ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಒಪಿ ಗಣೇಶ ಮೂರ್ತಿ ನಿಷೇಧ: ಈ ವರ್ಷದಿಂದ ಪರಿಸರ ಸ್ನೇಹಿ ಉತ್ಸವ

ಮಾರಾಟ ಚುರುಕು
Last Updated 31 ಆಗಸ್ಟ್ 2019, 12:20 IST
ಅಕ್ಷರ ಗಾತ್ರ

ರಾಮನಗರ: ಈ ಬಾರಿಯ ಗಣೇಶ ಪ್ರತಿಷ್ಠಾಪನೆಗೆ ನಗರ ಸಜ್ಜುಗೊಂಡಿದ್ದು, ಪರಿಸರ ಸ್ನೇಹಿ ಮೂರ್ತಿಗಳ ಪ್ರತಿಷ್ಠಾಪನೆಗೆ ಜನರು ಒಲವು ತೋರುತ್ತಿದ್ದಾರೆ.

ಹಬ್ಬಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದ್ದು, ಮಾರುಕಟ್ಟೆಯಲ್ಲಿ ವಿಘ್ನೇಶನ ಮೂರ್ತಿಗಳ ಖರೀದಿ ಪ್ರಕ್ರಿಯೆ ಶನಿವಾರ ಚುರುಕು ಪಡೆದುಕೊಂಡಿತ್ತು. ನಗರದ ಮಂದಿಯ ಜೊತೆಗೆ ದೂರದ ಊರುಗಳಿಂದಲೂ ಜನರು ಬಂದು ತಮ್ಮಿಷ್ಟದ ಮೂರ್ತಿಗಳನ್ನು ವಿಚಾರಿಸಿ, ಬೆಲೆ ಕೇಳಿ ಚೌಕಾಸಿಗೆ ಇಳಿದಿದ್ದರು. ಕೆಲವರು ಮುಂಗಡ ಹಣ ಕೊಟ್ಟು ಮೂರ್ತಿಗಳನ್ನು ಕಾಯ್ದಿರಿಸಿದರು.

ಸರ್ಕಾರವು ಈಗಾಗಲೇ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ ಮಾಡಿದ ಮೂರ್ತಿಗಳನ್ನು ನಿಷೇಧ ಮಾಡಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಇಂತಹ ಮೂರ್ತಿಗಳ ಮಾರಾಟ ಸಾಕಷ್ಟು ಕಡಿಮೆ ಆಗಿದೆ. ಆದಾಗ್ಯೂ ಅಲ್ಲೊಂದು ಇಲ್ಲೊಂದು ಮೂರ್ತಿಗಳು ಕಾಣಸಿಗುತ್ತಿವೆ.

ನಗರಸಭೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಪಿಒಪಿ ಮೂರ್ತಿಗಳ ನಿಷೇಧದ ಬಗ್ಗೆ ವರ್ತಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲಲ್ಲಿ ದಾಳಿ ನಡೆಸಿ ದಂಡ ವಿಧಿಸುವ ಮೂಲಕ ಮಾರಾಟಗಾರರನ್ನು ಎಚ್ಚರಿಸುವ ಪ್ರಯತ್ನ ಮಾಡಿದ್ದಾರೆ. ಈ ಎಲ್ಲ ಕ್ರಮಗಳ ಹಿನ್ನೆಲೆಯಲ್ಲಿ ಪರಿಸರಕ್ಕೆ ಮಾರಕವಾದ ಮೂರ್ತಿಗಳ ಮಾರಾಟವು ತಗ್ಗುತ್ತಿದೆ.

‘ನಗರಸಭೆ ವ್ಯಾಪ್ತಿಯಲ್ಲಿ ಪಿಒಪಿ ಮೂರ್ತಿಗಳ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ. ನಗರದೆಲ್ಲೆಡೆ ಕರಪತ್ರಗಳನ್ನು ಹಂಚಿ ವರ್ತಕರಿಗೆ ಈ ಬಗ್ಗೆ ಮುಂಚೆಯೇ ಜಾಗೃತಿ ಮೂಡಿಸಲಾಗಿದೆ. ಪಿಒಪಿ ಮೂರ್ತಿಗಳು ಕಂಡುಬಂದಲ್ಲಿ ಅವುಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಹೀಗಾಗಿ ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳ ಮಾರಾಟ ಮಾತ್ರ ನಡೆದಿದೆ’ ಎಂದು ನಗರಸಭೆ ಆಯುಕ್ತೆ ಕೆ. ಶುಭಾ ‘ಪ್ರಜಾವಾಣಿ’ಗೆ ತಿಳಿಸಿದರು.

ಮಣ್ಣಿನ ಮೂರ್ತಿ ದುಬಾರಿ: ಪಿಒಪಿಗೆ ಹೋಲಿಸಿದರೆ ಮಣ್ಣಿನ ಮೂರ್ತಿಗಳು ಮಾರುಕಟ್ಟೆಯಲ್ಲಿ ಕೊಂಚ ದುಬಾರಿ ಆಗಿವೆ. ‘ಮಣ್ಣಲ್ಲಿ ಮೂರ್ತಿಗಳನ್ನು ಮಾಡುವುದು ಅತಿ ನಾಜೂಕಿನ ಕೆಲಸ. ಹಾಗೆಯೇ ಅವುಗಳನ್ನು ಅಷ್ಟೇ ಜೋಪಾನವಾಗಿ ನೋಡಿಕೊಳ್ಳಬೇಕಾಗುತ್ತದೆ. ಸ್ವಲ್ಪ ಆಚೀಚೆ ಆದರೂ ಮುರಿಯುವ ಸಾಧ್ಯತೆ ಇರುತ್ತದೆ’ ಎಂದು ಎಂ.ಜಿ. ರಸ್ತೆಯಲ್ಲಿನ ಗಣಪತಿ ಮೂರ್ತಿ ಮಾರಾಟಗಾರ ಶಂಕರ್‌ ತಿಳಿಸಿದರು.

‘₹ 200ರಿಂದ ₹ 10 ಸಾವಿರದವರೆಗೂ ನಮ್ಮಲ್ಲಿ ಮೂರ್ತಿಗಳಿವೆ. ದೊಡ್ಡ ಮೂರ್ತಿಗಳು ಬೇಕಾದವರು ಸಾಕಷ್ಟು ಮುಂಚೆಯೇ ಮುಂಗಡ ನೀಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮೂರ್ತಿ ಮಾರುವವರ ಸಂಖ್ಯೆಯೂ ಕಡಿಮೆ ಇದೆ. ವ್ಯಾಪಾರವೂ ಕಳೆಗುಂದಿದೆ. ಇನ್ನೂ ಹಬ್ಬದ ಸಂಭ್ರಮ ಬಂದಿಲ್ಲ. ಭಾನುವಾರ ವ್ಯಾಪಾರ ಚುರುಕುಗೊಳ್ಳುವ ನಿರೀಕ್ಷೆ ಇದೆ’ ಎಂದು ಅವರು ಹೇಳಿದರು.

‘ಸಿರಿಗೌರಿ’ ಕಲ್ಯಾಣಿಯಲ್ಲಿ ವಿಸರ್ಜನೆಗೆ ವ್ಯವಸ್ಥೆ

ರಂಗರಾಯರದೊಡ್ಡಿ ಕೆರೆಯ ಅಂಗಳದಲ್ಲಿ ನಿರ್ಮಿಸಲಾದ ‘ಸಿರಿಗೌರಿ’ ಕೃತಕ ಕಲ್ಯಾಣಿಯಲ್ಲಿ ಮೂರ್ತಿಗಳ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದೆ.

ಇದಲ್ಲದೆ ನಗರಸಭೆ ಕಚೇರಿ, ವಿನಾಯಕನಗರ ಆರ್ಚ್‌, ನಗರಸಭೆ ಕಾಂಪ್ಲೆಕ್ಸ್‌, ರೋಟರಿ ವೃತ್ತ, ಕೆಂಪೇಗೌಡ ವೃತ್ತ, ಐಜೂರು ವಾಟರ್‌ ಟ್ಯಾಂಕ್‌ ಬಳಿ ಸಂಚಾರಿ ವಾಹನಗಳ ಮೂಲಕ ಸಣ್ಣ ಮೂರ್ತಿಗಳ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದೆ. ಸಿರಿಗೌರಿ ಕಲ್ಯಾಣಿಯಲ್ಲಿ ಪಿಒಪಿ ಮೂರ್ತಿಗಳನ್ನು ವಿಸರ್ಜಿಸುವಂತೆ ಇಲ್ಲ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

*ಪಿಒಪಿ ಮೂರ್ತಿಗಳ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಪರಿಸರದ ಸಲುವಾಗಿ ಜನರು ಮಣ್ಣಿನ ಮೂರ್ತಿಗಳನ್ನೇ ಖರೀದಿಸಿ ಹಬ್ಬ ಆಚರಿಸಬೇಕು

–ಶುಭಾ,ಆಯುಕ್ತೆ, ರಾಮನಗರ ನಗರಸಭೆ

*ಗಾಢ ವರ್ಣದ ಬಣ್ಣಗಳಿಂದ ಕೂಡಿದ ಪಿಒಪಿ ಮೂರ್ತಿಗಳು ಪರಿಸರಕ್ಕೆ ಮಾರಕ. ಮಣ್ಣಿನ ಬಣ್ಣದ ಮೂರ್ತಿಗಳನ್ನೇ ಪ್ರತಿಷ್ಠಾಪಿಸಿ ಸಂಭ್ರಮಿಸೋಣ

ರಮೇಶ್‌,ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT