ಶುಕ್ರವಾರ, ಡಿಸೆಂಬರ್ 13, 2019
24 °C

ಉಮಾಶಂಕರ್ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ಸಂವಿಧಾನವನ್ನು ಡಾ.ಬಿ.ಆರ್ ಅಂಬೇಡ್ಕರ್ ರಚಿಸಿಲ್ಲ ಎಂಬ ಕೈಪಿಡಿ ಬಿಡುಗಡೆ ಮಾಡಿರುವ ಪ್ರೌಢಶಿಕ್ಷಣ ಇಲಾಖೆ ನಿರ್ದೇಶಕ ಉಮಾಶಂಕರ್ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿ ತಾಲ್ಲೂಕು ದಲಿತ ಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಗುರುವಾರ ಪಟ್ಟಣದ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.

ಉಮಾಶಂಕರ್ ವಿರುದ್ಧ ಕ್ರಮಕೈಗೊಳ್ಳದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡ ತಮ್ಮ ಸ್ಥಾನಕ್ಕೆ ಕೂಡಲೇ ರಾಜಿನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮುಖಂಡ ಮತ್ತೀಕೆರೆ ಹನುಮಂತಯ್ಯ ಮಾತನಾಡಿ, ಜವಾಬ್ದಾರಿ ಸ್ಥಾನದಲ್ಲಿರುವ ಶಿಕ್ಷಣ ಇಲಾಖೆ ನಿರ್ದೇಶಕರೊಬ್ಬರು ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡುವುದರ ಹಿಂದೆ ಬಿಜೆಪಿ ಹಾಗೂ ಆರ್.ಎಸ್.ಎಸ್ ಪರಿವಾರದ ಕೈವಾಡ ಇದೆ. ಸಂವಿಧಾನವನ್ನು ಹೇಗೆ ಬೇಕೆಂದರೂ ತಿರುಚಲು ಇದು ಕಥೆ ಪುಸ್ತಕ ಅಲ್ಲ ಎಂದು ಕಿಡಿಕಾರಿದರು.

ದಲಿತ ಮುಖಂಡ ಪಟ್ಲು ಗೋವಿಂದರಾಜು ಮಾತನಾಡಿ, ದೇಶದ ಸುರಕ್ಷತೆ ಹಾಗೂ ಅಭಿವೃದ್ಧಿಗೆ ಬೆಳಕು ನೀಡಿದ ಸಂವಿಧಾನದ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ನೀಡಿರುವುದು ತರವಲ್ಲ. ಇಂತಹ ನೀಚ ಕೆಲಸಕ್ಕೆ ಕೈಹಾಕಿರುವ ಶಿಕ್ಷಣ ಇಲಾಖೆ ಅಧಿಕಾರಿ, ಇದಕ್ಕೆ ಸಹಕಾರ ನೀಡಿರುವ ಸಚಿವರ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. 

ಗ್ರಾಮ ಪಂಚಾಯಿತಿ ಸದಸ್ಯ ಜಯಕಾಂತ್ ಮಾತನಾಡಿ, ಇದು ಕೇವಲ ಸಾಂಕೇತಿಕ ಪ್ರತಿಭಟನೆ. ಸರ್ಕಾರ ಈ ಕೂಡಲೇ ಉಮಾಶಂಕರ ವಿರುದ್ಧ ಕ್ರಮಕೈಗೊಂಡು, ಸಚಿವ ಸುರೇಶ್ ಕುಮಾರ್ ಅವರನ್ನು ಸಚಿವ ಸಂಪುಟದಿಂದ ಕೈಬಿಡದಿದ್ದರೆ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಯಲಿದೆ ಎಂದು ಎಚ್ಚರಿಸಿದರು.

ದಲಿತ ಸಮುದಾಯದ ಮುಖಂಡರಾದ ಕೋಟೆ ಸಿದ್ದರಾಮಣ್ಣ, ವೆಂಕಟೇಶ್, ಕೋಟೆ ಶ್ರೀನಿವಾಸ್, ಸುಮೇಧ ಕುಮಾರ್, ಜಗದೀಶ್, ಅಪ್ಪಗೆರೆ ಶ್ರೀನಿವಾಸ್, ಸುರೇಶ್ ಇದ್ದರು.

ಪ್ರತಿಕ್ರಿಯಿಸಿ (+)