ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 5 ಸಾವಿರ ಕೋಟಿಗೆ ಪ್ರಸ್ತಾವ

ಪ್ರವಾಸೋದ್ಯಮ ಅಭಿವೃದ್ಧಿಗೆ ಸಿ.ಎಂ ಭರವಸೆ: ಸಚಿವ ಸಿ.ಪಿ. ಯೋಗೇಶ್ವರ್‌
Last Updated 15 ಫೆಬ್ರುವರಿ 2021, 5:31 IST
ಅಕ್ಷರ ಗಾತ್ರ

ಚನ್ನಪಟ್ಟಣ: ‘ಚನ್ನಪಟ್ಟಣ ನನ್ನ ಕಾರ್ಯಕ್ಷೇತ್ರ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ಅದರಲ್ಲಿ ಯಾವುದೇ ಸಂಶಯ ಬೇಡ’ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಸ್ಪಷ್ಟಪಡಿಸಿದರು.

ಪಟ್ಟಣದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಗೆ ಹುಣಸೂರಿನಲ್ಲಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಮಾತು ಸತ್ಯಕ್ಕೆ ದೂರ. ಅಲ್ಲಿಗೆ ನಾನು ಏತಕ್ಕೆ ಹೋಗಲಿ. ಈ ಕ್ಷೇತ್ರದಲ್ಲೇ ಇರುತ್ತೇನೆ’ ಎಂದು ಹೇಳಿದರು.

ರಾಜ್ಯ ಬಜೆಟ್‍ನಲ್ಲಿ ಪ್ರವಾಸೋದ್ಯಮ ಇಲಾಖೆಗೆ ₹ 5 ಸಾವಿರ ಕೋಟಿ ಮೀಸಲಿಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಸಚಿವರೊಟ್ಟಿಗೂ ಭೇಟಿ ಮಾಡಿ ರಾಜ್ಯದ ಪ್ರವಾಸೋದ್ಯಮ ಅಭಿವೃದ್ದಿಗೆ ಅನುದಾನ ನೀಡುವಂತೆ ಮನವಿ ಮಾಡಿದ್ದೇನೆ. ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಜಿಲ್ಲೆಯ ಪ್ರವಾಸೋದ್ಯಮ ಸ್ಥಳಗಳನ್ನು ಅಭಿವೃದ್ಧಿಪಡಿಸುವ ವಿಚಾರದಲ್ಲಿ ಮುಂದಿನ ವಾರ ಅಧಿಕಾರಿಗಳ ಸಭೆ ಕರೆದು ಎಲ್ಲಿ ಏನೇನು ಮಾಡಬಹುದು ಎಂಬ ಬಗ್ಗೆ ರೂಪರೇಷೆ ರಚಿಸಲಾಗುತ್ತದೆ. ಸಾರ್ವಜನಿಕರಿಗೂ ಸಲಹೆ ನೀಡಲು ಅವಕಾಶ ಮಾಡಿಕೊಡಲಾಗುವುದು. ಜಿಲ್ಲೆಯಲ್ಲಿ ಪ್ರಮುಖವಾಗಿ ಬೆಟ್ಟಗಳು, ಜಲಾಶಯಗಳನ್ನು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ ಎಂದು ಯೋಗೇಶ್ವರ್ ತಿಳಿಸಿದರು.

ಕೇಂದ್ರ ಬಜೆಟ್‍ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜ್ಯದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಪ್ರಮುಖವಾಗಿ ರಸ್ತೆಗಳು, ಮೆಟ್ರೊ 2ನೇ ಹಂತ, ಮೂಲಸೌಕರ್ಯ ಕಲ್ಪಿಸಲು ಭರಪೂರ ಅನುದಾನ ಸಿಕ್ಕಿದೆ. ಕೊರೊನಾ ದೇಶವನ್ನು ಆರ್ಥಿಕವಾಗಿ ಜರ್ಜರಿತವಾಗಿಸಿದ್ದರೂ ಕೇಂದ್ರದ ಕಟ್ಟುನಿಟ್ಟಿನ ಆಡಳಿತ ದೇಶವನ್ನು ದಿವಾಳಿಯಾಗುವತ್ತ ದೂಡದೆ ಸಮರ್ಥವಾಗಿ ನಿಭಾಯಿಸುತ್ತಿದೆ ಎಂದು ಹೇಳಿದರು.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯ ಬದಲಾವಣೆ ಮೇಲೆ ನಿಂತಿದೆ. ದೇಶ ವಿದ್ಯುತ್ ಸ್ವಾವಲಂಬನೆ ಸಾಧಿಸಿದೆ. ವಿದ್ಯುತ್ ಚಾಲಿತ ವಾಹನಗಳ ಹೆಚ್ಚಿನ ಬಳಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ. ಜನತೆ ವಿದ್ಯುತ್ ಚಾಲಿತ ವಾಹನಗಳ ಬಳಕೆ ಮಾಡಿದರೆ ಪೆಟ್ರೋಲ್ ಬೆಲೆ ತಾನೇ ಇಳಿಕೆಯಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲುವಾಡಿ ದೇವರಾಜು, ತಾ.ಪಂ ಅಧ್ಯಕ್ಷ ರಾಜಣ್ಣ, ಮುಖಂಡರಾದ ಮಲವೇಗೌಡ, ಕೃಷ್ಣಪ್ಪ, ವಿ.ಬಿ. ಚಂದ್ರು, ವಕೀಲ ಎಂ.ಕೆ. ನಿಂಗಪ್ಪ, ಅಕ್ಕೂರು ಗ್ರಾ.ಪಂ ಅಧ್ಯಕ್ಷ ಅಶೋಕ್, ಜೆ. ಬ್ಯಾಡರಹಳ್ಳಿ ಗ್ರಾ.ಪಂ ಅಧ್ಯಕ್ಷ ರಾಮಚಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT