ಬುಧವಾರ, ಮಾರ್ಚ್ 29, 2023
32 °C

ಶಿಕ್ಷಕರ ನಿಸ್ವಾರ್ಥ ಸೇವೆಗೆ ಶ್ಲಾಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ‘ಶಿಕ್ಷಕ ವೃತ್ತಿ ಪವಿತ್ರವಾ ದುದು. ಸಮಾಜಕ್ಕೆ ಬೇಕಾದ ವಿವಿಧ ಹುದ್ದೆಗಳಿಗೆ ಅರ್ಹ ವ್ಯಕ್ತಿಗಳನ್ನು ಶಿಕ್ಷಕರು ರೂಪಿಸುತ್ತಾರೆ’ ಎಂದು ತಹಶೀಲ್ದಾರ್‌ ವಿ.ಆರ್‌. ವಿಶ್ವನಾಥ್‌ ತಿಳಿಸಿದರು.

ಇಲ್ಲಿನ ರೋಟರಿ ಭವನದಲ್ಲಿ ಕನಕಪುರ ತಾಲ್ಲೂಕು ಖಾಸಗಿ ಶಾಲಾ ಶಿಕ್ಷಕರ ಒಕ್ಕೂಟದಿಂದ ಶನಿವಾರ ನಡೆದ ಒಕ್ಕೂಟದ ವಾರ್ಷಿಕೋತ್ಸವ ಮತ್ತು ಖಾಸಗಿ ಶಾಲಾ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಯಾವುದೇ ಅಪೇಕ್ಷೆಗಳಿಲ್ಲದೆ ಮಕ್ಕಳ ಶ್ರೇಯಸ್ಸು ಮತ್ತು ಯಶಸ್ಸು ಬಯಸುವವರು ತಂದೆ, ತಾಯಿ ಮಾತ್ರ. ಅವರಂತೆ ಶಿಕ್ಷಕರು ಸಹ ವಿದ್ಯಾರ್ಥಿಗಳಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸುತ್ತಾರೆ. ಮಕ್ಕಳ ಭವಿಷ್ಯ ರೂಪಿಸುತ್ತಾರೆ ಎಂದರು.

ತಾವು ಪಾಠ ಹೇಳಿಕೊಟ್ಟ ವಿದ್ಯಾರ್ಥಿಯೊಬ್ಬ ಭವಿಷ್ಯದಲ್ಲಿ ದೊಡ್ಡ ಹುದ್ದೆಗೇರಿ ಸಮಾಜದಲ್ಲಿ ಗೌರವ ಪಡೆದುಕೊಳ್ಳುವಾಗ ಶಿಕ್ಷಕರಿಗೆ ಹೆಮ್ಮೆ ಎನಿಸುತ್ತದೆ. ಅಂತಹ ಶ್ರೇಯಸ್ಸು ಬಯಸುವವರು ಶಿಕ್ಷಕರು ಮಾತ್ರ ಎಂದು ಹೇಳಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಕರಿಗೆ ಸರಿಯಾಗಿ ಸಂಬಳ ನೀಡಬೇಕು. ಸಂಕಷ್ಟದ ಪರಿಸ್ಥಿತಿಯಲ್ಲಿ ಅವರ ಕೈಹಿಡಿಯಬೇಕು. ಅದೇ ರೀತಿ ಮಕ್ಕಳಿಗೆ ಅನ್ಯಾಯವಾಗದಂತೆ ಶಿಕ್ಷಣ ನೀಡಬೇಕು. ಇಲ್ಲವಾದರೆ ಮಕ್ಕಳ ಭವಿಷ್ಯ ಹಾಳಾಗುತ್ತದೆ ಎಂದು ಎಚ್ಚರಿಸಿದರು.

ಬ್ಲಾಸಮ್‌ ಶಾಲೆಯ ಪ್ರಾಂಶುಪಾಲೆ ಗಂಗಾಬಿಕಾ ಮಾತನಾಡಿ, ಶಿಕ್ಷಕರು ಇಂದಿನ ಶಿಕ್ಷಣ ವ್ಯವಸ್ಥೆ ಹಾಗೂ ಮಕ್ಕಳ ಮನಸ್ಥಿತಿಗೆ ಅನುಗುಣವಾಗಿ ತಮ್ಮನ್ನು ತಾವು ಬದಲಾಯಿಸಿಕೊಳ್ಳಬೇಕಿದೆ. ತಮ್ಮ ಜ್ಞಾನ ವೃದ್ಧಿಸಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಖಾಸಗಿ ಶಾಲಾ ಶಿಕ್ಷಕರು ಮಾರ್ಪಾಡಾಗಬೇಕು ಎಂದು ತಿಳಿಸಿದರು.

ಒಕ್ಕೂಟದ ಅಧ್ಯಕ್ಷ ಮುತ್ತುಸ್ವಾಮಿ ಮಾತನಾಡಿ, ಖಾಸಗಿ ಶಾಲಾ ಶಿಕ್ಷಕರ ಒಕ್ಕೂಟ ಪ್ರಾರಂಭಗೊಂಡು ಒಂದು ವರ್ಷವಾಗಿದೆ. ನಾವು ಮೊದಲಿಗೆ ಕೋವಿಡ್‌ ಸಮಸ್ಯೆ ಎದುರಿಸಿದ್ದೇವೆ. ಶಿಕ್ಷಕರ ಜತೆ ಬೆಂಬಲವಾಗಿ ನಿಂತಿದ್ದೇವೆ. ಸರ್ಕಾರ ಮಟ್ಟದಲ್ಲಿ ಹೋರಾಟ ನಡೆಸಿ ಹಲವು ಸವಲತ್ತುಗಳು ಸಿಗುವಂತೆ ಒಕ್ಕೂಟ ಮಾಡಿದೆ ಎಂದರು.

ಒಕ್ಕೂಟದಲ್ಲಿ ನೋಂದಣಿ ಆಗಿದ್ದ 200 ಮಂದಿಗೆ ಈ ಹಿಂದೆ ಆಹಾರ ಕಿಟ್‌ ಕೊಟ್ಟಿದ್ದು ಉಳಿದ 100 ಮಂದಿಗೆ ಈಗ ಕೊಡುತ್ತಿದ್ದೇವೆ. ಜತೆಗೆ ಖಾಸಗಿ ಶಾಲೆಗಳಲ್ಲಿ 30 ವರ್ಷ ಸೇವೆ ಸಲ್ಲಿಸಿರುವ ಶಿಕ್ಷಕ, ಶಿಕ್ಷಕಿಯರನ್ನು ಗುರುತಿಸಿ ಸನ್ಮಾನಿಸುತ್ತಿದ್ದೇವೆ. ಒಕ್ಕೂಟ ಸದಾ ಖಾಸಗಿ ಶಾಲಾ ಶಿಕ್ಷಕರ ಪರವಾಗಿ ಕೆಲಸ ಮಾಡಲಿದೆ ಎಂದರು.

ಕನಕ ಆಸ್ಪತ್ರೆಯ ಡಾ.ಟಿ.ಎನ್‌. ವಿಜಯಕುಮಾರ್‌, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನೇ.ರಾ. ಪ್ರಭಾಕರ್‌, ಪ್ರಧಾನ ಕಾರ್ಯದರ್ಶಿ ನಟರಾಜು, ಕಬ್ಬಾಳೇಗೌಡ, ದಾನಿಗಳಾದ ಸುಹಾಸ್‌, ರಾಮಕೃಷ್ಣ, ಒಕ್ಕೂಟದ ನಾಗೇಶ್‌, ಸಂತುರಾಮ್‌ ರಾವ್‌, ಸಿದ್ದಯ್ಯ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು