ರಾಮನಗರ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಟೋಲ್ ದರ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ, ಜಿಲ್ಲೆಯ ಕುಂಬಳಗೋಡು ಸಮೀಪದ ಕಣಮಿಣಕಿ ಟೋಲ್ ಪ್ಲಾಜಾ ಬಳಿ, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ಟೋಲ್ ಪ್ಲಾಜಾ ಬಳಿ ಜಮಾಯಿಸಿದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ಕರುನಾಡ ಸೇವಕರು ಸಂಘಟನೆ, ಕನ್ನಡಿಗರ ರಕ್ಷಣಾ ವೇದಿಕೆ, ಕರ್ನಾಟಕ ಯುವ ಸೇನೆ, ಕಾರ್ಮಿಕರ ಪಡೆ ಸೇರಿದಂತೆ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ತಮಟೆ–ಹಲಗಿ ಬಾರಿಸುತ್ತಾ ಪ್ರಾಧಿಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹೆದ್ದಾರಿಯಲ್ಲಿ ವಾಹನಗಳ ಸವಾರರಿಗೆ ಹೊರೆಯಾಗಿರುವ ಟೋಲ್ ದರವನ್ನು ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು. ಕೆಲವರು ಹೆದ್ದಾರಿಯಲ್ಲಿ ಮಲಗಿ ಆಕ್ರೋಶ ಹೊರ ಹಾಕಿದರು.
ಹೆದ್ದಾರಿಯಲ್ಲಿ ಹೋಟೆಲ್, ದೂರವಾಣಿ ವ್ಯವಸ್ಥೆ, ಪಂಕ್ಚರ್ ಶಾಪ್, ಪೆಟ್ರೋಲ್ ಬಂಕ್ , ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಸೌಕರ್ಯ ಕಲ್ಪಿಸಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಹೆದ್ದಾರಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿಲ್ಲ. ಅಪಘಾತವಾದರೆ ತಕ್ಷಣ ಸ್ಪಂದಿಸಲು ಆಂಬುಲೆನ್ಸ್ ವ್ಯವಸ್ಥೆ ಮಾಡಿಲ್ಲ. ಹೆದ್ದಾರಿಗೆ ಜಮೀನು ನೀಡಿರುವ ರೈತರು ಹಾಗೂ ಸ್ಥಳೀಯರಿಂದ ಟೋಲ್‌ನಲ್ಲಿ ಶುಲ್ಕ ಪಡೆಯದೇ ಉಚಿತವಾಗಿ ಸಂಚರಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಪೊಲೀಸ್ ವಶಕ್ಕೆ: ಪ್ರತಿಭಟನಾನಿರತ ಕಾರ್ಯಕರ್ತರು ರಸ್ತೆ ತಡೆಗೆ ಮುಂದಾದಾಗ, ಪೊಲೀಸರು ಅದಕ್ಕೆ ತಡೆಯೊಡ್ಡಿದರು. ಆಗ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಪಟ್ಟು ಕಾರ್ಯಕರ್ತರು ರಸ್ತೆ ತಡೆಗೆ ಮುಂದಾದಾಗ ಪೊಲೀಸರು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಸು.ಚಿ. ನೀಲೇಶ್ ಗೌಡ, ಕರುನಾಡ ವಿಜಯ ಸೇನೆ ರಾಜ್ಯಾಧ್ಯಕ್ಷ ದಿಲೀಪ್, ಕರುನಾಡ ಸೇವಕರು ಸಂಘಟನೆ ರಾಜ್ಯಾಧ್ಯಕ್ಷ ಲೋಕೇಶ್ ಗೌಡ, ಕನ್ನಡಿಗರ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರಕಾಶ್, ಕರ್ನಾಟಕ ಯುವ ಸೇನೆ ರಾಜ್ಯಾಧ್ಯಕ್ಷ ಸುನೀಲ್ ಸೇರಿದಂತೆ 20ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದರು.
ಪೊಲೀಸ್ ವಾಹನದಲ್ಲಿ ಎಲ್ಲರನ್ನೂ ಕುಂಬಳಗೋಡು ಪೊಲೀಸ್ ಠಾಣೆಗೆ ಕರೆದೊಯ್ದುರು. ಆದರೂ, ಹಲವು ಕಾರ್ಯಕರ್ತರು ಟೋಲ್ ಬಳಿ ಪ್ರತಿಭಟನೆ ಮುಂದುವರಿಸಿದರು. ಕೆಲ ಹೊತ್ತಿನ ನಂತರ ಪೊಲೀಸರು ವಶಕ್ಕೆ ಪಡೆದಿದ್ದ ಹೋರಾಟಗಾರರನ್ನು ಬಿಟ್ಟು ಕಳಿಸಿದರು. ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಮನವಿ ಸಲ್ಲಿಸಿದರು.
ಕಾರ್ಮಿಕರ ಪಡೆ ರಾಜ್ಯಾಧ್ಯಕ್ಷ ಚೇತನ್, ಕಾರ್ಮಿಕರ ಪರಿಷತ್ ರಾಜ್ಯಾಧ್ಯಕ್ಷ ರವಿ ಶೆಟ್ಟಿ ಬೈಂದೂರು, ಕರ್ನಾಟಕ ಜನ ಸೇನೆಯ ನರಸಿಂಹಯ್ಯ, ಕನ್ನಡ ಚಳವಳಿ ಹೋರಾಟಗಾರ ಪುಟ್ಟೇಗೌಡ, ಹೋರಾಟಗಾರರಾದ ಲೋಕೇಶ್ ಗೌಡ, ವಿಜಿಕುಮಾರ್, ಶೀಲಾ, ಚೈತ್ರ ಶೆಟ್ಟಿ, ಸುನೀತಾ, ಮಮತಾ, ಶಿವರಾಜ್ ಗೌಡ, ಲಾವಣ್ಯ ಅರಸು, ಪದ್ಮಾ, ರಾಜು ಲಗ್ಗೆರೆ, ರಶ್ಮಿ ಮುಂತಾದವರು ಇದ್ದರು.
ಹೆದ್ದಾರಿ ಪ್ರಾಧಿಕಾರ, ಸರ್ಕಾರದ ವಿರುದ್ಧ ಆಕ್ರೋಶ ರಸ್ತೆಯಲ್ಲಿ ಮಲಗಿ ಆಕ್ರೋಶ ಹೊರಹಾಕಿದ ಕಾರ್ಯಕರ್ತರು 20ಕ್ಕೂ ಹೆಚ್ಚು ಕಾರ್ಯಕರ್ತರು ಪೊಲೀಸ್ ವಶಕ್ಕೆ
ಹದಿನೈದು ದಿನ ಗಡುವು ಪ್ರತಿಭಟನಾ ಸ್ಥಳಕ್ಕೆ ಬಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಮನವಿ ಸಲ್ಲಿಸಿದ ಕನ್ನಡಪರ ಸಂಘಟನೆಗಳ ಮುಖಂಡರು ತಮ್ಮ ಬೇಡಿಕೆಗಳ ಈಡೇರಿಕೆಗೆ 15 ದಿನಗಳ ಗಡುವು ನೀಡಿದರು. ಅಷ್ಟರೊಳಗೆ ಟೋಲ್ ದರ ಇಳಿಕೆ ಹಾಗೂ ರಸ್ತೆಯಲ್ಲಿ ಮೂಲಸೌಕರ್ಯ ಕಲ್ಪಿಸಬೇಖು. ಇಲ್ಲದಿದ್ದರೆ ಮತ್ತೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಅತ್ಯಂತ ಅವೈಜ್ಞಾನಿಕವಾಗಿ ಹೆದ್ದಾರಿಯನ್ನು ನಿರ್ಮಿಸಲಾಗಿದೆ. ಸರಿಯಾಗಿ ನಿರ್ವಹಣೆ ಕೂಡ ಮಾಡುತ್ತಿಲ್ಲ. ಆದರೂ ಶೇ 22ರಷ್ಟು ಟೋಲ್ ದರ ಹೆಚ್ಚಳ ಮಾಡಿರುವುದು ಖಂಡನೀಯ. ಟೋಲ್ ದರ ಹೆಚ್ಚಳವು ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸವಾರರಿಗೆ ಭಾರೀ ಹೊರೆಯಾಗಲಿದೆ. ಹೆದ್ದಾರಿಯನ್ನು ಸೂಕ್ತವಾಗಿ ನಿರ್ವಹಣೆ ಮಾಡಬೇಕು. ಅಪಘಾತ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಹೆದ್ದಾರಿಯಲ್ಲಿ ಪ್ರಯಾಣದ ಮಧ್ಯದಲ್ಲಿ ಪ್ರತಿ 30 ಕಿ.ಮೀ. ದೂರಕ್ಕೆ ವಿಶ್ರಾಂತಿಗಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಫಾಸ್ಟ್ಯಾಗ್ ಇಲ್ಲದವರ ಬಳಿ ದುಪ್ಪಟ್ಟು ಶುಲ್ಕ ವಸೂಲಿ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.