ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮಕ್ಕಳ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಿ'

ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವಕ್ಕೆ ಚಾಲನೆ
Last Updated 9 ಸೆಪ್ಟೆಂಬರ್ 2019, 13:22 IST
ಅಕ್ಷರ ಗಾತ್ರ

ಮಾಗಡಿ: ‘ದನ ಕಾಯೋರಲ್ಲೂ ಪ್ರತಿಭಾವಂತರಿದ್ದಾರೆ. ಮಕ್ಕಳಲ್ಲಿನ ವಿಶೇಷತೆಯನ್ನು ಗುರುತಿಸಿ ಬೆಂಬಲಿಸಬೇಕು’ ಎಂದು ಶಾಸಕ ಎ.ಮಂಜುನಾಥ ತಿಳಿಸಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದ ‘ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಮಕ್ಕಳಿಗೆ ಈ ನೆಲದ ವಿಶೇಷತೆಯನ್ನು ಕಲಿಸುವ ಮೂಲಕ ಮೂಲಜನಪದ ಕಲೆಗಳನ್ನು ಉಳಿಸಿ, ಬೆಳೆಸಬೇಕು. ಪ್ರತಿಭೆ ಯಾರೋ ಒಬ್ಬರ ಸ್ವತ್ತಲ್ಲ. ಅವಕಾಶ ನೀಡಿದರೆ ಎಲ್ಲರಲ್ಲಿನ ವಿಶೇಷ ಹೊರಬರಲಿದೆ. ಸಾಧಕರ ಸಾಧನೆ ಸಮಾಜ‌ಮುಖಿಯಾಗಿರಬೇಕು. ಆದಿವಾಸಿ ಬುಡಕಟ್ಟು ಇರುಳಿಗ, ಸೋಲಿಗ, ಮೇದ, ಲಂಬಾಣಿ ಸಮುದಾಯದ ಮಕ್ಕಳಲ್ಲಿನ ಜನಪದ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಶೋಷಿತ ಸಮುದಾಯದ ಮಕ್ಕಳಲ್ಲಿನ ಪ್ರತಿಭೆಯನ್ನು ಚಿವುಟದೆ, ತಳಹಂತದಲ್ಲಿ ಗುರುತಿಸಿ, ನೀರೆರೆದು ಪೋಷಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ’ ಎಂದು ಸಲಹೆ ನೀಡಿದರು.

ಮೊಬೈಲ್‌ ಮತ್ತು ಟಿ.ವಿ. ಬಳಕೆ ಕಡಿಮೆ ಮಾಡಿ, ಮಕ್ಕಳಿಗೆ, ಜನಪದ ಆಟಗಳಾದ ಕೋಲಾಟ, ಚಿನ್ನಿದಾಂಡು, ಬುಗರಿ, ಹಗ್ಗಜಗ್ಗಾಟ, ಮರಕೋತಿ ಆಟಗಳನ್ನು ಕಲಿಸಿಕೊಡಬೇಕು. ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಬಗ್ಗೆ ಮತ್ತೊಂದು ಸುತ್ತಿನ ಸಿದ್ಧತಾ ಸಭೆ ಕರೆದು ಚರ್ಚಿಸಲಾಗುವುದು. ಸರ್ವರೂ ಸಹಕರಿಸಬೇಕು ಎಂದು ಹೇಳಿದರು.

ಬಳಕೆ: ‘ಹರ್ತಿ ಹೊನ್ನಸಿದ್ದಯ್ಯ ಅವರು ಸರ್ಕಾರಿ ಪದವಿ ಪೂರ್ವಕಾಲೇಜಿಗೆ ದಾನಮಾಡಿದ್ದ 20 ಎಕರೆ ಭೂಮಿಯನ್ನು ಶೈಕ್ಷಣಿಕೆ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಲಾಗುವುದು’ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಸಿದ್ದೇಶ್ವರ ಪ್ರಾಸ್ತಾವಿಕ ಭಾಷಣ ಮಾಡಿ, ‘ಕಳೆದ ಸಾಲಿನ ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾ ಮಟ್ಟದಲ್ಲಿ ನಮ್ಮ ತಾಲ್ಲೂಕಿನ ಮಕ್ಕಳು ಪ್ರಥಮ ಸ್ಥಾನ ಗಳಿಸಿದ್ದರು. ಯಾವ ಮಗುವನ್ನು ಕಡೆಗಣಿಸಬೇಡಿ. ಎಲ್ಲರಲ್ಲಿನ ವಿಶೇಷತೆಯನ್ನು ಗುರುತಿಸಿ ಬೆಂಬಲಿಸಬೇಕು’ ಎಂದು ಹೇಳಿದರು.

ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಚ್‌.ಲೋಕೇಶ್‌, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಪಿ.ರೇಣುಕಾರಾಧ್ಯ, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಮಾಡಬಾಳ್‌ ವೆಂಕಟೇಶ್‌ ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಗೀತಾ ಗಂಗರಂಗಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯ್ಕ್‌, ಸದಸ್ಯೆ ಸುಗುಣ ಕಾಮರಾಜ್‌, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರತಿನಿಧಿ.ಎಂ.ಕೆಂಪೇಗೌಡ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕ ಸಿ.ಪ್ರಕಾಶ್‌, ಬಿ.ಆರ್‌.ಪಿ ಮಂಜಪ್ಪ ವೇದಿಕೆಯಲ್ಲಿದ್ದರು.

ರಾಜನಪಾಳ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮುಖ್ಯಶಿಕ್ಷಕಿ ಶಾಂತಮ್ಮ ಮಾರ್ಗದರ್ಶನದಲ್ಲಿ ನಡೆಸಿಕೊಟ್ಟ ಅಭಿನಯಗೀತೆ, ದೋಣಕುಪ್ಪೆ ಸಿಎನ್‌ಎಸ್‌ ಪಬ್ಲಿಕ್‌ ಸ್ಕೂಲ್‌ ಮಕ್ಕಳು, ಮುಖ್ಯಶಿಕ್ಷಕ ಧನಂಜಯ ಅವರ ಮಾರ್ಗದರ್ಶನದಲ್ಲಿ ನಡೆಸಿಕೊಟ್ಟ ವೀರಭದ್ರ, ಪಟಕುಣಿತ, ಗಂಗೋನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ನಡೆಸಿಕೊಟ್ಟ ಪ್ರಹ್ಲಾದ ಪರಿಪಾಲನೆ ಪೌರಾಣಿಕ ನಾಟಕ ನೋಡುಗರ ಗಮನ ಸೆಳೆದವು.

ಕೆಂಪೇಗೌಡ, ಮಾನಸ, ವಿದ್ಯಾನಿಧಿ ಶಾಲೆಯ ಮಕ್ಕಳು ನಡೆಸಿಕೊಟ್ಟ ಜವುಳಿ ಕುಣಿತ ಆಕರ್ಷಣೀಯವಾಗಿತ್ತು. ತಾಲ್ಲೂಕಿನ ಬಹುತೇಕ ಶಾಲೆಗಳ ಮಕ್ಕಳು, ಶಿಕ್ಷಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT