ಚನ್ನಪಟ್ಟಣ: ತಾಲ್ಲೂಕಿನ ಸಮಾಜ ಸೇವಕ ಹಾಗೂ ಉದ್ಯಮಿ ಕೆ.ಟಿ. ಕೃಷ್ಣ ಅವರಿಗೆ ಕೇಂದ್ರ ವಲಯದ ಐಜಿಪಿ ರವಿಕಾಂತೇಗೌಡ ಹಾಗೂ ಡಿವೈಎಸ್ಪಿ ಯು.ಡಿ. ಕೃಷ್ಣಕುಮಾರ್ ಅವರು, ಅಧಿಕಾರ ದುರ್ಬಳಕೆ ಮಾಡಿಕೊಂಡು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ವಿವಿಧ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಗಾಂಧಿ ಭವನದಿಂದ ತಾಲ್ಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ತಾಲೂಕು ಕಚೇರಿ ಬಳಿ ಜಮಾಯಿಸಿ ಪ್ರತಿಭಟಿಸಿದರು. ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಸರ್ಕಾರ ಅವರ ವಿರುದ್ಧ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೃಷ್ಣ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿ ಶೀಟರ್ ಬೆಮೆಲ್ ಕಾಂತರಾಜು ಮತ್ತು ಕೆಲ ಅಧಿಕಾರಿಗಳನ್ನು ಬಳಕೆ ಮಾಡಿಕೊಂಡು, ತೊಂದರೆ ನೀಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕಾಂತರಾಜುನನ್ನು ಬಂಧಿಸಿ ವಿಚಾರಣೆ ನಡೆಸಬೇಕು. ಡಿವೈಎಸ್ಪಿ ಮತ್ತು ಐಜಿಪಿ ಅವರ ಪಾತ್ರದ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಸಿ. ಜಯಮುತ್ತು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ನಗರಸಭೆ ಸದಸ್ಯರಾದ ಮಂಜುನಾಥ್, ಸತೀಶ್ ಬಾಬು, ಮುಖಂಡರಾದ ಮಹರೀಶ್, ಜಯಕುಮಾರ್, ಕಸ್ತೂರಿ ಕನ್ನಡ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್ ಗೌಡ ಹಾಗೂ ಇತರರು ಇದ್ದರು.
ಒತ್ತಡ ಹೇರುವ ತಂತ್ರ:
ಐಜಿಪಿ ಪ್ರತಿಭಟನೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೇಂದ್ರ ವಲಯದ ಐಜಿಪಿ ಬಿ.ಆರ್. ರವಿಕಾಂತೇಗೌಡ ‘ಯಾವುದೇ ದೂರು ಬಂದಾಗ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ ಎಂದು ಹೇಳುತ್ತೇವೆ. ಇದರಲ್ಲಿ ವೈಯಕ್ತಿಕ ದ್ವೇಷ ಏನೂ ಇಲ್ಲ. ಕೆ.ಟಿ. ಕೃಷ್ಣ ವಿರುದ್ಧ 2011ರಿಂದಲೂ ಜೀವ ಬೆದರಿಕೆ ಸೇರಿದಂತೆ ಹಲವು ದೂರುಗಳಿವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಲಾಗುತ್ತಿದೆ. ನಮ್ಮ ಮೇಲೆ ಒತ್ತಡ ತರಲು ಆರೋಪಿ ಪ್ರತಿಭಟನೆಯ ತಂತ್ರ ಅನುಸುರಿಸುತ್ತಿದ್ದಾರೆ. ಅಂತಿಮವಾಗಿ ಕೋರ್ಟ್ ನ್ಯಾಯವನ್ನು ನಿರ್ಧರಿಸುತ್ತದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.