ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯ ಅಭಿವೃದ್ಧಿಗೆ ಯೋಜನೆ

ಪ್ರವಾಸಿ ತಾಣವಾಗಿ ನಿರ್ಮಾಣ: ಶಾಸಕ ಎ. ಮಂಜುನಾಥ್‌ ಭರವಸೆ
Last Updated 25 ಜನವರಿ 2021, 0:50 IST
ಅಕ್ಷರ ಗಾತ್ರ

ಮಾಗಡಿ: ಬಹುತ್ವದ ನೆಲೆಯಾಗಿದ್ದ ಸಾಂಸ್ಕೃತಿಕ ನಗರ ಕಲ್ಯ ಗ್ರಾಮವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿ ಮಾಡಲಾಗುವುದು ಎಂದು ಶಾಸಕ ಎ. ಮಂಜುನಾಥ ತಿಳಿಸಿದರು.

ತಾಲ್ಲೂಕಿನ ಕಲ್ಯ ಗ್ರಾಮದಲ್ಲಿ ಭಾನುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕಲ್ಯದಲ್ಲಿ 100 ಶ್ರೀಗಂಧದ ಬಸದಿಗಳಿದ್ದು ಪ್ರಸಿದ್ಧ ಜೈನ ಕೇಂದ್ರವಾಗಿತ್ತು. ಕಲಗಣನಾಥ ದೇವಾಲಯದಲ್ಲಿ ಧ್ಯಾನಿ ಬುದ್ಧನ ಶಿರಸ್ಸು ಇಂದಿಗೂ ಇದೆ. ಇದು ನಾಥಪಂಥದ ನೆಲೆಯಾಗಿತ್ತು. ಸರ್ವಶೀಲೆ ಚನ್ನಮ್ಮ ಅವರ ದರ್ಶನಾಕಾಂಕ್ಷಿಯಾಗಿ ಆಂಧ್ರಪ್ರದೇಶದಿಂದ ಕಲ್ಯಕ್ಕೆ ಆಗಮಿಸಿದ್ದ ಬಹುಭಾಷಾ ಪಂಡಿತ ಪಾಲ್ಕುರಿಕೆ ಸೋಮನಾಥ ಇಲ್ಲಿಯೇ ನೆಲೆನಿಂತು ನಿಧನರಾಗಿದ್ದು ಸಮಾಧಿ ಇಂದಿಗೂ ಇದೆ ಎಂದು ತಿಳಿಸಿದರು.

ವಿಜಯನಗರದ ಅರಸು ಬುಕ್ಕರಾಯರ ಧರ್ಮ ಸಮನ್ವಯ ಶಾಸನಗಳಿವೆ. ಚಾರಿತ್ರಿಕ, ಧಾರ್ಮಿಕ ಸ್ಮಾರಕಗಳ ರಕ್ಷಣೆಗೆ ಮೊದಲ ಆದ್ಯತೆ ನೀಡಲಾಗುವುದು. ಆಂಜನೇಯ ಸ್ವಾಮಿ ದೇವಾಲಯ ಜೀರ್ಣೋದ್ದಾರಕ್ಕೆ ಶಾಸಕರ ನಿಧಿಯಿಂದ ಅನುದಾನ ನೀಡಲಾಗುವುದು. ₹ 8 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ, ₹ 5 ಲಕ್ಷ ವೆಚ್ಚದಲ್ಲಿ ಅಶ್ವತ್ಥಕಟ್ಟೆ ಕಟ್ಟಿಸಲಾಗುವುದು. ಕಲ್ಯಾ ಕಾಲೊನಿ ಸರ್ಕಲ್, ಶ್ರೀಪತಿಹಳ್ಳಿ, ದೇವರಹಟ್ಟಿ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಮುಂದೆ ₹ 5 ಲಕ್ಷ ವೆಚ್ಚದಲ್ಲಿ ಹೈಮಾಸ್ಕ್ ದೀಪಗಳನ್ನು ಅಳವಡಿಸಲಾಗುವುದು ಎಂದರು.

ಕವಿ ಸಮಾಧಿಅಭಿವೃದ್ಧಿ: ಬಹುಭಾಷಾ ವಿಶಾರದ ಕವಿ ಪಾಲ್ಕುರಿಕೆ ಸೋಮನಾಥನ ಸಮಾಧಿಯಲ್ಲಿ ಅಂತರರಾಜ್ಯ ಪ್ರವಾಸಿ ತಾಣವನ್ನಾಗಿಸಲು ಆಂಧ್ರಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿಗೆ ಕವಿಯ ಸಮಾದಿ ಅಭಿವೃದ್ಧಿಗೆ ಸಹಕಾರ ನೀಡುವಂತೆ ಕೋರಿ ಪತ್ರ ಬರೆದಿದ್ದೇನೆ ಎಂದು ಶಾಸಕರು ತಿಳಿಸಿದರು.

‘ನಾನು ಒಬ್ಬ ಜೆಡಿಎಸ್ ಕಾರ್ಯಕರ್ತರಂತೆ ಕೆಲಸ ಮಾಡುತ್ತಿರುವೆ. ಕಾರ್ಯಕರ್ತರನ್ನು ಗುರುತಿಸಿ ಗೌರವಿಸಿ, ನನ್ನೊಂದಿಗೆ ಅವರನ್ನು ಕರೆದೊಯ್ಯುತ್ತೇನೆ. ಟೀಕೆ ಮಾಡುವವರಿಗೆ ಅಭಿವೃದ್ಧಿ ಕಾಮಗಾರಿ ಮಾಡುವ ಮೂಲಕ ಉತ್ತರ ನೀಡುತ್ತೇನೆ’ ಎಂದರು.

ದಿನಾಚರಣೆ: ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಶುಭಾಶಯ ತಿಳಿಸಿದ ಶಾಸಕರು, ತಾಲ್ಲೂಕಿನಲ್ಲಿ ಮಹಿಳೆಯರ ಸಬಲೀಕರಣಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದರು.

ಗ್ರಾಮಕ್ಕೆ ಆಗಮಿಸಿದ ಶಾಸಕ ಮಂಜುನಾಥ ಮತ್ತು ಪತ್ನಿ ಲಕ್ಷ್ಮಿ ಮಂಜುನಾಥ ಅವರನ್ನು ಜನಪದ ಕಲಾತಂಡಗಳೊಂದಿಗೆ ಗ್ರಾಮಸ್ಥರು ಸ್ವಾಗತಿಸಿದರು. ಜೆಡಿಎಸ್ ಮುಖಂಡರಾದ ಕೆ. ಕೃಷ್ಣಮೂರ್ತಿ, ಬಿ.ಆರ್. ಗುಡ್ಡೆಗೌಡ, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷ ಶೈಲಜಾ, ಕಲ್ಕೆರೆ ಶಿವಣ್ಣ, ತಮ್ಮಣ್ಣಗೌಡ ಮಾತನಾಡಿದರು.

ಚಿಕ್ಕಣ್ಣ, ವಿಜಯಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಪ್ಪ, ವಾಸಣ್ಣ, ಕೆ. ಪ್ರಹ್ಲಾದ್‌ರಾವ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT