ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರ್ಸರಿ ಮಹಿಳೆಯರಿಗೆ ಲಾಭ ಹಂಚಿಕೆ

Last Updated 8 ಜೂನ್ 2022, 2:38 IST
ಅಕ್ಷರ ಗಾತ್ರ

ಚನ್ನಪಟ್ಟಣ: ‘ನರ್ಸರಿ ಮಾಡಿದಂತಹ ಮಹಿಳೆಯರಿಗೆ ಕೂಲಿ ಮಾತ್ರ ಸಿಗುವಂತಾಗಬಾರದು. ಲಾಭದ ಸಮಾನ ಹಂಚಿಕೆಯಾಗಬೇಕು’ ಎಂದು ರಾಜ್ಯ ಆಯುಕ್ತಾಲಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ತೋಟಗಾರಿಕೆ ಜಂಟಿ ನಿರ್ದೇಶಕ ದಿಡ್ಡಿಮನಿ ಸೂಚಿಸಿದರು.

ತಾಲ್ಲೂಕಿನ ತಗಚಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಸ್ವಸಹಾಯ ಸಂಘದ ಮಹಿಳೆಯರು ಅಭಿವೃದ್ಧಿಪಡಿಸುತ್ತಿರುವ ನರ್ಸರಿ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಮಹಿಳೆಯರೊಂದಿಗೆ ಸಂವಾದ ನಡೆಸಿದ ಬಳಿಕ ಅವರು ಮಾತನಾಡಿದರು.

ನರ್ಸರಿಗೆ ಬಳಸಿಕೊಂಡಿರುವ ಭೂಮಿಯ ಬಾಡಿಗೆ ಕೊಟ್ಟು ನಂತರ ಉಳಿದ ಲಾಭವನ್ನು ನರ್ಸರಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಸಮಾನವಾಗಿ ಹಂಚಬೇಕು ಎಂದರು.

ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಪೂರಕವಾಗಿ ಸಂಜೀವಿನಿ ಒಕ್ಕೂಟದ ಮಹಿಳೆಯರನ್ನು ಒಗ್ಗೂಡಿಸಬೇಕು. ನರೇಗಾ ಯೋಜನೆಯಡಿ ನರ್ಸರಿ ಬೆಳೆಸಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಹಿಳೆಯರ ಅಭಿವೃದ್ಧಿಯಾಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಉತ್ತಮ ಬೆಳವಣಿಗೆ. ಇದು ಇತರೆ ಮಹಿಳೆಯರಿಗೂ ಮಾರ್ಗದರ್ಶನವಾಗಬೇಕು ಎಂದು ಸಲಹೆ ನೀಡಿದರು.

ತೋಟಗಾರಿಕೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಜಂಟಿ ನಿರ್ದೇಶಕ ತ್ಯಾಗರಾಜ್ ಮಾತನಾಡಿ, ಮಳೆಗಾಲದಲ್ಲಿ ಪಾಲಿಥಿನ್ ಶೀಟ್ ಉಪಯೋಗಿಸಿಕೊಂಡು ನರ್ಸರಿ ಗಿಡಗಳಿಗೆ ಯಾವುದೇ ತೊಂದರೆಯಾಗದಂತೆ ನೆರಳಿನ ಪರದೆ ನಿರ್ಮಾಣ ಮಾಡಿಕೊಳ್ಳಬೇಕು. ಸಾವಯವ ಗೊಬ್ಬರ ಉಪಯೋಗಿಸಿ ನರ್ಸರಿ ಗಿಡಗಳನ್ನು ಪೋಷಿಸಬೇಕು ಎಂದು ಕಿವಿಮಾತು ಹೇಳಿದರು.

ಇಬ್ಬರೂ ಅಧಿಕಾರಿಗಳು ತಗಚಗೆರೆ ಗ್ರಾ.ಪಂ. ವ್ಯಾಪ್ತಿಯ ಅನುಷ್ಠಾನ ಇಲಾಖೆಯ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ವಿರುಪಾಕ್ಷಿಪುರ ಗ್ರಾ.ಪಂ. ವ್ಯಾಪ್ತಿಯ ತಿಮ್ಮಪ್ಪ ಸ್ವಸಹಾಯ ಗುಂಪಿನ ಮಹಿಳೆಯರಿಂದ ನರೇಗಾ ಯೋಜನೆಯಡಿ ನಿರ್ಮಾಣ ಮಾಡಲಾದ ನರ್ಸರಿಯನ್ನು ಉದ್ಘಾಟಿಸಿದರು.

ತಾ.ಪಂ. ಇಒ ಚಂದ್ರು, ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಸಿದ್ದಲಿಂಗಯ್ಯ, ಜಿ.ಪಂ. ಸಹಾಯಕ ನಿರ್ದೇಶಕ ಲೋಕೇಶ್, ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಎಂ.ಆರ್. ಧನ್ಯಶ್ರೀ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎಚ್.ಆರ್. ವಿವೇಕ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರು, ಚನ್ನಪಟ್ಟಣ ತಾಲ್ಲೂಕಿನ ಅನುಷ್ಠಾನ ಇಲಾಖೆ ಅಧಿಕಾರಿಗಳು, ಗ್ರಾ.ಪಂ. ಪಿಡಿಒಗಳು, ತೋಟಗಾರಿಕೆ ತಾಂತ್ರಿಕ ಸಹಾಯಕರು, ಜಿಲ್ಲಾ ಐಇಸಿ ಸಂಯೋಜಕರು, ಸಂಜೀವಿನಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT