ಮಾಗಡಿ: ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರವಾರ ಆಟೊ ಚಾಲಕರ ಕುಂದು ಕೊರತೆ ಸಭೆ ನಡೆಯಿತು.
ಸಿಪಿಐ ಗಿರಿರಾಜ.ಜಿ.ವೈ ಮಾತನಾಡಿ ‘ಅ.1ರೊಳಗೆ ಪಟ್ಟಣದಲ್ಲಿನ ಎಲ್ಲಾ ಆಟೊ ರಿಕ್ಷಾಗಳ ಚಾಲಕರು ತಮ್ಮ ಆಟೊಗೆ ವಿಮೆ ಮಾಡಿಸಬೇಕು. ಚಾಲನಾ ಪರವಾನಗಿ, ಇತರೆ ದಾಖಲೆಗಳನ್ನು ಕಡ್ಡಾಯವಾಗಿ ತೋರಿಸಬೇಕು. ಠಾಣೆಯಿಂದ ಪ್ರತಿಯೊಂದು ಆಟೊಗೂ ನೋಂದಣಿ ಸಂಖ್ಯೆ ನೀಡಲಾಗುವುದು. ಅ.2ರ ನಂತರ ಸೂಕ್ತ ದಾಖಲಾತಿಗಳನ್ನು ತೋರಿಸದ ಆಟೊ ಸೀಜ್ ಮಾಡುತ್ತೇವೆ’ ಎಂದು ಹೇಳಿದರು.
‘ಆಟೊ ಚಾಲಕರು ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ರಸ್ತೆಯ ಮಧ್ಯೆ ನಿಲ್ಲಿಸಿಕೊಂಡು ಮಾತಿಗಿಳಿಯುವುದು, ಮೊಬೈಲ್‌ನಲ್ಲಿ ಮಾತನಾಡುತ್ತಾ ಆಟೊ ಒಡಿಸುವುದು. ಹೆಚ್ಚು ಪ್ರಯಾಣಿಕರನ್ನು ಹತ್ತಿಸಿಕೊಂಡು ನಿರ್ಲಕ್ಷ್ಯದಿಂದ ಆಟೊ ಓಡಿಸುವುದು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ರೋಟರಿಯಿಂದ ಆರೋಗ್ಯ ತಪಾಸಣೆ ಮಾಗಡಿ: ಪಟ್ಟಣದ ಮಾರುತಿ ಮೋಹನ್ ಚಿತ್ರಮಂದಿರದ ಆವರಣದಲ್ಲಿ ಶುಕ್ರವಾರ ರೋಟರಿ ಮಾಗಡಿ ಸೆಂಟರ್‌ನಿಂದ ನಡೆದ ಬೃಹತ್ ಆರೋಗ್ಯ ತಪಾಸಣೆ ಶಿಬಿರಕ್ಕೆ 3191 ಜಿಲ್ಲಾ ರೋಟರಿ ಪಾಲಕ ಉದಯ್ ಕುಮಾರ್ ಭಾಸ್ಕರ್ ಚಾಲನೆ ನೀಡಿದರು. ಸರ್ಕಲ್ ಇನ್ಸ್‌ಪೆಕ್ಟರ್ ಗಿರಿರಾಜ.ಜಿ.ವೈ. ಮಾತನಾಡಿ ‘ಕೆರೆಯ ನೀರನ್ನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ’ ಎಂಬ ದಾಸರ ವಾಣಿಯಂತೆ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ನಿರತರಾಗಿರುವ ರೋಟೇರಿಯನ್‌ಗಳ ಸೇವೆ ಸ್ಮರಣೀಯ ಎಂದರು. ರೋಟರಿ ಮಾಗಡಿ ಸೆಂಟ್ರಲ್ ಅಧ್ಯಕ್ಷ ಪ್ರಭಾಕರ್ ಎಲ್. ಬೆಂಗಳೂರಿನ ಸೌತ್ ಸಮರ್ಪಣೆ ಅಧ್ಯಕ್ಷ ಹರಿನಾಥ್ ರೋಟರಿ ಹೈಗ್ರೌಂಡ್ಸ್ ಅಧ್ಯಕ್ಷ ಎಚ್.ಎಂ.ಟಿ.ಗೌಡ ಜಿಲ್ಲಾ ವಲಯ ಪಾಲಕ ಗೋಪಾಲ ರೋಟರಿ ಸೆಂಟ್ರಲ್ ಕಾರ್ಯದರ್ಶಿ ಶಂಕರಮೂರ್ತಿ.ಜಿ. ಮಾತನಾಡಿದರು. ಮಹಾಂತೇಶ್ ಎಂ.ಎನ್.ಪ್ರಸಾದ್ ಮೋಹನ್ ನರಸಿಂಹಮೂರ್ತಿ ನಾಗೇಶ್ ಸುಲ್ತಾನಬಾಬಾ ಜಯಶಂಕರ್ ರೂಪಲಾಲ್ ಡಾ.ಮಂಜುನಾಥ ಬೆಟಗೇರಿ ಗಣೇಶ್ ದಕ್ಷಿಣಾಮೂರ್ತಿ ಶಂಕರ್ ಕುಮಾರಸ್ವಾಮಿ ಲ್ಯಾಬ್ ಲೋಕೇಶ್ ವಿನೋದ್ ಅಶ್ವತ್ಥ್ ಮನು ರಾಜೀವ್ ಮಲ್ಲಿನಾಥ್ ಸುಧೀಂದ್ರ ವೇಣುಗೋಪಾಲ್ ಡಾಬಾ ಮಹೇಶ್ ಭಾಗವಹಿಸಿದ್ದರು. ಯುವಕರು ರಕ್ತದಾನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.