ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಕೈಗೆ ಅಧಿಕಾರ ನೀಡುವುದೇ ಪ್ರಜಾಕೀಯ: ಉಪೇಂದ್ರ

ಅಭ್ಯರ್ಥಿ ಪರ ಪ್ರಚಾರ; ಪಕ್ಷದ ಪರಿಕಲ್ಪನೆಯ ವಿವರಣೆ
Last Updated 7 ಏಪ್ರಿಲ್ 2019, 14:31 IST
ಅಕ್ಷರ ಗಾತ್ರ

ರಾಮನಗರ: ‘ಜನಸೇವಕರನ್ನು ಆರಿಸಿ ಕಳುಹಿಸುವ ಮೂಲಕ ಜನರ ಕೈಗೆ ಅಧಿಕಾರ ನೀಡುವುದೇ ಪ್ರಜಾಕೀಯ ಪಕ್ಷದ ಧ್ಯೇಯವಾಗಿದೆ’ ಎಂದು ಉತ್ತಮ ಪ್ರಜಾಕೀಯ ಪಾರ್ಟಿಯ ಸಂಸ್ಥಾಪಕ ಉಪೇಂದ್ರ ತಿಳಿಸಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಬ್ರಿಟಿಷರು ದೇಶ ಬಿಟ್ಟು ತೊಲಗಿದರು. ಅವರ ಜಾಗದಲ್ಲಿ ಇಂದು ರಾಜಕಾರಣಿಗಳು ಬಂದು ಕುಳಿತಿದ್ದಾರೆ. ಎಲ್ಲಿಯವರೆಗೆ ಹಣ, ತೋಳ್ಬಲಗಳ ಮಾತು ನಡೆಯುವುದೋ ಅಲ್ಲಿಯವರೆಗೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ನಿಜವಾದ ಶಕ್ತಿ ಇರುವುದಿಲ್ಲ. ಆ ಮನಸ್ಥಿತಿಯನ್ನು ತೊಡೆದು ಹಾಕಿ, ಸಕಾರಾತ್ಮಕ ಆಲೋಚನೆಯನ್ನು ಜನರಲ್ಲಿ ಬೆಳೆಸುವ ಸಲುವಾಗಿಯೇ ಪಕ್ಷ ಸ್ಥಾಪಿಸಿದ್ದೇನೆ. ಜನರು ಬದಲಾದರೆ ಸಮಾಜದ ಬದಲಾವಣೆ ಖಂಡಿತ’ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.

‘ಪ್ರಜಾಕೀಯ ಕಲ್ಪನೆಯಲ್ಲಿ ಜನಪ್ರತಿನಿಧಿಗಳಾಗುವವರು ಜನರ ಸೇವಕರಾಗಿರುತ್ತಾರೆ. ಇಲ್ಲಿ ಜನರು ತಮ್ಮ ಜನಪ್ರತಿನಿಧಿಯನ್ನು ಪ್ರಶ್ನಿಸಲು ಅವಕಾಶ ಇದೆ. ಅದಕ್ಕಾಗಿ ಜನಸಾಮಾನ್ಯರನ್ನೇ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಲಾಗಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿಯೂ ನಮ್ಮ ಅಭ್ಯರ್ಥಿಗಳು ಸ್ಪರ್ಧೆಯಲ್ಲಿ ಇದ್ದಾರೆ. ನಾವು ಕೋಟಿಗಟ್ಟಲೆ ಹಣ ಖರ್ಚು ಮಾಡಿ ಚುನಾವಣೆ ಎದುರಿಸುವವರಲ್ಲ. ಹೀಗಾಗಿ ನಮಗೆ ಸೋಲು–ಗೆಲುವಿನ ಚಿಂತೆಯಿಲ್ಲ. 200 ಮತ ಬಂದರೂ ಅಷ್ಟು ಜನರ ಮನಸ್ಸನ್ನು ನಾವು ಗೆದ್ದಿದ್ದೇವೆ ಎಂದು ಖುಷಿ ಪಡುತ್ತೇವೆ’ ಎಂದರು.

ಪ್ರಣಾಳಿಕೆ ಇಲ್ಲ: ‘ಜನರ ಬೇಡಿಕೆಗಳಷ್ಟೂ ನಮ್ಮ ಪ್ರಣಾಳಿಕೆಯೇ ಆಗಿದೆ. ಕೇವಲ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಿಲ್ಲ. ಅಧಿಕಾರ ಸಿಕ್ಕರೆ ಐದು ವರ್ಷ ಕಾಲ ಎಲ್ಲವನ್ನೂ ಅನುಷ್ಠಾನಗೊಳಿಸುತ್ತೇವೆ. ಜನರೇ ರಾಜರಾಗಿ ಸೇವಕರನ್ನು ಆಯ್ಕೆ ಮಾಡಿಕೊಳ್ಳಬೇಕಾದರೆ ಪ್ರಜಾಕೀಯ ಬೆಂಬಲಿಸಬೇಕು. ಜನರೇ ಸೇವಕರಾಗಬೇಕಾದರೆ, ಇಂದಿನ ಪಕ್ಷಗಳನ್ನೇ ಆಯ್ಕೆ ಮಾಡಿಕೊಳ್ಳಲಿ’ ಎಂದರು.

‘ನನ್ನ ಸಿದ್ಧಾಂತಗಳ ಜೊತೆ ಎಂದಿಗೂ ರಾಜಿ ಆಗಲಾರೆ. ಇಂದೊಮ್ಮೆ ಪಕ್ಷ ಕಟ್ಟಿ ಅದೇ ಕಾರಣಕ್ಕೆ ಹೊರ ಬಂದಿದ್ದೇನೆ. ಕೊನೆಯವರೆಗೂ ಪ್ರಜೆಗಳ ಪರವಾದ ರಾಜಕೀಯ ಮಾಡುತ್ತಲೇ ಇರುತ್ತೇನೆ. ಗೆದ್ದರೆ ತಲೆ ತಗ್ಗಿಸಿ ಕೆಲಸ ಮಾಡುತ್ತೇವೆ. ಸೋತರೆ ತಲೆ ಎತ್ತಿ ಓಡಾಡುತ್ತೇವೆ’ ಎಂದರು.

‘ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಪಾಲ್‌ ವ್ಯವಸ್ಥೆ ಬೇಕು ಎನ್ನುತ್ತಿದ್ದೇವೆ. ಅದೇ ಲೋಕಪಾಲ್‌ ಅಧಿಕಾರಿಯೇ ಭ್ರಷ್ಟಾಚಾರ ಮಾಡುವುದಿಲ್ಲ ಎಂದು ಏನು ಗ್ಯಾರಂಟಿ’ ಎಂದು ಅವರು ಪ್ರಶ್ನಿಸಿದರು. ‘ಪ್ರಜಾಕೀಯದ ಮೂಲಕ ಜನರೇ ಅಧಿಕಾರ ನಡೆಸಿ ಭ್ರಷ್ಟಾಚಾರವನ್ನು ಕೊನೆಗೊಳಿಸಬೇಕು’ ಎಂದರು.

ಪಕ್ಷದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಮಂಜುನಾಥ್‌ ಮಾತನಾಡಿ ‘ಉಪೇಂದ್ರ ಅವರ ಹೊಸ ರಾಜಕೀಯ ಪರಿಕಲ್ಪನೆಯಿಂದ ಪ್ರೇರಣೆಗೊಂಡು ಅಭ್ಯರ್ಥಿಯಾಗಿದ್ದೇನೆ. ಸರ್ಕಾರಿ ಪ್ರತಿನಿಧಿಯಾಗಿ ಜನರ ಸೇವೆ ಮಾಡಲು ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು.

ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯಕ್ಕೆ
‘ಸದ್ಯ ಪಕ್ಷದ 28 ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೇನೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಯೋಚನೆ ಇದೆ’ ಎಂದು ಉಪೇಂದ್ರ ಹೇಳಿದರು.

‘ದಶಕಗಳ ಹಿಂದೆ ಸಿನಿಮಾಗೆ ಬಂದಾಗಲೇ ರಾಜಕೀಯಕ್ಕೆ ಬರಬೇಕು ಎಂದುಕೊಂಡಿದ್ದೆ. ಈಗಲೂ ವಿವಿಧ ಪಕ್ಷಗಳ ಮುಖಂಡರು ಸಂಪರ್ಕದಲ್ಲಿ ಇದ್ದಾರೆ. ಪ್ರಜಾಕೀಯ ಪರಿಕಲ್ಪನೆ ಕುರಿತು ಮೊದಲು ಅವರಿಗೇ ಮನವರಿಕೆ ಮಾಡಿಕೊಟ್ಟೆ. ಆದರೆ ಯಾರೂ ಕಾರ್ಯರೂಪಕ್ಕೆ ತರುವ ಧೈರ್ಯ ತೋರಲಿಲ್ಲ. ಹೀಗಾಗಿ ನಾನೇ ಪಕ್ಷ ಕಟ್ಟಿದ್ದೇನೆ’ ಎಂದರು.

ಅಭಿಮಾನಿಗಳ ಜೊತೆ ಸೆಲ್ಫಿ
ತಮ್ಮ ನೆಚ್ಚಿನ ನಟನ ಜೊತೆ ಸೆಲ್ಫಿ ಪಡೆಯಲು ಅಭಿಮಾನಿಗಳು ಮುಗಿಬಿದ್ದರು. ತಾಳ್ಮೆಯಿಂದಲೇ ಎಲ್ಲರ ಜೊತೆ ಪೋಸು ಕೊಟ್ಟ ಉಪೇಂದ್ರ ಕೆಲವರಿಗೆ ತಾವೇ ಸೆಲ್ಫಿ ತೆಗೆದುಕೊಟ್ಟರು. ಇಪ್ಪತ್ತು ನಿಮಿಷಕ್ಕೂ ಹೆಚ್ಚು ಕಾಲ ಅವರು ಅಭಿಮಾನಿಗಳ ಜೊತೆ ಸಮಯ ಕಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT