಲ್ಲೆಯಾಗಿ ಘೋಷಿಸಿದರು. ಬೆಂಗಳೂರಿನ ಕೊಂಡಿ ಕಳಚಿಕೊಂಡು ತಾವು ಪ್ರತಿನಿಧಿಸುವ ಕ್ಷೇತ್ರ ಕನಕಪುರ ಸೇರಿದಂತೆ, ನಾಲ್ಕು ವಿಧಾನಸಭಾ ಕ್ಷೇತ್ರಗಳು ಹೊಸ ಜಿಲ್ಲೆ ರಾಮನಗರದಡಿ ಬರುವ ನಿರ್ಧಾರಕ್ಕೆ, ಆಗ ಶಾಸಕರಾಗಿದ್ದ ಡಿ.ಕೆ. ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದರು.

ಬೆಂಗಳೂರು ದಕ್ಷಿಣವಾಗಲಿದೆಯೆ?: ಜಿಲ್ಲೆ ರಚನೆಯಾದಾಗಿನಿಂದಲೂ ಶಿವಕುಮಾರ್ ಅವರ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ವಿಷಯದ ಪ್ರಸ್ತಾವಾದಾಗಲೆಲ್ಲಾ, ಅವರು ತಮ್ಮ ನಿಲುವನ್ನು ಪುನರುಚ್ಚರಿಸುತ್ತಲೇ ಬಂದಿದ್ದಾರೆ. ಹಿಂದೊಮ್ಮೆ ಕನಕಪುರದ ಕನಕೋತ್ಸವದಲ್ಲಿ ಸಹ ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಹೆಸರಿಡಬೇಕಿತ್ತು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ರಾಜಧಾನಿಗೆ ಹೊಂದಿಕೊಂಡಿರುವ ಜಿಲ್ಲೆಗೆ, ಬೆಂಗಳೂರು ಹೆಸರನ್ನು ಜೋಡಿಸಿಯೇ ಜಿಲ್ಲಾ ಕೇಂದ್ರವಾಗಿ ಮಾಡುವ ಇರಾದೆ ಈಗಲೂ ಶಿವಕುಮಾರ್ ಅವರಿಗಿದೆ. ಇದೀಗ ರಾಜ್ಯದ ಉಪ ಮುಖ್ಯಮಂತ್ರಿಯಾಗಿರುವ ಅವರು, ರಾಜ್ಯ ರಾಜಕಾರಣದ ಶಕ್ತಿಯೂ ಆಗಿದ್ದಾರೆ. ಈಗ ಅವರಾಡಿರುವ ಮಾತು ಜಿಲ್ಲೆ ಕುರಿತ ತಮ್ಮ ನಿಲುವಿಗೊಂದು ರೂಪ ಕೊಡುವುದಕ್ಕೆ ಪೀಠಿಕೆ ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿವೆ. ಅವರ ಆಲೋಚನೆ ಕೇವಲ ಕನಕಪುರಕ್ಕೆ ಸೀಮಿತವಾಗುತ್ತದೆಯೋ ಅಥವಾ ಇಡೀ ರಾಮನಗರ ಜಿಲ್ಲೆಯನ್ನು ಒಳಗೊಳ್ಳುತ್ತದೆಯೋ ಎಂಬುದರ ಬಗ್ಗೆ ಕಾದು ನೋಡಬೇಕಿದೆ.

ಅಸ್ಮಿತೆಯ ಪ್ರಶ್ನೆ: ಜಿಲ್ಲೆಯಾಗಿ ರಾಮನಗರವು ಕಳೆದ ಹದಿನಾರು ವರ್ಷಗಳಿಂದ ತನ್ನದೇ ಆದ ಅಸ್ಮಿತೆಯನ್ನು ಹೊಂದಿದೆ. ರೇಷ್ಮೆ ನಗರಿ ಖ್ಯಾತಿಯೊಂದಿಗೆ ಕೃಷಿ, ಹೈನುಗಾರಿಕೆ, ತೋಟಗಾರಿಕೆ, ಕೈಗಾರಿಕೆಯಲ್ಲಿ ಗಮನ ಸೆಳೆದಿರುವ ಜಿಲ್ಲೆಯು ಬೆಟ್ಟಗುಡ್ಡ, ನದಿ ಪ್ರಾಕೃತಿಕ ಸಂಪತ್ತಿನ ಮೂಲಕವೂ ಗಮನ ಸೆಳೆದಿದೆ. ಜಾನಪದ ಕಲೆಗಳ ತವರಾಗಿಯೂ ಸಾಂಸ್ಕೃತಿಕ ಹಿರಿಮೆ ಮೆರೆದಿದೆ. ಮಹಾಪುರುಷರಿಗೆ ಜನ್ಮ ನೀಡಿದ ಹೆಗ್ಗಳಿಕೆ ಇರುವ ಜಿಲ್ಲೆಗೆ, ಪ್ರಸಿದ್ಧ ದೇವಾಲಯಗಳನ್ನು ಹೊಂದಿರುವ ಗರಿಯೂ ಇದೆ. ಇಲ್ಲಿನ ಕಲ್ಲಿನ ಬೆಟ್ಟಗಳು ಹಲವು ಪುರಾಣಗಳ ಕತೆಗಳ ಜೊತೆಗೆ ಐತಿಹಾಸಿಕವಾಗಿಯೂ ಬೆಸೆದುಕೊಂಡಿವೆ.

ಹಲವು ವೈವಿಧ್ಯ ಮತ್ತು ವಿಶೇಷತೆಗಳ ‘ರಾಮನಗರ ಜಿಲ್ಲೆ’ ಎಂಬ ಎರಡು ಪದವು, ಇಲ್ಲಿನ ಜನರೊಂದಿಗೆ ಭಾವನಾತ್ಮಕ ನಂಟು ಹೊಂದಿದೆ. ಹಾಗಾಗಿ, ಹೆಸರು ಬದಲಾವಣೆ ಮಾಡುವುದರಿಂದ ಇಲ್ಲಿನ ಜನರ ಅಸ್ಮಿತೆಗೂ ಧಕ್ಕೆಯಾಗಲಿದೆ. ಹೆಸರು ಬದಲಾವಣೆ ಮಾಡುವುದರಿಂದ ಅಥವಾ ರಾಜಧಾನಿಯೊಂದಿಗೆ ಸೇರಿಸುವುದರಿಂದ ನಮ್ಮ ಅಸ್ಮಿತೆಯನ್ನು ನಾವೇ ಕಳೆದುಕೊಂಡಂತಾಗುತ್ತದೆ ಎನ್ನುತ್ತಾರೆ ಸಾಂಸ್ಕೃತಿಕ ಲೋಕದ ಪ್ರತಿನಿಧಿಗಳು.

ಹಿಂದೆಯೂ ಪ್ರಯತ್ನ ನಡೆದಿತ್ತು: ಹಿಂದಿನ ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಸಹ ರಾಮನಗರವನ್ನು ನವ ಬೆಂಗಳೂರು ಅಥವಾ ನವ ರಾಮನಗರ ಎಂದು ನಾಮಕರಣ ಮಾಡುವ ಪ್ರಸ್ತಾವ ಮುಂದಿಟ್ಟಿದ್ದರು. ಇದಕ್ಕೆ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಸುಮ್ಮನಾಗಿದ್ದರು.

ಡಿ.ಕೆ. ಶಿವಕುಮಾರ್‌
ಡಿ.ಕೆ. ಶಿವಕುಮಾರ್‌
ವೈಯಕ್ತಿಕ ಹಿತಾಸಕ್ತಿ ಅಡಗಿದೆ: ಡಿ.ಕೆ. ಶಿವಕುಮಾರ್ ಅವರ ಮಾತಿನಲ್ಲಿ ರಾಮನಗರ ಜಿಲ್ಲೆಯ ಹಿತಾಸಕ್ತಿಗಿಂತ ವೈಯಕ್ತಿಕ ಹಿತಾಸಕ್ತಿಯೇ ಎದ್ದು ಕಾಣುತ್ತಿದೆ. ಹೆಸರು ಬದಲಾವಣೆ ಮಾಡಿದರೆ ಅಥವಾ ಬೆಂಗಳೂರಿಗೆ ಸೇರಿಸುವುದರಿಂದ ಅವರಿಗೆ ವೈಯಕ್ತಿಕ ಅನುಕೂಲಗಳಿರಬಹುದೇ ಹೊರತು ಜಿಲ್ಲೆಗಲ್ಲ. ಅವರು ಎಲ್ಲವನ್ನೂ ವ್ಯವಹಾರಿಕವಾಗಿಯೇ ನೋಡುತ್ತಾರೆ. ಭೂಮಿಗೆ ಚಿನ್ನದ ಬೆಲೆ ಬಂದರೆ ಅಭಿವೃದ್ಧಿಯ ಹೊಳೆ ಹರಿಯುತ್ತದೆಯೇ? ಅದರ ಸಾಧಕ–ಬಾಧಕಗಳೇನು ಎಂಬುದರ ಅರಿವಿದೆಯೇ? ಹಳ್ಳಿ ಜನ ಬೆಂಗಳೂರಿಗೆ ಹೋಗುವುದನ್ನು ತಪ್ಪಿಸುವ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ರಾಮನಗರವನ್ನು ಜಿಲ್ಲೆ ರಚನೆಯಾಗಿದೆ. ಇದರಿಂದ ಸಾಕಷ್ಟು ಅನುಕೂಲಗಳಾಗಿವೆ. ಒಕ್ಕಲಿಗರ ರಾಜಕಾರಣದ ಭಾಗವಾಗಿ ಅವರ ಹೇಳಿಕೆಯನ್ನು ಗ್ರಹಿಸಿದರೂ ಕೆಂಪೇಗೌಡರು ಕಟ್ಟಿದ ಬೆಂಗಳೂರಿನಲ್ಲಿ ಒಕ್ಕಲಿಗರೇ ರಾಜಕೀಯವಾಗಿ ಪ್ರಾಬಲ್ಯವಾಗಿದ್ದಾರೆ. ಕನಕಪುರ ಅಥವಾ ಇಡೀ ರಾಮನಗರ ಜಿಲ್ಲೆ ಅದಕ್ಕೆ ಸೇರಿಕೊಂಡರೂ ಅಂತಹ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ. ತಾವು ಬೆಂಗಳೂರಿಗೆ ಸೇರಿದವರು ಎನ್ನುವ ಶಿವಕುಮಾರ್ ಅವರು ಇದೀಗ ಬೆಂಗಳೂರು ಅಭಿವೃದ್ಧಿ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಅಭಿವೃದ್ಧಿಯೇ ಅವರ ಉದ್ದೇಶವಾಗಿದ್ದರೆ ಕೈಯಲ್ಲಿರುವ ಅಧಿಕಾರ ಬಳಸಿಕೊಂಡು ಜಿಲ್ಲೆಯನ್ನು ಅಭಿವೃದ್ಧಿ ಮಾಡಲಿ. ಬರ ಸೇರಿದಂತೆ ರಾಜ್ಯ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಅನಗತ್ಯ ವಿಷಯಗಳ ಪ್ರಸ್ತಾಪವೇಕೆ?
– ಸಿ.ಪಿ. ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯ
‘ಬೆಂಗಳೂರು ಸೇರಿದಾಕ್ಷಣ ಅಸ್ತಿತ್ವ ಅಳಿಯುವುದಿಲ್ಲ’ ರಾಮನಗರದ ಬಹುಸಂಖ್ಯಾತರಿಗೆ ಈಗಲೂ ತಾವು ಹಿಂದಿನಂತೆ ಬೆಂಗಳೂರು ಜಿಲ್ಲೆಯ ಭಾಗವಾಗಬೇಕೆಂಬ ಅಭಿಲಾಷೆ ಇದೆ. ರಾಮನಗರ ಜಿಲ್ಲೆ ರದ್ದಾಗಿ ವಿಶ್ವ ಭೂಪಟದಲ್ಲಿ ವಿಶೇಷ ಸ್ಥಾನ ಪಡೆದಿರುವ ಬೆಂಗಳೂರಿನ ಭಾಗವಾಗುವುದರಿಂದ ರಾಮನಗರ ಸಹ ಆ ಭೂಪಟದಲ್ಲಿ ರಾರಾಜಿಸುತ್ತದೆ. ಇದರಿಂದ ನಮ್ಮ ಅಸ್ತಿತ್ವ ಅಳಿಯುವುದಿಲ್ಲ. ಮಹತ್ವವೂ ಕಮ್ಮಿಯಾಗುವುದಿಲ್ಲ. ಸದ್ಯ ಡಿ.ಕೆ. ಶಿವಕುಮಾರ್ ಅವರು ಕೇವಲ ಕನಕಪುರವನ್ನು ಮಾತ್ರ ಬೆಂಗಳೂರಿಗೆ ಸೇರಿಸುತ್ತಾರೊ ಅಥವಾ ಇಡೀ ಜಿಲ್ಲೆಯನ್ನೇ ಸೇರಿಸುತ್ತಾರೊ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಕನಕಪುರವನ್ನು ಮಾತ್ರ ಸೇರಿಸಿದರೆ ಉಳಿದ ತಾಲ್ಲೂಕಿನವರಿಗೆ ಅವರು ದ್ರೋಹ ಮಾಡಿದಂತಾಗುತ್ತದೆ. ಏಕೆಂದರೆ ಜಿಲ್ಲೆಯ ಕಾಂಗ್ರೆಸ್ಸಿಗರೆಲ್ಲರೂ ಅವರನ್ನು ನೆಚ್ಚಿಕೊಂಡೇ ರಾಜಕೀಯ ಮಾಡುತ್ತಾ ಬಂದಿದ್ದಾರೆ. ಅವರು ಹಾಗೆ ಮಾಡುವುದಿಲ್ಲ ಎಂಬ ವಿಶ್ವಾಸ ನನಗಿದೆ. ಶಿವಕುಮಾರ್ ಅವರ ಮಾತಿಗೆ ಎಚ್‌.ಡಿ. ಕುಮಾರಸ್ವಾಮಿ ಯಾಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೊ ಗೊತ್ತಿಲ್ಲ. ರಾಮನಗರವು ಬೆಂಗಳೂರು ಸೇರಿದರೂ ಎಚ್‌ಡಿಕೆ ಅವರ ಎರಡು ಕಣ್ಣುಗಳಾದ ರಾಮನಗರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳು ಅಸ್ತಿತ್ವದಲ್ಲಿರಲಿವೆ. ಅವರ ಯಾವ ಕಣ್ಣಿಗೂ ಬಾಧೆಯಾಗುವುದಿಲ್ಲ.
– ಸಿ.ಎಂ. ಲಿಂಗಪ್ಪ ಕಾಂಗ್ರೆಸ್ ನಾಯಕ
‘ಜಿಲ್ಲೆ ಅಭಿವೃದ್ಧಿಗೆ ಸಂಕಲ್ಪ ಮಾಡಲಿ’ ಜಿಲ್ಲೆ ಅಚ್ಚುಕಟ್ಟಾಗಿ ನಡೆದುಕೊಂಡು ಹೋಗುತ್ತಿದೆ. ಕನಕಪುರವನ್ನು ಬೆಂಗಳೂರಿಗೆ ಸೇರಿಸುವುದು ಅಥವಾ ಬೆಂಗಳೂರನ್ನು ಕನಕಪುರಕ್ಕೆ ತರುವುದು ಬೇರೆ ವಿಚಾರ. ಆದರೆ ಜಿಲ್ಲೆಯ ನಾಯಕರಾಗಿ ಶಿವಕುಮಾರ್ ಅವರು ಇಲ್ಲಿಗೆ ಹೊಸ ಯೋಜನೆಗಳನ್ನು ತಂದು ಅಭಿವೃದ್ಧಿಗೆ ಹೊಸ ಸಂಕಲ್ಪ ಮಾಡಲಿ. ಆ ಶಕ್ತಿಯೂ ಅವರಿಗಿದೆ. ನವ ಬೆಂಗಳೂರು ನಿರ್ಮಾಣ ಚಿಂತನೆಯನ್ನು ಜಿಲ್ಲೆಯಲ್ಲಿ ಸಾಕಾರಗೊಳಿಸಲಿ. ಅದಕ್ಕೆ ಪೂರಕವಾದ ಸೌಕರ್ಯಗಳು ಇಲ್ಲಿವೆ. ಆದರೆ ಹೆಸರು ಬದಲಾವಣೆಯಿಂದ ಏನೂ ಆಗುವುದಿಲ್ಲ. ಈ ಕುರಿತು ಹದಿನಾರು ವರ್ಷಗಳಿಂದ ಚರ್ಚೆ ಮಾಡದವರು ಇಂದು ಯಾಕೆ ಈ ವಿಷಯ ಪ್ರಸ್ತಾಪ ಮಾಡುತ್ತಿದ್ದಾರೆ. ಅವರು ರಾಮನಗರವನ್ನು ಬ್ರ್ಯಾಂಡ್ ಬೆಂಗಳೂರು ಮಾಡುವುದಿಲ್ಲ. ಬದಲಿಗೆ ಅಲ್ಲಿನ ಕಸ ತಂದು ಹಾಕಲು ಮುಂದಾಗಿದ್ದಾರೆ.
– ಎ. ಮಂಜುನಾಥ್ ಅಧ್ಯಕ್ಷ ಜೆಡಿಎಸ್ ಜಿಲ್ಲಾ ಘಟಕ
ಜಿಲ್ಲೆಯ ಅಸ್ಮಿತೆ ಉಳಿಸಿಕೊಳ್ಳಲಿ: ಜನರಿಗೆ ಅನಾನುಕೂಲವಾಗುತ್ತಿದ್ದ ಕಾರಣಕ್ಕೆ ಎಲ್ಲಾ ರೀತಿಯಿಂದಲೂ ಚಿಂತನೆ ನಡೆಸಿ ಬೆಂಗಳೂರು ಗ್ರಾಮಾಂತರದಿಂದ ಬೇರ್ಪಡಿಸಿ ರಾಮನಗರ ಜಿಲ್ಲೆ ರಚಿಸಲಾಗಿತ್ತು. ಈಗ ಮತ್ತೆ ಅಲ್ಲಿಗೆ ಸೇರಿಕೊಂಡು ತೊಂದರೆ ಅನುಭವಿಸಬೇಕೇ. ರಾಮನಗರ ಜಿಲ್ಲೆಯಾದ ಬಳಿಕ ಜನರಿಗೆ ಎಲ್ಲಾ ರೀತಿಯಿಂದಲೂ ಅನುಕೂಲವಾಗಿದೆ. ರಾಜಕಾರಣಿಗಳು ಬಾಯಿ ಚಪಲಕ್ಕೆ ಮಾತನಾಡುವುದು ಸರಿಯಲ್ಲ. ಅಭಿವೃದ್ಧಿಯೇ ಅವರ ಆದ್ಯತೆಯಾಗಿದ್ದರೆ ನಮ್ಮ ಜಿಲ್ಲೆಯ ಅಸ್ಮಿತೆಗೆ ಧಕ್ಕೆಯಾಗದಂತೆ ಅಭಿವೃದ್ಧಿ ಮಾಡಲಿ.
– ಬಿ.ಟಿ. ನಾಗೇಶ್ ಅಧ್ಯಕ್ಷ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್
‘ಸಾಂಸ್ಕೃತಿಕ ಬದುಕಿನ ಮೇಲೆ ಪರಿಣಾಮ’ ಅನೇಕ ಕನಸುಗಳೊಂದಿಗೆ ಜಿಲ್ಲೆ ರಚನೆಯಾಗಿದೆ. ಹದಿನಾರರ ಹರೆಯದ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು ಕೊಡದೆ ಏಕಾಏಕಿ ಬೆಂಗಳೂರಿಗೆ ಸೇರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಜಿಲ್ಲೆಗೆ ತನ್ನದೇ ಆದ ಸಾಂಸ್ಕೃತಿಕ ಹಿನ್ನೆಲೆ ಇದೆ. ಬೆಂಗಳೂರಿಗೆ ಜಿಲ್ಲೆ ಸೇರ್ಪಡೆಯಾದರೆ ಅತ್ತ ನಗರತನವನ್ನು ಇತ್ತ ಗ್ರಾಮೀಣತನವನ್ನು ಉಳಿಸಿಕೊಳ್ಳಲಾಗದ ಸ್ಥಿತಿಗೆ ತಲುಪಲಿದೆ. ಸಾಂಸ್ಕೃತಿಕ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಭೂಮಿ ಬೆಲೆ ಹೆಚ್ಚಾದರೆ ಅಥವಾ ಕೈಗಾರಿಕೋದ್ಯಮ ಇತ್ತ ಬಂದರೆ ಕೆಲವರಷ್ಟೇ ಅಭಿವೃದ್ಧಿಯಾಗಬಹುದು. ಅಭಿವೃದ್ಧಿಗಾಗಿ ಜಿಲ್ಲೆ ಬೆಂಗಳೂರು ಸೇರಬೇಕಿಲ್ಲ. ರಾಜಕಾರಣಿಗಳು ತಮ್ಮ ಅಧಿಕಾರ ಬಳಸಿ ಬೆಂಗಳೂರು ನಾಚುವಂತೆ ಜಿಲ್ಲೆಯನ್ನು ಅಭಿವೃದ್ಧಿಪಡಿಸಲಿ. ಅದಕ್ಕೆ ಮುನ್ನುಡಿ ಬರೆಯಲು ಇದು ಸಕಾಲ.
– ಡಾ. ಎಂ. ಬೈರೇಗೌಡ ಸಾಹಿತಿ ಜಾನಪದ ತಜ್ಞ
‘ಗಿಡ ಕಿತ್ತು ಬೇರೆ ಕಡೆ ನೆಡುವ ಪ್ರಯತ್ನ ಬೇಡ’ ಒಂದು ಗಿಡ ಪ್ರತ್ಯೇಕವಾಗಿದ್ದರೆ ಅದನ್ನು ಸಮೃದ್ಧವಾಗಿ ಬೆಳೆಸಬಹುದು. ಬದಲಿಗೆ ಅದನ್ನ ಕಿತ್ತುಕೊಂಡು ಹೋಗಿ ನಗರದಲ್ಲಿಟ್ಟುಕೊಂಡರೆ ಅದು ನಾಮಕಾವಸ್ಥೆಯಾಗಲಿದೆ. ಇದರಿಂದ ಅದು ಅವನತಿ ಸಹ ಹೊಂದಬಹುದು. ರಾಮನಗರವು ಬೆಂಗಳೂರಾದರೆ ಮೆಟ್ರೊ ಬರಬಹುದು ಸೂಟು ಬೂಟಿನವರು ಬಂಡವಾಳ ಹೂಡಬಹುದು. ಇದರ ಜೊತೆಗೆ ಕಸದ ಗುಡ್ಡೆ ಬೆಳೆದು ಹಲವು ಸಮಸ್ಯೆಗಳು ಉದ್ಭವಿಸಲಿವೆ. ಬೆಂಗಳೂರಿಗೆ ಜಿಲ್ಲೆಯನ್ನು ಸೇರಿಸುವುದು ತರವಲ್ಲ. ಹಳ್ಳಿಗಳ ಭವಿಷ್ಯದ ಬಗ್ಗೆಯೂ ಯೋಚಿಸಬೇಕು. ನಾವು ವರ್ತಮಾನಕ್ಕೆ ಕುಣಿಯದೆ ಭವಿಷ್ಯದ ಬಗ್ಗೆಯೂ ಚಿಂತಿಸಬೇಕು.
– ಸಿ. ಪುಟ್ಟಸ್ವಾಮಿ ರೈತ ಮುಖಂಡ
‘ವೈಯಕ್ತಿಕ ಹಿತಾಸಕ್ತಿ ತರಬಾರದು’ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಅಭಿವೃದ್ಧಿ ಕಾರಣಕ್ಕೊ ಅಥವಾ ವೈಯಕ್ತಿಕ ಅಜೆಂಡಾ ಅಡಗಿದೆಯೊ ಎಂಬುದು ಗೊತ್ತಾಗಿಲ್ಲ. ಇಂತಹ ವಿಷಯದಲ್ಲಿ ವೈಯಕ್ತಿಕ ಹಿತಾಸಕ್ತಿ ತರಬಾರದು. ನಾವೆಲ್ಲರೂ ಜಿಲ್ಲೆಯ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ರಾಜಕಾರಣ ಮಾಡಬೇಕಾಗುತ್ತದೆ. ಅವರ ಬೆಂಗಳೂರು ಕೇಂದ್ರಿತ ರಾಜಕೀಯ ಕಾರಣಕ್ಕಾಗಿ ರಾಮನಗರ ಜಿಲ್ಲೆಯ ಸ್ವರೂಪ ಬದಲಾವಣೆಗೆ ಮುಂದಾಗಿರುವುದು ಸರಿಯಲ್ಲ. ಜಿಲ್ಲೆ ರಚನೆ ಹಿಂದೆ ಒಳ್ಳೆಯ ಉದ್ದೇಶವಿತ್ತೇ ವಿನಾ ಬೇರಾವುದೇ ಅಜೆಂಡಾವಿರಲಿಲ್ಲ. ಅದರಿಂದ ಜನರಿಗೆ ಅನುಕೂಲವಾಗಿರುವುದೇ ಸಾಕ್ಷಿ. ಜಿಲ್ಲೆಯವರಾದ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಾರೆಂಬ ನಿರೀಕ್ಷೆ ಇಟ್ಟುಕೊಂಡು ಜನ ಅವರಿಗೆ ಅಧಿಕಾರ ಕೊಟ್ಟಿದ್ದಾರೆ. ಅದನ್ನು ಜಿಲ್ಲೆಯ ಅಭಿವೃದ್ಧಿಗೆ ಬಳಸಲಿ.
– ಗೌತಮ್ ಗೌಡ ಬಿಜೆಪಿ ಮುಖಂಡ
‘ಜನರ ದಿಕ್ಕು ತಪ್ಪಿಸುವ ಕೆಲಸ’ ಬರದ ಹೊತ್ತಿನಲ್ಲಿ ಜಿಲ್ಲೆಯ ಹೆಸರು ಬದಲಾವಣೆ ಅಥವಾ ಬೆಂಗಳೂರಿಗೆ ಸೇರಿಸುವ ಇಂಗಿತ ವ್ಯಕ್ತಪಡಿಸಿರುವ ಡಿ.ಕೆ. ಶಿವಕುಮಾರ್ ಅವರು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮನಸ್ಸಿಗೆ ಬಂದಿದ್ದನ್ನು ಹೇಳುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರದಿಂದ ಜಿಲ್ಲೆ ವಿಭಜನೆಗೊಂಡ ನಂತರ ನಿಟ್ಟುಸಿರು ಬಿಟ್ಟಿರುವ ಜನ ಮತ್ತೆ ರಾಜಧಾನಿಗೆ ಅಲೆಯಬೇಕೇ? ಇಂತಹ ಕೆಲಸಕ್ಕೆ ಬಾರದ ವಿಷಯಗಳ ಬದಲು ಅಭಿವೃದ್ಧಿ ಕೆಲಸಗಳ ಕಡೆಗೆ ಗಮನ ಹರಿಸಲಿ.
– ಬೈರೇಗೌಡ ಅಧ್ಯಕ್ಷ ಎಎಪಿ ಜಿಲ್ಲಾ ಘಟಕ
‘ರಾಜಕೀಯ ಮೇಲಾಟದ ಮಾತು ಬಿಡಿ’ ಬೆಂಗಳೂರಿಗೆ ಸೇರ್ಪಡೆಯಾದರೆ ರಾಮನಗರಕ್ಕೆ ಎರಡು ಕೋಡು ಬರುವುದಿಲ್ಲ. ಇದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಶಿವಕುಮಾರ್ ಅವರು ಇಂತಹ ರಾಜಕೀಯ ಮೇಲಾಟದ ಮಾತುಗಳನ್ನಾಡುವುದ್ನು ಬಿಡಬೇಕು. ಅವರ ಉದ್ದೇಶವೇನು ಎಂಬುದನ್ನು ಸ್ಪಷ್ಟಪಡಿಸಬೇಕು. ಅವರ ಹೇಳಿಕೆ ಹಿಂದೆ ರಿಯಲ್ ಎಸ್ಟೇಟ್ ದಂಧೆ ನಡೆಸುವ ಅನುಮಾನವಿದೆ. ಇದರಿಂದ ಬೆಂಗಳೂರು ಸೇರಿದಂತೆ ನಮ್ಮ ರೈತರ ಜಮೀನುಗಳು ಬೇರೆ ದೇಶಗಳ ರಾಜ್ಯಗಳ ಬಂಡವಾಳಶಾಹಿಗಳ ಪಾಲಾಗಲಿದೆ. ಒಕ್ಕಲುತನ ಮಾಯವಾಗಲಿದೆ. ಹಾಗಾಗಿ  ಇಂತಹ ಪ್ರಯತ್ನಗಳನ್ನು ಬಿಡಿ. ಏನೇ ಮಾಡುವುದಿದ್ದರೂ ಜನಾಭಿಪ್ರಾಯ ಸಂಗ್ರಹಿಸಬೇಕು.
– ರಮೇಶ ಗೌಡ ಅಧ್ಯಕ್ಷ ಕಸ್ತೂರಿ ಕರ್ನಾಟಕ ಜನಪರ ವೇದಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT