ಶನಿವಾರ, ಫೆಬ್ರವರಿ 29, 2020
19 °C
‘ಪ್ರಜಾವಾಣಿ’ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್‌. ಅರ್ಚನಾ ಅವರೊಂದಿಗೆ ಫೋನ್‌ ಇನ್‌ ಕಾರ್ಯಕ್ರಮ

ರಾಮನಗರ ಜಿಲ್ಲಾಧಿಕಾರಿ ಫೋನ್‌ಇನ್‌| ಹರಿದುಬಂದವು ಜನರ ದೂರು: ಪರಿಹಾರದ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ನಮ್ಮೂರಿನ ಕೆರೆ ಒತ್ತುವರಿ ಆಗಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಪಹಣಿಯಲ್ಲಿ ಸರ್ಕಾರಿ ಪಡ ಎಂದು ನೋಂದಣಿ ಆಗಿರುವ ಕಾರಣ ನಮ್ಮ ಜಮೀನು ಮಾರಾಟ ಆಗುತ್ತಿಲ್ಲ....ಚನ್ನಪಟ್ಟಣದಲ್ಲಿ ಕಸ ವಿಲೇವಾರಿಯಾಗದೇ ಜನರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದೇವೆ....

ಹೀಗೆ ಜಿಲ್ಲೆಯ ನಾನಾ ಭಾಗದ ಸಮಸ್ಯೆಗಳ ಕುರಿತು ಜನ ಸತತವಾಗಿ ಕರೆ ಮಾಡಿ ವಿವರಿಸುತ್ತಲೇ ಹೋದರು. ‘ಪ್ರಜಾವಾಣಿ’ ಕಚೇರಿಯಲ್ಲಿ ಗುರುವಾರ ರಾಮನಗರ ಜಿಲ್ಲಾಧಿಕಾರಿ ಡಾ. ಎಂ.ಎಸ್. ಅರ್ಚನಾ ಅವರೊಂದಿಗೆ ನಡೆದ ಫೋನ್‌ ಇನ್‌ ಕಾರ್ಯಕ್ರಮವು ಸಾರ್ವಜನಿಕರ ದೂರು–ದುಮ್ಮಾನಗಳಿಗೆ ವೇದಿಕೆಯಾಯಿತು.

ಬೆಳಿಗ್ಗೆ 10ಕ್ಕೆ ಸರಿಯಾಗಿ ಫೋನ್ ಇನ್‌ ಆರಂಭಗೊಂಡಿದ್ದು, 11ರವರೆಗೆ ನಿರಂತರವಾಗಿ ದೂರವಾಣಿ ರಿಂಗಣಿಸುತಿತ್ತು. ಮಧ್ಯೆ ವಿರಾಮಕ್ಕೆ ಅವಕಾಶವೂ ಸಿಗದಂತೆ ಜಿಲ್ಲಾಧಿಕಾರಿ ಜನರ ದೂರುಗಳಿಗೆ ಉತ್ತರಿಸಿದರು. ಪ್ರತಿಯೊಬ್ಬರ ಸಮಸ್ಯೆಗಳನ್ನು ಸಾವಧಾನವಾಗಿ ಆಲಿಸಿ, ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಅದಕ್ಕೆ ಪರಿಹಾರ ಒದಗಿಸುವ ಭರವಸೆ ನೀಡಿದರು. ಸಮಯ ಮುಗಿದರೂ ಕರೆಗಳು ಬರುತ್ತಲೇ ಹೋದವು. ಜಿಲ್ಲಾಧಿಕಾರಿಗಳು ಮತ್ತೊಂದು ಕಾರ್ಯಕ್ರಮಕ್ಕೆ ಹೋಗಬೇಕಾದ ಕಾರಣ ನಿಗದಿತ ಸಮಯಕ್ಕೆ ಫೋನ್‌ ಇನ್‌ ಮುಕ್ತಾಯವಾಯಿತು.  ಫೋನ್‌ ಕಾರ್ಯಕ್ರಮದ ಪ್ರಶ್ನೋತ್ತರಗಳ ವಿವರ ಇಂತಿದೆ.

ಶಿವಕುಮಾರ್/ನಂದೀಶ್, ತಟ್ಟೆಕೆರೆ, ಕನಕಪುರ ತಾಲ್ಲೂಕು: ಗ್ರಾಮದಲ್ಲಿನ 50 ಕುಟುಂಬಗಳ ರೈತರ ಜಮೀನು ಸರ್ಕಾರಿ ಪಡ ಎಂದು ನಮೂದಾಗಿದೆ. ಇದರಿಂದ ನಮಗೆ ಯಾವುದೇ ನೆರವು ಸಿಗುತ್ತಿಲ್ಲ. 1924ರಿಂದಲೂ ಜಮೀನು ಉಳುಮೆ ಮಾಡುತ್ತಿರುವುದಕ್ಕೆ ದಾಖಲೆಗಳಿವೆ. ಪಡ ಆಗಿರುವ ಜಮೀನನ್ನು ಬಿಡುಗಡೆಗೊಳಿಸಿಕೊಡಿ.

ಜಿಲ್ಲಾಧಿಕಾರಿ: ಜಮೀನು ಪಡ ಎಂದಿದ್ದರೆ ಮಾರುವುದಕ್ಕೆ ಆಗುವುದಿಲ್ಲ. ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸಲು ಅರ್ಜಿ ಆಹ್ವಾನಿಸಿತ್ತು. ಮೂರು ವರ್ಷ ನಿರಂತರವಾಗಿ ಉಳುಮೆ ಮಾಡದಿದ್ದರೆ ಅಥವಾ ಭೂ ಕಂದಾಯವನ್ನು ಕಟ್ಟದಿದ್ದರೆ ಜಮೀನು ಪಡ ಆಗುತ್ತದೆ. ನೀವು ಕನಕಪುರ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿ, ನಂತರ ನನ್ನ ಮೊಬೈಲ್ ಸಂಖ್ಯೆಗೆ ವಾಟ್ಸ್ ಪ್ ಕಳಿಸಿ.

ಯಶೋಧಾ ವೇಣುಗೋಪಾಲ್: ನಮ್ಮ ಬಡಾವಣೆಯಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಿಲ್ಲ. ಎಇಇ ಪ್ರಸನ್ನಕುಮಾರ್ ಅವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

ಜಿಲ್ಲಾಧಿಕಾರಿ : ಎಂಜಿನಿಯರ್‌ಗೆ ಸೂಚಿಸಿ ನಿಮ್ಮ ಸಮಸ್ಯೆ ಬಗೆಹರಿಸಲು ಹೇಳುತ್ತೇನೆ.

ರಂಜನ್ ಕುಮಾರ್, ರಾಮನಗರ: ಜಿಲ್ಲಾ ಆಸ್ಪತ್ರೆ ಅವ್ಯವಸ್ಥೆಯಿಂದ ಕೂಡಿದೆ. ಗ್ರೂಪ್ ಡಿ ಅವರಿಗೆ ಸಂಬಂಧಿಸಿದ ಟೆಂಡರ್ ಅನ್ನು ತಮಗೆ ಬೇಕಾದವರಿಗೆ ನೀಡಲಾಗಿದೆ. ಇ–ಆಸ್ಪತ್ರೆಯಾಗಿದ್ದರೂ ಯಾವುದೇ ಮಾಹಿತಿ ಸಿಗುವುದಿಲ್ಲ. ಆಸ್ಪತ್ರೆಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿದರೆ ಜನರಿಗೆ ಅನಕೂಲವಾಗುತ್ತದೆ.

ಜಿಲ್ಲಾಧಿಕಾರಿ: ಜಿಲ್ಲಾಧಿಕಾರಿ ಕಚೇರಿಗೆ ಬಂದು ಮಾಹಿತಿ ಕೊಡಿ. ಜಿಲ್ಲಾ ಆಸ್ಪತ್ರೆಯಲ್ಲಿ ಉಂಟಾಗಿರುವ ಅವ್ಯವಸ್ಥೆಯನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು.

ಪ್ರತಾಪ್, ಮೋಹನ್, ಮಾಯಗಾನಹಳ್ಳಿ: ಗ್ರಾಮದಲ್ಲಿನ ಕಟ್ಟೆಯನ್ನು ಒತ್ತುವರಿ ಮಾಡಲಾಗಿದೆ. ಮಾಯಗಾನಹಳ್ಳಿಯಿಂದ ಸುಗ್ಗನಹಳ್ಳಿ, ಬೆಜ್ಜರಹಳ್ಳಿ ಕಟ್ಟೆಗೆ ಹೋಗುವ ರಸ್ತೆ ಕಿರಿದಾಗಿದ್ದು, ಜನರಿಗೆ ಓಡಾಡಲು ತೊಂದರೆಯಾಗುತ್ತಿದೆ. ಬೆಂಗಳೂರಿನಿಂದ ಬರುವ ಪ್ರವಾಸಿಗರು ಮಂಚನಬೆಲೆಗೆ ಹೋಗಲು ಇದೇ ರಸ್ತೆಯನ್ನು ಬಳಸುವುದರಿಂದ ಸಮಸ್ಯೆ ಉಂಟಾಗಿದೆ. ರಸ್ತೆ ವಿಸ್ತರಣೆ ಮಾಡಿ.

ಜಿಲ್ಲಾಧಿಕಾರಿ: ಕಟ್ಟೆ ಒತ್ತುವರಿ ತೆರವಿಗೆ ಸೂಚಿಸುತ್ತೇನೆ. ರಸ್ತೆ ವಿಸ್ತರಣೆ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಯೋಜನೆ ರೂಪಿಸಲಾಗುವುದು.

ಸಂತೋಷ್, ಮನು ಅರಸ್‌, ರಾಮನಗರ: ರಾಮನಗರದಲ್ಲಿ ಮೈಸೂರು ಕಡೆಗೆ ಹೋಗುವ ಕಡೆ ಪ್ರಯಾಣಿಕರ ತಂಗುದಾಣವಿಲ್ಲ. ಅಲ್ಲೇ ಇರುವ ಲಾರಿ ಸ್ಟ್ಯಾಂಡ್ ಬಳಿ ಶೆಲ್ಟರ್ ನಿರ್ಮಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಜತೆಗೆ ಶೌಚಾಲಯವನ್ನು ನಿರ್ಮಿಸಬೇಕು.

ಜಿಲ್ಲಾಧಿಕಾರಿ: ಮೈಸೂರು ಕಡೆಗೆ ಹೋಗುವ ಭಾಗದಲ್ಲಿ ನಿಲ್ದಾಣ ನಿರ್ಮಾಣಕ್ಕೆ ಪ್ರಯತ್ನಿಸಲಾಗುತ್ತಿದೆ. ಸೂಕ್ತ ಜಮೀನು ಸಿಕ್ಕಲ್ಲಿ ಕ್ರಮ ಕೈಗೊಳ್ಳುತ್ತೇವೆ. ತಾತ್ಕಾಲಿಕ ಶೆಲ್ಟರ್‌ ನಿರ್ಮಾಣಕ್ಕೆ ಪ್ರಯತ್ನಿಸುತ್ತೇವೆ.

ಸಿಂಗ್ರಯ್ಯ, ಕಾಡುಮಾರನಹಳ್ಳಿ, ಕುದೂರು: ಇಲ್ಲಿನ ಸರ್ವೆ ಸಂಖ್ಯೆ –5 ಸೇರಿದಂತೆ ಕೆಲವು ರೈತರ ಜಮೀನಿನ ಪಹಣಿಯಲ್ಲಿ ಪಿ–1 ಎಂದು ಬಂದಿದ್ದು, ಖಾತೆ ಬದಲಾವಣೆಗೆ ತೊಂದರೆ ಆಗಿದೆ. ಅದನ್ನು ತಿದ್ದುಪಡಿ ಮಾಡಿಕೊಡಿ

ಜಿಲ್ಲಾಧಿಕಾರಿ: ಈ ಸಂಬಂಧ ಉಪ ವಿಭಾಗಾಧಿಕಾರಿ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ.

ಅರವಿಂದ, ಕೊಳ್ಳಿಗನಹಳ್ಳಿ: ಹುಚ್ಚಮ್ಮನದೊಡ್ಡಿಯಿಂದ ಕೊಳ್ಳಿಗನಹಳ್ಳಿಗೆ ನಿರ್ಮಿಸಲಾಗಿರುವ ಸೇತುವೆ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಉದ್ಘಾಟನೆ ಮಾಡಬೇಕು. ಗ್ರಾಮದಲ್ಲಿನ ಅಕ್ರಮ ಮದ್ಯ, ಮರಳು ಗಣಿಗಾರಿಕೆ ವಿರುದ್ಧ ಕ್ರಮ ಜರುಗಿಸಬೇಕು.

ಜಿಲ್ಲಾಧಿಕಾರಿ: ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇನೆ. ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕೆ ದಾಳಿ ಸಂಘಟಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುತ್ತೇನೆ.

ಗೋವಿಂದರಾಜು, ಕುದೂರು: ಕುದೂರಿನಿಂದ ಬೆಂಗಳೂರಿಗೆ ನಿತ್ಯ ಬೆಳಗ್ಗೆ ನೂರಾರು ವಿದ್ಯಾರ್ಥಿಗಳು ಓಡಾಡುತ್ತಾರೆ. ಸೂಕ್ತ ಬಸ್‌ ಸೌಕರ್ಯ. ಬೆಳಿಗ್ಗೆ 7.30ರಿಂದ 8.30ರವರೆಗೆ ಕೆಎಸ್‌ಆರ್‌ಟಿಸಿ ಬಸ್ ಸೌಕರ್ಯ ಕಲ್ಪಿಸಿ. ವಿನಾಯಕನಗರದಲ್ಲಿ ಶಾಲೆ ಬಳಿಯೇ ಅಕ್ರಮವಾಗಿ ಬಾರ್ ಗಳನ್ನು ನಡೆಸಲಾಗುತ್ತಿದೆ. ಇವುಗಳನ್ನು ಸ್ಥಳಾಂತರಿಸಿ.

ಜಿಲ್ಲಾಧಿಕಾರಿ: ಬಸ್‌ ಸೌಲಭ್ಯ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಜನವಸತಿ ಪ್ರದೇಶದಲ್ಲಿ ಬಾರ್ ಗಳಿದ್ದರೆ ತೆರವುಗೊಳಿಸಲಾಗುವುದು.

ಮಹದೇವ, ವೀರಾಪುರ: ಗ್ರಾಮದ ಕಾಲೊನಿಗಳ ರಸ್ತೆಯನ್ನು ಅಭಿವೃದ್ಧಿಗೊಳಿಸಿ, ವಿದ್ಯುತ್‌ಶಕ್ತಿ ಯನ್ನು ದಿನದ 24 ಗಂಟೆಯೂ ನೀಡಿ.

ಜಿಲ್ಲಾಧಿಕಾರಿ: ವೀರಾಪುರದ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಈಗಾಗಲೇ ಕ್ರಮಕೈಗೊಳ್ಳಾಗಿದೆ. ವಿದ್ಯುತ್ ಪೂರೈಕೆ ಸಂಬಂಧ ಬೆಸ್ಕಾಂ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ

ಕೂಟಗಲ್ ಕೃಷ್ಣಮೂರ್ತಿ, ರಾಮನಗರ: ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಿದೆ. ಸಾರ್ವಜನಿಕ ಹಾಸ್ಟೆಲ್‌ಗಳಿಗೆ ಮೂಲ ಸೌಕರ್ಯ ಇಲ್ಲ. ಅಂಗಡಿಗಳಲ್ಲಿ ಕಳಪೆ ಗುಣಮಟ್ಟದ ತಂಪು ಪಾನೀಯ ಮಾರಲಾಗುತ್ತಿದೆ. ರಾಮನಗರ ನಗರಸಭೆ ಆಡಳಿತದಲ್ಲಿ ಅವ್ಯವಸ್ಥೆ ಹೆಚ್ಚಿದ್ದು, ಸರಿಪಡಿಸಿ

ಜಿಲ್ಲಾಧಿಕಾರಿ: ಅಕ್ರಮ ಮದ್ಯ ಮಾರಾಟ ನಿಯಂತ್ರಣಕ್ಕೆ ಅಧಿಕಾರಿಗಳು ಈಗಾಗಲೇ ಕ್ರಮ ಕೈಗೊಂಡಿದ್ದಾರೆ. ಹಾಸ್ಟೆಲ್‌ಗೆ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ನಗರಸಭೆಯಲ್ಲಿನ ಅವ್ಯವಸ್ಥೆ ಬಗ್ಗೆ ಪರಿಶೀಲಿಸುತ್ತೇನೆ

ರಹಮತ್ ಆಲಿ, ರೇಣಕಾಪ್ರಸಾದ್, ಚನ್ನಪಟ್ಟಣ, ಪ್ರಕಾಶ್, ಸಾತನೂರು: ಪಟ್ಟಣದಲ್ಲಿ ಕಸದ ಸಮಸ್ಯೆ ಹೆಚ್ಚಾಗಿದೆ. ರಸ್ತೆಯಲ್ಲೇ ಕಸ ಹಾಕಲಾಗುತ್ತಿದೆ. ಕೋಳಿ ತ್ಯಾಜ್ಯವನ್ನೂ ರಸ್ತೆಯಲ್ಲೇ ಬಿಸಾಡಲಾಗುತ್ತಿದೆ. ತ್ಯಾಜ್ಯ ಸಂಗ್ರಹ ಕಾರ್ಯ ಸಮರ್ಪಕವಾಗಿ ನಡೆದಿಲ್ಲ.

ಜಿಲ್ಲಾಧಿಕಾರಿ: ಕಸ ವಿಲೇವಾರಿಗೆ ಜಾಗದ ಸಮಸ್ಯೆ ಇದೆ. ಚನ್ನಪಟ್ಟಣದ ನಗರಸಭೆಯ ಆಯುಕ್ತರಿಗೆ ಸೂಚಿಸಿ ಕಸವನ್ನು ನಿಯಮಿತವಾಗಿ ಸಂಗ್ರಹಿಸಿ ವಿಲೇವಾರಿ ಮಾಡುವಂತೆ ತಿಳಿಸುತ್ತೇನೆ.

ಇರುಳಿಗರದೊಡ್ಡಿ, ಕೂಟಗಲ್‌: ಅರಣ್ಯವಾಸಿಗಳಾದ ನಮಗೆ ಈವರೆಗೆ ಹಕ್ಕು ಪತ್ರಗಳನ್ನು ನೀಡಿಲ್ಲ. ಕಾಡಿನಲ್ಲಿರುವ ಕಿರು ಉತ್ಪನ್ನಗಳನ್ನು ಸಂಗ್ರಹಿಸಲು ಅರಣ್ಯ ಇಲಾಖೆ ಬಿಡುತ್ತಿಲ್ಲ.

ಜಿಲ್ಲಾಧಿಕಾರಿ: ಗ್ರಾಮ ಸಮಿತಿಯಿಂದ ಶಿಫಾರಸು ಅಂಗೀಕೃತ ಆಗಿದ್ದರೆ, ಹಕ್ಕುಪತ್ರ ವಿತರಣೆಗೆ ಪರಿಶೀಲಿಸುತ್ತೇವೆ. ಎಫ್‌ಆರ್ ಸಿ ಇದ್ದರೆ ಮಾತ್ರ ಕಿರು ಉತ್ಪನ್ನಗಳನ್ನು ಸಂಗ್ರಹಿಸಲು ಅನುಮತಿ ನೀಡಲಾಗುತ್ತದೆ.

ಕೆಂಪೇಗೌಡ, ಮಾದಿಗೊಂಡನಹಳ್ಳಿ: ಸಾಮಾಜಿಕ ಭದ್ರತೆಯ ಮಾಸಾಶನಗಳಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಿ. 65 ವರ್ಷ ಆಗಿರುವ ವಿಧವೆಯರಿಗೂ ಈಗಲೂ ₨600 ಮಾಸಾಶನ ಬರುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸುವಂತೆ ತಾಲ್ಲೂಕು ಆಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.

ಜಿಲ್ಲಾಧಿಕಾರಿ: ವಿಧವೆಯರ ವಯಸ್ಸು 60 ದಾಟಿದಲ್ಲಿ ಅವರಿಗೆ ವೃದ್ದಾಪ್ಯ ವೇತನದ ಸಮಾನವಾಗಿ ಮಾಸಾಶನ ಸಿಗಲಿದೆ. ಈ ಬಗ್ಗೆ ಕ್ರಮಕ್ಕೆ ಉಪ ವಿಭಾಗಾಧಿಕಾರಿಗೆ ಸೂಚಿಸುತ್ತೇನೆ.

ಚನ್ನಪ್ಪ, ಚನ್ನಪಟ್ಟಣ: ವಂದಾರಗುಪ್ಪೆ ಗ್ರಾ.ಪಂ. ನಿವಾಸಿಗಳಿಗೆ ಚನ್ನಪಟ್ಟಣ ನಗರಸಭೆಯಲ್ಲಿ ಇ –ಖಾತೆ ಮಾಡಿಕೊಡುತ್ತಿಲ್ಲ. ಅರ್ಜಿ ಸಲ್ಲಿಸಿ ಐದು ವರ್ಷ ಕಳೆದಿದೆ. ಕೂಡಲೇ ಕ್ರಮ ವಹಿಸಿ

ಜಿಲ್ಲಾಧಿಕಾರಿ: ನಗರಸಭೆ ಹಾಗೂ ಗ್ರಾ.ಪಂ. ನಡುವೆ ಇ–ಖಾತೆಗೆ ಸಂಬಂಧಿಸಿ ಕೆಲವು ವ್ಯತ್ಯಾಸ ಇರುವ ಕಾರಣ ಈ ತೊಂದರೆ ಆಗಿದೆ. ನಾಲ್ಕು ಗ್ರಾಮಗಳಲ್ಲಿ ಈ ಸಮಸ್ಯೆ ಇದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಶೀಘ್ರದಲ್ಲೇ ಪರಿಹಾರ ಸಿಗುತ್ತದೆ.

ಸಿ.ರವಿ/ಎಸ್‌. ರವಿ, ಪಾಲಬೋವಿದೊಡ್ಡಿ: ಹಳ್ಳಿಮಾಳ–ಪಾಲಬೋವಿದೊಡ್ಡಿ ನಡುವೆ ಇರುವ ಸ್ಮಶಾನಕ್ಕೆ ನಮ್ಮೂರಿನ ಕಡೆಯಿಂದ ಓಡಾಡಲು ದಾರಿ ಇಲ್ಲ. ಇದರಿಂದ ಎರಡು ಕಿ.ಮೀ. ಬಳಸಿ ಬರಬೇಕು. ಆದರೆ ನಕಾಶೆಯಲ್ಲಿ ದಾರಿ ಎಂದಿದೆ. ಓಡಾಡಲು ಅನುಕೂಲ ಮಾಡಿಕೊಡಿ

ಜಿಲ್ಲಾಧಿಕಾರಿ: ನಕಾಶೆಯಲ್ಲಿ ರಸ್ತೆಯಿದ್ದರೆ ತಹಶೀಲ್ದಾರ್ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸಲಾಗುವುದು.

ಭರತ್ ರಾಜ್, ಜಕ್ಕನಹಳ್ಳಿ, ಕೈಲಾಂಚ: ಗ್ರಾಮದ ವ್ಯಾಪ್ತಿಯಲ್ಲಿ 28 ಎಕರೆಯಷ್ಟು ಸರ್ಕಾರಿ ಜಮೀನಿದ್ದು, ಇದರಲ್ಲಿ ಐದಾರು ಎಕರೆ ಜಮೀನನ್ನು ಒತ್ತುವರಿ ಮಾಡಲಾಗಿದೆ. ಸಂಬಂಧಿಸಿದ ಇಲಾಖೆಗೆ ಸೂಚಿಸಿ ಈ ಜಮೀನನ್ನು ಸರ್ವೆ ಮಾಡಿಸಿ, ತೆರವುಗೊಳಿಸಿ.

ಜಿಲ್ಲಾಧಿಕಾರಿ : ತಹಶೀಲ್ದಾರ್ ಗಮನಕ್ಕೆ ತಂದು ಒತ್ತುವರಿ ತೆರವುಗೊಳಿಸಲಾಗುವುದು.

ಸಂತೋಷ್, ಬಾನಂದೂರು: ಬಾನಂದೂರು ಗ್ರಾಮವನ್ನು ಅಭಿವೃದ್ಧಿಗೊಳಿಸಿ, ಇಲ್ಲಿನ ಕೆರೆ ಒತ್ತುವರಿಯಾಗಿದೆ ತೆರವುಗೊಳಿಸಿ.

ಜಿಲ್ಲಾಧಿಕಾರಿ: ಬಾನಂದೂರು ಗ್ರಾಮದ ಅಭಿವೃದ್ಧಿಗೆ ಸರ್ಕಾರ ₨25 ಕೋಟಿ ಅನುದಾನ ಘೋಷಿಸಿದ್ದು, ಕ್ರಿಯಾಯೋಜನೆ ರೂಪಿಸಲಾಗುತ್ತಿದೆ. ಗ್ರಾಮದ ಕೆರೆ ಕೆರೆಯನ್ನು ಸರ್ವೆ ಮಾಡಿಸಿ, ಒತ್ತುವರಿಯನ್ನು ತೆರವುಗೊಳಿಸಲಾಗುವುದು.

ನವೀನ್, ರಾಮನಗರ: ಲಿಂಗೇಗೌಡನದೊಡ್ಡಿಯಲ್ಲಿ ರಸ್ತೆಯಲ್ಲಿರುವ ಮರಗಳು ವಿದ್ಯುತ್ ಕಂಬಗಳ ಮೇಲೆ ಬೀಳುವಂತಿವೆ. ಈ ಮರಗಳನ್ನು ತೆರುವುಗೊಳಿಸಿ.

ಜಿಲ್ಲಾಧಿಕಾರಿ: ಬೆಸ್ಕಾಂ ಸಿಬ್ಬಂದಿಗೆ ಈ ಸಂಬಂಧ ಸೂಚಿಸಿ, ಒಣಗಿದ ಮರಗಳ ತೆರವಿಗೆ ಕ್ರಮ ಕೈಗೊಳ್ಳುತ್ತೇವೆ.

ಮತೀನ್ ಪಾಷಾ, ನ್ಯೂ ಎಕ್ಸ್‌ಟೆನ್ಶನ್‌, ರಾಮನಗರ: ನಮ್ಮ ಕಾಲೊನಿಯಲ್ಲಿ ಕುಡಿಯಲು ನೀರಿಲ್ಲದೆ ಸಮಸ್ಯೆ ಉಂಟಾಗಿದೆ. ಕಾವೇರಿ ಪೈಪ್ ಲೈನ್ ಇದ್ದರೂ ಪ್ರಯೋಜನವಿಲ್ಲ.

ಜಿಲ್ಲಾಧಿಕಾರಿ: ನಗರಸಭೆಯ ಅಧಿಕಾರಿಗಳ ಗಮನಕ್ಕೆ ತಂದು, ನೀರು ಪೂರೈಕೆಗೆ ಕ್ರಮ ಕೈಗೊಳ್ಳುತ್ತೇವೆ.

ನಾಗರಾಜು, ಸುಗ್ಗನಹಳ್ಳಿ: ಗ್ರಾಮದ ಬಳಿ ಅರ್ಕಾವತಿ ನದಿಗೆ ತ್ಯಾಜ್ಯ ಸುರಿಯಲಾಗುತ್ತಿದೆ. ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ.

ಜಿಲ್ಲಾಧಿಕಾರಿ: ಅರ್ಕಾವತಿ ನದಿಗೆ ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ಸಮಸ್ಯೆ ಬಗೆಹರಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಲಾಗುವುದು.

ನಂಜೇಗೌಡ, ಹಾರೋಹಳ್ಳಿ: ನಾನು ಇಟ್ಟಿಗೆ ಕಾರ್ಖಾನೆ ನಡೆಸುತ್ತಿದ್ದೇನೆ. ನಮ್ಮ ಕಾರ್ಮಿಕರಲ್ಲಿ ಕೆಲವರಿಗೆ ಮುಂಗಡ ಹಣ ಕೊಟ್ಟಿದ್ದೇನೆ. ಆದರೆ ಎನ್‌ಜಿಒ ಸಂಸ್ಥೆಯವರು ನಮ್ಮ ಮೇಲೆ ಕಾರಣವಿಲ್ಲದೆ ಜೀತಪದ್ಧತಿ ಎಂದು ಸುಳ್ಳು ದೂರು ದಾಖಲಿಸುತ್ತಿದ್ದಾರೆ.

ಜಿಲ್ಲಾಧಿಕಾರಿ: ಜೀತಕ್ಕೆ ಇರಿಸಿಕೊಳ್ಳದ ಹೊರತು ನಿಮ್ಮ ಮೇಲೆ ಕ್ರಮ ಕೈಗೊಳ್ಳುವುದಿಲ್ಲ. ದೂರಿನ ಸತ್ಯಾಸತ್ಯತೆ ಪರಿಶೀಲಿಸಿದ ನಂತರವಷ್ಟೇ ಪ್ರಕರಣ ದಾಖಲಿಸಲು ಪೊಲೀಸರಿಗೆ ಸೂಚಿಸುತ್ತೇನೆ

ಶಿವಕುಮಾರ್, ನೆಲಮಲೆ: ರೇವಣಸಿದ್ದೇಶ್ವರ ಬೆಟ್ಟದ ಬಳಿಯ ರಸ್ತೆಯಲ್ಲಿ ಕಣಗಳನ್ನು ಮಾಡುತ್ತಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ವಾಹನ ಸವಾರರು ಪರದಾಡುತ್ತಿದ್ದು, ಅಪಘಾತ ಹೆಚ್ಚಾಗುತ್ತಿದೆ.

ಡಿ.ಸಿ: ಈ ಸಂಬಂಧ ರೈತರಿಗೆ ಈಗಾಗಲೇ ಜಾಗೃತಿ ಮೂಡಿಸಲಾಗುತ್ತಿದೆ. ರಸ್ತೆಯಲ್ಲೇ ಕಣ ಮಾಡುವುದರಿಂದ ದುಷ್ಪರಿಣಾಮಗಳಿದ್ದು, ಅದರ ಬಗ್ಗೆ ತಿಳಿಹೇಳಲಾಗುತ್ತಿದೆ.

ನಂಜಪ್ಪ, ತಾಳವಾಡಿ: ಗ್ರಾಮದಲ್ಲಿನ ಬಸವೇಶ್ವರ ದೇಗುಲಕ್ಕೆ ಎರಡು ವರ್ಷದಿಂದ ಮುಜರಾಯಿ ಇಲಾಖೆ ಅನುದಾನ ನೀಡಿಲ್ಲ. ಬ್ಯಾಂಕ್‌ ಖಾತೆಗೆ ಹಾಕುತ್ತೇವೆ ಎಂದು ಅಧಿಕಾರಿಗಳು ಹೇಳಿದರೂ ಹಣ ಬಂದಿಲ್ಲ. ದೂರು ಕೊಟ್ಟರೂ ಪ್ರಯೋಜನ ಆಗಿಲ್ಲ.

ಜಿಲ್ಲಾಧಿಕಾರಿ: ಇಲಾಖೆಗೆ ಅಧಿಕಾರಿಗಳ ಜೊತೆ ಮಾತನಾಡಿ ಹಣ ಬಿಡುಗಡೆಗೆ ಸೂಚಿಸುತ್ತೇನೆ.


ಕೆರೆಗಳ ಸಂರಕ್ಷಣೆ: ಜನರ ಮನವಿ

ರಾಘವೇಂದ್ರ,ಬಿಡದಿ: ಶೇಷಗಿರಿ ಹಳ್ಳಿ, ಮಂಚನಾಯಕನಹಳ್ಳಿ ಕೆರೆಗಳು ಒತ್ತುವರಿಯಾಗಿವೆ. ಒತ್ತುವರಿ ತೆರವುಗೊಳಿಸಿ ಸರ್ಕಾರಿ ಆಸ್ತಿ ರಕ್ಷಿಸಿ.

ಜಿಲ್ಲಾಧಿಕಾರಿ: ಕೆರೆಗಳನ್ನು ಸರ್ವೆ ಮಾಡಿಸಿ ಒತ್ತುವರಿ ತೆರವುಗೊಳಿಸಲಾಗುವುದು.

ಶಿವರಾಮಯ್ಯ, ಅರೇಹಳ್ಳಿ, ಕೂಟಗಲ್ ಹೋಬಳಿ: ಗ್ರಾಮದಲ್ಲಿ 20 ಎಕರೆ ವಿಸ್ತೀರ್ಣದ ಕೆರೆಯಿದೆ. ಕೆರೆ ತುಂಬಿ 15 ವರ್ಷಗಳಾಗಿದೆ. ಕೆರೆ ತುಂಬಿಸುವ ಯೋಜನೆ ಜಾರಿಯಾಗಿದ್ದರೂ ಪ್ರಯೋಜನವಾಗಿಲ್ಲ. ಇದರಿಂದ ಟ್ಯಾಂಕರ್ ಗಳಲ್ಲಿ ನೀರು ತರುವ ಪರಿಸ್ಥಿತಿ ಇದೆ.

ಜಿಲ್ಲಾಧಿಕಾರಿ: ಕೆರೆ ಪುನಶ್ಚೇತನ, ನೀರು ತುಂಬಿಸುವ ಯೋಜನೆ ಈಗಾಗಲೇ ಅನುಮೋದನೆ ಆಗಿದ್ದಲ್ಲಿ ಸಂಬಂಧಿಸಿದ ಅಧಿಕಾರಿ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ.

ರುದ್ರದೇವರು, ರಾಮನಗರ: ರಾಮನಗರದ ರಂಗರಾಯರದೊಡ್ಡಿ ಕೆರೆ, ಬೋಳಪ್ಪನಹಳ್ಳಿ ಕೆರೆ, ಚನ್ನಮಾನಹಳ್ಳಿ ಕೆರೆ ಸೇರಿದಂತೆ ಹಲವು ಕೆರೆಗಳು ಒತ್ತುವರಿಯಾಗಿವೆ. ಅವುಗಳನ್ನು ರಕ್ಷಿಸಿ

ಜಿಲ್ಲಾಧಿಕಾರಿ: ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ರಂಗರಾಯರೊಡ್ಡಿ ಕೆರೆ ಸರ್ವೆ ನಡೆಸಲಾಗಿದ್ದು, ಯಾವುದೇ ಒತ್ತುವರಿ ಕಂಡುಬಂದಿಲ್ಲ. ಉಳಿದ ಕೆರೆಗಳನ್ನೂ ಸರ್ವೆ ಮಾಡಿಸಲಾಗುವುದು

ರವಿಕುಮಾರ್, ಕುತ್ತಿನಗೆರೆ, ಕುದೂರು: ಗ್ರಾಮದ ಕೆರೆ ಒತ್ತುವರಿಯಾಗಿದೆ. ಆರು ಎಕರೆ ವಿಸ್ತೀರ್ಣವಿದ್ದ ಕೆರೆ ಇಂದು ಮೂರು ಎಕರೆಗೆ ಬಂದಿದೆ. ಒತ್ತುವರಿ ತೆರವುಗೊಳಿಸಿ

ಜಿಲ್ಲಾಧಿಕಾರಿ: ಕೆರೆ ಸರ್ವೆ ಮಾಡುವಂತೆ ತಹಶೀಲ್ದಾರ್‌ಗೆ ಸೂಚಿಸುತ್ತೇನೆ. ಒತ್ತುವರಿ ಖಾತ್ರಿಯಾದಲ್ಲಿ ತೆರವುಗೊಳಿಸುತ್ತೇವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)