ಕಂದಾಯ ಅಧಿಕಾರಿ ವಿರುದ್ಧ ಪ್ರತಿಭಟನೆ

ಸೋಮವಾರ, ಮಾರ್ಚ್ 25, 2019
28 °C

ಕಂದಾಯ ಅಧಿಕಾರಿ ವಿರುದ್ಧ ಪ್ರತಿಭಟನೆ

Published:
Updated:
Prajavani

ಮಾಗಡಿ: ‘ಪುರಸಭೆ ಕಚೇರಿ ಕಂದಾಯ ಅಧಿಕಾರಿ ಶ್ರೀನಿವಾಸ್‌ ಅವರನ್ನು ತಕ್ಷಣ ಅಮಾನತುಗೊಳಿಸಿ, ಅಕ್ರಮ ಖಾತೆಗಳ ಬಗ್ಗೆ ತನಿಖೆ ನಡೆಸಬೇಕು’ ಎಂದು ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ಸಂಘಟನಾ ಸಂಚಾಲಕ ಪಿ.ವಿ.ಸೀತಾರಾಮ್‌ ಆಗ್ರಹಿಸಿದರು.

ಪುರಸಭೆ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.

‘ಪುರಸಭೆ ಸದಸ್ಯರ ಮಾತಿಗೆ ಕವಡೆ ಕಿಮ್ಮತ್ತು ನೀಡುತ್ತಿಲ್ಲ. ಸಾರ್ವಜನಿಕರ ಕೆಲಸ ಮಾಡಿಕೊಡಲು ವಿಳಂಬ ಮಾಡುತ್ತಿದ್ದಾರೆ. ಐಡಿಎಸ್‌ಎಂಟಿ ಮತ್ತು ಶ್ರೀನಿಧಿ ಬಡಾವಣೆಗಳಲ್ಲಿ ಅಕ್ರಮ ಖಾತೆಗಳನ್ನು ಮಾಡಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಪ್ರಗತಿಪರ ಹೋರಾಟಗಾರ ಕಲ್ಕೆರೆ ಶಿವಣ್ಣ ಮಾತನಾಡಿ, ‘ಶ್ರೀನಿವಾಸ್‌ ಅವರು ಕನ್ನಡ ಮಾತೃಭಾಷೆ ವಿರೋಧಿ. ಕಚೇರಿಗೆ ಬಂದವರು ತೆಲುಗಿನಲ್ಲಿ ಮಾತನಾಡಿದರೆ ಮಾತ್ರ ಅವರ ಕೆಲಸ ಮಾಡಿಕೊಡುತ್ತಾರೆ’ ಎಂದು ಆರೋಪಿಸಿದರು.

ಕಾಂಗ್ರೆಸ್‌ ಮುಖಂಡ ಸಿ.ಜಯರಾಮು ಮಾತನಾಡಿ, ‘ಕಚೇರಿಗೆ ಬರುವ ಸಾರ್ವಜನಿಕರನ್ನು ಕೀಳಾಗಿ ಕಾಣುತ್ತಾರೆ. ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಸಹವರ್ತಿಯೊಬ್ಬರು ಖಾತೆ ಬದಲಾವಣೆಗೆ ಮನವಿ ಮಾಡಿ ಎರಡು ವರ್ಷ ಕಳೆದರೂ ಖಾತೆ ಮಾಡಿಲ್ಲ. ಸಾರ್ವಜನಿಕರ ಸೇವೆ ಮಾಡುವಲ್ಲಿ ವಾಮಮಾರ್ಗ ಹಿಡಿದಿರುವ ಕಂದಾಯ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದರು.

ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ದೊಡ್ಡಯ್ಯ, ಜೀವಿಕ ಸಂಘಟನೆ ಸಂಚಾಲಕ ಗಂಗಹನುಮಯ್ಯ, ಪುರಸಭೆ ಸದಸ್ಯರಾದ ರಿಯಾಜ್‌ ಅಹಮದ್‌, ಮೌಲ, ಸುನಿತಾ ನಾಗರಾಜ್‌, ಬಿಜೆಪಿ ಮುಖಂಡ ಗೋಪಾಲಕೃಷ್ಣ, ಹೋರಾಟಗಾರರಾದ ಕೊಟ್ಟಗಾರಹಳ್ಳಿ ಉಮೇಶ್‌, ಗೊರವನ ಪಾಳ್ಯದ ಹರೀಶ್‌, ಹೊಂಬಾಳಮ್ಮನಪೇಟೆ ಶಂಕರ್‌, ಕನ್ನಡ ಪರ ಹೋರಾಟಗಾರ ಎಂ.ಆರ್‌.ಬಸವರಾಜು, ಹೊಸಪೇಟೆ ವಿಶ್ವನಾಥ ಮಾತನಾಡಿದರು. ಪುರಸಭೆ ಅಧಿಕಾರಿ ಪುನಿತ್‌ ಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !