ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಕೋವಿಡ್ ಲಸಿಕೆ ಸಂಗ್ರಹಕ್ಕೆ ಸಿದ್ಧತೆ

ಜಿಲ್ಲೆಯಲ್ಲಿ ಲಕ್ಷ ದಾಟಿದ ಪರೀಕ್ಷೆ: ಎರಡಂಕಿಗೆ ಇಳಿದ ಸಕ್ರಿಯ ಪ್ರಕರಣಗಳ ಸಂಖ್ಯೆ
Last Updated 27 ನವೆಂಬರ್ 2020, 15:34 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಕ್ರಮೇಣ ಕಡಿಮೆಯಾಗತೊಡಗಿದೆ. ಮತ್ತೊಂದೆಡೆ, ಕೋವಿಡ್‌ ಲಸಿಕೆ ಸಂಗ್ರಹಕ್ಕೆ ಬೇಕಾದ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಮಾಡಿಕೊಳ್ಳುತ್ತಿದೆ.

ಹೊಸ ವರ್ಷದಲ್ಲಿ ಕೋವಿಡ್‌ ವೈರಾಣುವಿಗೆ ಮದ್ದು ಸಿಗಬಹುದು ಎಂಬ ನಿರೀಕ್ಷೆ ಇದೆ. ಇದೇ ಭರವಸೆಯೊಂದಿಗೆ ಲಸಿಕೆ ಸಂಗ್ರಹಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದೆ. ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಿಡಿದು ಜಿಲ್ಲಾಸ್ಪತ್ರೆವರೆಗೆ ಇದರ ಸಂಗ್ರಹಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೋಲ್ಡ್ ಸ್ಟೋರೇಜ್‌ಗೆ ಬೇಕಾದ ಉಪಕರಣಗಳನ್ನು ಸಿದ್ಧವಾಗಿಟ್ಟುಕೊಳ್ಳಲಾಗಿದೆ.

ಆರೋಗ್ಯ ಸಿಬ್ಬಂದಿಗೆ ಮೊದಲು: ಜಿಲ್ಲೆಯಲ್ಲಿ ಜೀವದ ಹಂಗು ತೊರೆದು ಕೋವಿಡ್ ಪೀಡಿತರ ಆರೈಕೆಯಲ್ಲಿ ತೊಡಗಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಕೊರೊನಾ ಸೈನಿಕರಿಗೆ ಆದ್ಯತೆ ಮೇರೆಗೆ ಲಸಿಕೆ ಸಿಗಲಿದೆ. ವೈದ್ಯರು, ನರ್ಸ್‌‌ಗಳು, ಆರೋಗ್ಯ ಸಹಾಯಕಿಯರು, ಪ್ರಯೋಗಾಲಯ ತಜ್ಞರು, ಆಸ್ಪತ್ರೆಗಳಲ್ಲಿನ ಸ್ವಚ್ಛತಾ ಸಿಬ್ಬಂದಿ, ಆಂಬುಲೆನ್ಸ್‌ಗಳ ವಾಹನ ಚಾಲಕರು.... ಹೀಗೆ ಮೊದಲ ಹಂತದಲ್ಲಿ ಯಾರಿಗೆ ಲಸಿಕೆ ನೀಡಬೇಕು ಎಂಬುದರ ಪಟ್ಟಿ ಸಿದ್ಧವಾಗುತ್ತಿದೆ. ನಂತರದ ಹಂತದಲ್ಲಿ ಆಶಾ ಕಾರ್ಯಕರ್ತೆಯರು, ಪೊಲೀಸರು, ಪೌರ ಕಾರ್ಮಿಕರು ಮೊದಲಾದವರಿಗೆ ಲಸಿಕೆ ನೀಡಲು ಯೋಜಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ
ಆರೋಗ್ಯ ಸಮೀಕ್ಷೆ ನಡೆಸಿದ್ದು, ಸೂಕ್ಷ್ಮ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರ ಪಟ್ಟಿ ಈಗಾಗಲೇ ಲಭ್ಯ ಇದೆ. ಇವರಿಗೂ ಆದ್ಯತೆ ಮೇರೆಗೆ ಲಸಿಕೆ ಸಿಗಲಿದೆ.

ಲಕ್ಷ ದಾಟಿದ ಪರೀಕ್ಷೆ: ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾದವರ ಸಂಖ್ಯೆಯು ಈಗಾಗಲೇ 1 ಲಕ್ಷ ದಾಟಿದೆ. ಪರೀಕ್ಷೆಗಳ ಸಂಖ್ಯೆ ಹೆಚ್ಚಿದ್ದರೂ ಸೋಂಕಿತರ ಪ್ರಮಾಣ ಮಾತ್ರ ಬಹುತೇಕ ತಗ್ಗಿರುವುದು ಸಮಾಧಾನದ ಸಂಗತಿಯಾಗಿದೆ.

ರಾಮನಗರದಲ್ಲಿಯೇ ಕೋವಿಡ್ ಪತ್ತೆ ಪ್ರಯೋಗಾಲಯ ಇದ್ದು, ಇಲ್ಲಿ ಪ್ರಸ್ತುತ ದಿನವೊಂದಕ್ಕೆ 1200-1500 ಪರೀಕ್ಷೆಗಳು ನಡೆಯುತ್ತಿವೆ. ಆದರೆ ನಿತ್ಯ ಸರಾಸರಿ 10-15 ಪಾಸಿಟಿವ್‌ ಪ್ರಕರಣಗಳಷ್ಟೇ ವರದಿ ಆಗುತ್ತಿವೆ.
ಗುಣಮುಖರಾಗುವವರ ಸಂಖ್ಯೆ ಹೆಚ್ಚಿದ್ದು, ಆಸ್ಪತ್ರೆಗಳಲ್ಲಿನ ಹಾಸಿಗೆಗಳು ಖಾಲಿಯಾಗಿಯೇ ಉಳಿದಿವೆ. ಇದರಿಂದಾಗಿ ಆರೋಗ್ಯ ಇಲಾಖೆಯ ಮೇಲಿದ್ದ ಒತ್ತಡ ಕಡಿಮೆ ಆಗಿದೆ. ಶುಕ್ರವಾರ ಜಿಲ್ಲೆಯಲ್ಲಿ 12 ಪ್ರಕರಣಗಳಷ್ಟೇ ದೃಢಪಟ್ಟಿವೆ.

ಅಂಕಿ ಅಂಶ- 1
63-ಜಿಲ್ಲೆಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು
4-ಸಮುದಾಯ ಆರೋಗ್ಯ ಕೇಂದ್ರಗಳು
3-ತಾಲ್ಲೂಕು ಆಸ್ಪತ್ರೆ
1-ಜಿಲ್ಲಾ ಆಸ್ಪತ್ರೆ

ಅಂಕಿ-ಅಂಶ 2
ಕೋವಿಡ್‌ ಮಾಹಿತಿ

1,05,473-ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾದವರು
7551- ಸೋಂಕು ದೃಢಪಟ್ಟವರು
7380-ಸೋಂಕಿನಿಂದ ಗುಣಮುಖ ಆದವರು
96- ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರು

ಕೋವಿಡ್‌ ಲಸಿಕೆ ಸಂಗ್ರಹಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ಆದ್ಯತೆ ಸಿಗಲಿದೆ
-ಡಾ. ನಿರಂಜನ್‌
ಡಿಎಚ್‌ಒ, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT