ಮಂಗಳವಾರ, ಸೆಪ್ಟೆಂಬರ್ 17, 2019
27 °C
ಶಿವನಹಳ್ಳಿ, ತುಂಗಣಿ ಜಿ.ಪಂ. ಕ್ಷೇತ್ರ ವತಿಯಿಂದ ಡಿಕೆಶಿ ಬೆಂಬಲಿಸಿ ಪ್ರತಿಭಟನೆ

‘ಕಾನೂನು ಪ್ರಕಾರ ಆಸ್ತಿ ಸಂಪಾದನೆ ತಪ್ಪಲ್ಲ’

Published:
Updated:
Prajavani

ಕನಕಪುರ: ‘ಯಾವುದೇ ತಪ್ಪು ಮಾಡದಿದ್ದರೂ ಜಾರಿ ನಿರ್ದೇಶನಾಲಯ ವಿಚಾರಣೆ ನೆಪದಲ್ಲಿ ಡಿ.ಕೆ.ಶಿವಕುಮಾರ್‌ ಅವರನ್ನು ಅಕ್ರಮವಾಗಿ ಬಂಧಿಸಿ ಕಿರುಕುಳ ನೀಡುತ್ತಿದೆ’ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಕೃಷ್ಣಮೂರ್ತಿ ಆರೋಪಿಸಿದರು.

ಇಲ್ಲಿನ ನಗರಸಭೆ ಕಾರ್ಯಾಲಯದ ಮುಂಭಾಗದಲ್ಲಿ ಶಿವನಹಳ್ಳಿ ಮತ್ತು ತುಂಗಣಿ ಜಿಲ್ಲಾ ಪಂಚಾಯಿತಿ ವತಿಯಿಂದ ಡಿ.ಕೆ.ಶಿವಕುಮಾರ್‌ ಬೆಂಬಲಿಸಿ ಗುರುವಾರ ನಡೆದ ಪ್ರತಿಭಟನಾ ಧರಣಿ ನೇತೃತ್ವ ವಹಿಸಿ ಮಾತನಾಡಿದರು.

ಶಿವಕುಮಾರ್‌ ಕೊಟ್ಟ ಜವಾಬ್ದಾರಿಯಂತೆ ಗುಜರಾತ್‌ನ ರಾಜ್ಯಸಭಾ ಚುನಾವಣೆಯಲ್ಲಿ ಅಮಿತ್‌ ಶಾ ಅವರಿಗೆ ವಿರುದ್ಧವಾಗಿ ನಡೆದುಕೊಂಡರು. ಅವರು ತೋರಿದ ಆಸೆ ಆಮಿಷಗಳಿಗೆ ಒಳಗಾಗದೆ ಕಾಂಗ್ರೆಸ್‌ನಲ್ಲೇ ಉಳಿದು ಪಕ್ಷಕ್ಕೆ ಗೆಲುವು ತಂದುಕೊಟ್ಟರು. ಸೋಲಿನ ಹತಾಶೆಯಿಂದ ಅಮಿತ್‌ ಶಾ ಸೇಡಿನ ಪ್ರತಿಕಾರ ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಅದಕ್ಕೆ ಅವಕಾಶ ಕೊಡದ ಶಿವಕುಮಾರ್‌ ಜೆಡಿಎಸ್‌ –ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವಂತೆ ಮಾಡಿದರು. ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸಿದಾಗ ಅದಕ್ಕೂ ಅವಕಾಶ ಕೊಡದೆ ಹೋರಾಟ ನಡೆಸಿದರು. ಆ ಕಾರಣದಿಂದಲೇ ಶಿವಕುಮಾರ್‌ ಅವರನ್ನು ಬಂಧಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಪುರುಷೋತ್ತಮ್‌ ಮಾತನಾಡಿ, ‘ರಾಜಕೀಯ ಹುನ್ನಾರದಿಂದ ಶಿವಕುಮಾರ್‌ ಬಂಧಿಸಿರುವುದು ಇಡೀ ದೇಶದ ಜನರಿಗೆ ಗೊತ್ತಿದೆ. ರಾಜ್ಯದ ಜನರು  ಅವರ ಬೆಂಬಲಕ್ಕೆ ನಿಂತಿದ್ದಾರೆ. ಬುಧವಾರ ಬೆಂಗಳೂರಿನಲ್ಲಿ ನಡೆದ 'ರಾಜಭವನ ಚಲೋ' ಇದಕ್ಕೆ ನಿದರ್ಶನ’ ಎಂದು ಹೇಳಿದರು.

‘ತಾಲ್ಲೂಕಿನ ಜನರು ಶಿವಕುಮಾರ್‌ ಮೇಲಿನ ಅಭಿಮಾನದಿಂದ 9 ದಿನಗಳಿಂದ ನಿರಂತರವಾಗಿ ಪ್ರತಿಭಟನಾ ಧರಣಿ ನಡೆಸುತ್ತಿದ್ದಾರೆ. ಈ ಪ್ರತಿಭಟನೆ ಶಿವಕುಮಾರ್‌ ಮೇಲಿನ ಪ್ರೀತಿಯಿಂದ ನಡೆಯುತ್ತಿದೆ. ಅವರು ಆರೋಪ ಮುಕ್ತರಾಗಿ ಹೊರಬರುವ ತನಕ ಈ ಹೋರಾಟ ನಿಲ್ಲುವುದಿಲ್ಲ’ ಎಂದು ಎಚ್ಚರಿಸಿದರು.

ನಗರಸಭೆ ಸದಸ್ಯ ರಾಮಚಂದ್ರ ಮಾತನಾಡಿ, ‘ದೇಶದ ಕಾನೂನು ಪ್ರಕಾರ ಆಸ್ತಿ ಸಂಪಾದನೆ ಮಾಡುವುದು ತಪ್ಪಲ್ಲ. ಅದೇ ರೀತಿ ತಂದೆ –ತಾಯಿ ಆಸ್ತಿ ಅವರ ಮಕ್ಕಳಿಗೆ ಕಾನೂನು ಬದ್ಧವಾಗಿ ಸೇರುತ್ತದೆ. ಅದರಂತೆ ಶಿವಕುಮಾರ್‌ ಕಾನೂನು ಬದ್ಧವಾಗಿ ಆಸ್ತಿ ಸಂಪಾದನೆ ಮಾಡಿ ಅದನ್ನು ಘೋಷಣೆ ಮಾಡಿಕೊಂಡಿದ್ದಾರೆ’ ಎಂದರು.

ಜಿಲ್ಲಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಡಿ.ವಿಜಯದೇವು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್‌ಕುಮಾರ್‌, ಪಂಚಾಯಿತಿ ಸದಸ್ಯೆ ಭಾಗ್ಯಶಾಂತರಾಜ್‌, ತಾಲ್ಲೂಕು ಪಂಚಾಯಿತಿ ಸದಸ್ಯೆ ಧನಲಕ್ಷ್ಮಿ ಚಂದ್ರನಾಯ್ಕ್‌, ಜಗದೀಶ್‌, ಮುಖಂಡರಾದ ಸೀನಪ್ಪ, ವೀರಪ್ಪ, ವೀರಭದ್ರಯ್ಯ, ಮಹೇಶ್‌, ರವಿ, ಸಿಲ್ಕ್‌ರವಿ, ಒರಳ್‌ಗಲ್‌ರಮೇಶ್‌, ಬಸವರಾಜು, ಬಿ.ಎಸ್‌.ದೊಡ್ಡಿರವಿ, ಗಾಣಾಳ್‌ ವಿನಯ್‌, ಕಾಳಪ್ಪ, ಶಂಭಣ್ಣ, ಮುತ್ತರಾಜು, ತಮ್ಮಯ್ಯ, ಹರೀಶ್‌, ಮಧು, ಮೂರ್ತಿ, ರಂಗಸ್ವಾಮಿ, ಪಟೇಲ್‌ ನಾಗರಾಜು, ನಟೇಶ್‌ ಇದ್ದರು.

Post Comments (+)